ಶಾಲೆಯಿಂದ ಹೊರಗುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಕ್ರಮ ಅಗತ್ಯ: ಡಾ.ನಿರಂಜನಾರಾಧ್ಯ

Update: 2021-06-12 18:00 GMT

ಬೆಂಗಳೂರು, ಜೂ.12: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದು ಬಾಲ ಕಾರ್ಮಿಕರಾಗಿರುವ ಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ, ಆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವಾದ ಇಂದು ಹೊಸ ಸಂಕಲ್ಪ ತೊಡಬೇಕಿದೆ. ಅದರಲ್ಲೂ ಕೋವಿಡ್ ಲಾಕ್‍ಡೌನ್‍ನಿಂದ ಕಳೆದ 15ತಿಂಗಳಿಂದ ಶಾಲೆಗಳು ಮುಚ್ಚಿರುವುದರಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಆ ಮಕ್ಕಳನ್ನು ಪುನಃ ಶಾಲೆಗಳತ್ತ ಕರೆತರುವ ಕೆಲಸ ಆಗಬೇಕಿದೆ ಎಂದು ತಿಳಿಸಿದ್ದಾರೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ಸೂಕ್ತ ತರಗತಿಗೆ ದಾಖಲಿಸಿಕೊಳ್ಳುವ ಮೂಲಕ ದಾಖಲಾದ ಮಗು ತನ್ನ ಇತರ ಸಹಪಾಠಿಗಳ ಜೊತೆ ಸಮಾನವಾಗಿ ಕಲಿಯುವಂತೆ ಅನುವು ಮಾಡಿಕೊಡಬೇಕು. ಮತ್ತು ಎಂಟು ವರ್ಷಗಳ ಎಲೆಮೆಂಟರಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಲು ವಿಶೇಷ ತರಬೇತಿ ಆಯೋಜಿಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪ್ರತೀ ಗ್ರಾಮ ಪಂಚಾಯತ್, ನಗರ ಪಾಲಿಕೆ, ನಗರ ಸಭೆ, ಪುರಸಭೆಗಳು ಕಳೆದ 15 ತಿಂಗಳುಗಳಿಂದ ಶಾಲೆ ಮುಚ್ಚಿರುವ ಕಾರಣ ಜು.1, 2021  ರಂದು ಶಾಲೆ ಪ್ರಾರಂಭವಾಗುವ ಮುನ್ನ ಎಲ್ಲಾ ಮಕ್ಕಳನ್ನು ಗುರುತಿಸುವ ಕೆಲಸ ನಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ಪ್ರತೀ ಜನವಸತಿ ಪ್ರದೇಶ, ಹಳ್ಳಿ, ಹಾಡಿ, ಹಟ್ಟಿ, ವಾರ್ಡ್, ಕೊಳಗೇರಿ ಹಾಗು ಮಕ್ಕಳು ಇರಬಹುದಾದ ಎಲ್ಲಾ ಸ್ಥಳಗಳಲ್ಲಿ ಮಕ್ಕಳ ಸಮಗ್ರ ಗಣತಿಯ ಮೂಲಕ ಶಾಲೆಯಿಂದ ಹೊರಗಿರುವ ಅಥವಾ ಹೊರಗಿದ್ದು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಗುರುತಿಸಬೇಕು. ಈ ಕೆಲಸಕ್ಕೆ ಇಲಾಖೆಗಳು ಅಲ್ಲಿನ ಸ್ಥಳೀಯ ಸರಕಾರೇತರ ಸಂಸ್ಥೆಗಳು, ಸಮುದಾಯಾಧಾರಿತ ಸಂಘಟನೆಗಳು ಮತ್ತು ಆಸಕ್ತಿ ಇರುವ ಸಾರ್ವಜನಿಕರನ್ನು ತೊಡಗಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News