ಬಾಬರಿ ಮಸೀದಿ ಧ್ವಂಸ: ವಿಧಾನಪರಿಷತ್‌ನಲ್ಲಿ ಸಿದ್ದಲಿಂಗಯ್ಯ ಭಾಷಣ

Update: 2021-06-13 04:11 GMT

ನಮಗೆ ಹಿಂದೂ ಮುಸ್ಲಿಮರ ಮೂಲಭೂತ ಸಮಸ್ಯೆ ಏನು ಎಂಬುದು ಗೊತ್ತಿಲ್ಲ. ಮುಸ್ಲಿಮರ ವಿಷಯ ಹಿಂದೂಗಳಿಗೆ, ಹಿಂದೂಗಳ ವಿಷಯ ಮುಸ್ಲಿಮರಿಗೆ ಗೊತ್ತಿಲ್ಲ. ಅಂದರೆ ಪರಸ್ಪರರಲ್ಲಿ ಅಜ್ಞಾನ ಇದೆ. ಇವರು ಬೇರೆ ದೇಶದವರ ಜೊತೆ ಸೇರಿಕೊಂಡು ಏನೋ ಮಾಡುತ್ತಾರೆ ಎಂದು ನಮ್ಮ ಜನ ಯೋಚಿಸುವುದು, ಹಿಂದೂಗಳು ಮೂಲಭೂತವಾದಿಗಳಾಗಿ ಅನ್ಯಾಯ ಮಾಡುತ್ತಾರೆ ಎಂದು ಅವರು ಸಂಶಯಪಡುವುದು ನಡೆಯುತ್ತಿದೆ. ಇಂಥ ಅನುಮಾನದ ನೋಟ ಮಕ್ಕಳಲ್ಲಿ ಕೂಡ ಬಂದುಬಿಟ್ಟಿದೆ. ಇದನ್ನು ಹೋಗಲಾಡಿಸಲು ಇರುವ ದಾರಿಯೆಂದರೆ ಶಿಕ್ಷಣ ಪದ್ಧತಿಯಲ್ಲಿ ಪರಸ್ಪರ ವಿಭಿನ್ನ ಸಂಸ್ಕೃತಿಗಳ ಪರಿಚಯ ಮಾಡಿಕೊಡತಕ್ಕಂಥ ಠ್ಯಕ್ರಮವನ್ನು ರೂಪಿಸುವುದು.

ಮಾನ್ಯ ಸಭಾಪತಿಗಳೇ, ಈಗಾಗಲೇ ಮಾತನಾಡಿರುವ ಅನೇಕ ಹಿರಿಯ ಸದಸ್ಯರ ಅಭಿಪ್ರಾಯಗಳನ್ನು ಅನುಮೋದಿಸಿ ನಾನು ಮಾತನಾಡುತ್ತೇನೆ. ಡಿಸೆಂಬರ್ 6ನೆಯ ತಾರೀಕು ಸಂವಿಧಾನಕರ್ತರಾದ ಬಾಬಾಸಾಹೇಬ್ ಅಂಬೇಡ್ಕರ್‌ರವರು ಕಣ್ಣು ಮುಚ್ಚಿದ ದಿನ. ಅಂಬೇಡ್ಕರ್‌ರವರು ಕಣ್ಣು ಮುಚ್ಚಿದ ದಿನವೇ ಅವರು ಪ್ರತಿಪಾದಿಸಿದಂತಹ ಉತ್ತಮ ಮೌಲ್ಯಗಳು ಕೂಡ ಮಣ್ಣುಗೂಡಿದವು. ಇದು ತುಂಬಾ ನೋವಿನ ವಿಚಾರ, ಬಾಬರಿ ಮಸೀದಿಯನ್ನು ಕೆಡವಿದ ದುರಂತ ಏನಿದೆ ಅದನ್ನು ನಾನು ಮತಾಂಧರ, ಮನೋರೋಗಿಗಳ ವಿಕಟ ಅಟ್ಟಹಾಸವೆಂದು ತಿಳಿದುಕೊಂಡಿದ್ದೇನೆ.

ಭಕ್ತಿ ಯಾವತ್ತೂ ಕೂಡ ಸಾತ್ವಿಕತೆಯನ್ನು ಉಂಟುಮಾಡುತ್ತದೆ. ಆದರೆ ಆ ದುರಂತಕ್ಕೆ ಕಾರಣರಾದ ಸಹೋದರರ ಮನಸ್ಸಿನಲ್ಲಿ ಅಥವಾ ಮುಖದಲ್ಲಿ ಅಂತಹ ಸಾತ್ವಿಕತೆ ಕಂಡುಬರುತ್ತಿರಲಿಲ್ಲ. ಒಂದು ಮಸೀದಿಯನ್ನು ಕೆಡವುವುದಾಗಲಿ, ದೇವಸ್ಥಾನ ಅಥವಾ ಚರ್ಚನ್ನು ಕೆಡುವುವುದಾಗಲಿ ಸಾತ್ವಿಕವಾದ ಚಟುವಟಿಕೆಯಲ್ಲ, ಅದು ಒಂದು ತಾಮಸ ಚಟುವಟಿಕೆ. ನನಗನ್ನಿಸುತ್ತದೆ ಸಭಾಪತಿಗಳೇ, ಈ ವಿಸ್ಕಿ, ಬ್ರಾಂದಿ, ಮದ್ಯ, ಹೆಂಡ ಇತ್ಯಾದಿ ಹೇಳುತ್ತಾರಲ್ಲ, ಈ ಎಲ್ಲ ಮದ್ಯಪಾನಗಳಿಗಿಂತ ಹೆಚ್ಚು ಮತ್ತು ಬರಿಸುವಂತಹ ಒಂದು ಮದ್ಯಪಾನವಿದೆ. ‘ಅದನ್ನು ರಾಮರಸ’ ಎಂದು ಹೇಳುತ್ತಾರೆ. ಆ ರಾಮರಸ ಕುಡಿದವರನ್ನು ಯಾರೂ ಹಿಡಿಯುವುದಕ್ಕಾಗುವುದಿಲ್ಲ; ಅಷ್ಟು ಬಲಶಾಲಿಯಾದ ಮದ್ಯ ಅದು. ಅಂದರೆ ಈ ಘಟನೆ ಆ ರಾಮರಸದ ಪರಿಣಾಮವೇ ಇರಬೇಕು.

ಈ ಘಟನೆ ನಡೆದ ಮಾರನೆಯ ದಿನ ನಾನು ಉತ್ತರ ಥಾಯ್ಲೆಂಡ್‌ನಲ್ಲಿದ್ದೆ. ಡಿಸೆಂಬರ್ 7ಕ್ಕೆ ನಾನು ಮತ್ತು ವಿಮರ್ಶಕರಾದ ಡಾ. ಡಿ. ಆರ್. ನಾಗರಾಜ್‌ರವರು ಬ್ಯಾಂಕಾಕ್‌ಗೆ ಹೋದೆವು, ಬ್ಯಾಂಕಾಕ್‌ನಲ್ಲಿ ಕಂಡಂಥ ಒಂದು ಚಿತ್ರ ಎಷ್ಟು ವಿದ್ರಾವಕವಾಗಿತ್ತು ಎಂದರೆ ನಾವು ಭಾರತೀಯರು ಎಂದು ಹೇಳಿಕೊಳ್ಳುವುದಕ್ಕೆ ಅವತ್ತು ನನಗೆ ಸ್ವಲ್ಪನಾಚಿಕೆಯೇ ಆಯಿತು. ಯಾವತ್ತೂ ನನಗೆ ಅಂತಹ ಭಾವನೆ ಬಂದಿರಲಿಲ್ಲ. ಅವತ್ತು ಅಲ್ಲಿ ವಿಶ್ವವಿದ್ಯಾನಿಲಯ ಏರ್ಪಡಿಸಿದ್ದ ಅಂತರ್‌ರಾಷ್ಟ್ರೀಯ ಸಮ್ಮೇಳನಕ್ಕೆ ಎಲ್ಲ ದೇಶಗಳಿಂದ ಪ್ರತಿನಿಧಿಗಳು ಬಂದಿದ್ದರು. ಅಂದು ಸ್ವಲ್ಪ ತಲೆ ತಗ್ಗಿಸತಕ್ಕಂತಹ ಒಂದು ಪ್ರಸಂಗ ನನ್ನ ಜೀವನದಲ್ಲಿ ನಡೆದು ನಾನು ಭಾರತೀಯ ಅಂದುಕೊಳ್ಳಲು ಆಗಲಿಲ್ಲ. ನಿಜವಾಗಿಯೂ ಆಧ್ಯಾತ್ಮಿಕವಾದ ಶ್ರೇಷ್ಠ ಸಾಧನೆಯನ್ನು ಮಾಡಿದಂಥ ದೇಶ, ಋಷಿಗಳು ತಪಸ್ವಿಗಳ ದೇಶ, ಇಡೀ ಜಗತ್ತಿಗೆ ಏನಾದರೂ ಅಲೌಕಿಕವಾದುದನ್ನು, ಅಭೌತಿಕವಾದುದನ್ನು ಕೊಡುವ ಶಕ್ತಿ ಇದ್ದರೆ ಅದು ಭಾರತಕ್ಕೆ ಮಾತ್ರ ಎಂದು ನಾವು ತಿಳಿದುಕೊಂಡಿದ್ದೆವು. ಆದರೆ ಭಾರತ ಮತ್ತೆ ಹಿಂದಕ್ಕೆ ಮಧ್ಯಯುಗದ ವರ್ತನೆಗೆ ಹೋಗುತ್ತಿದೆಯೆಂದು ಅವರು ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿದಾಗ ನಿಜವಾಗಿಯೂ ನನಗೆ ಅಪಮಾನವಾಯಿತು.

ನಾವು ರಾಮಾಯಣ ಮತ್ತು ರಾಮನ ಹೆಸರನ್ನು ಹೇಳುತ್ತಿದ್ದೇವೆ. ಸಭಾಪತಿಗಳೇ, ಇವತ್ತು ಜಗತ್ತಿನಲ್ಲಿ 300 ರಾಮಾಯಣಗಳು ಇವೆ, ಕೆಲವರು ಅಂದುಕೊಂಡಿರುವಂತೆ ವಾಲ್ಮೀಕಿ ರಾಮಾಯಣ ಒಂದೇ ಅಲ್ಲ. ವಿದ್ವಾಂಸರ ಪ್ರಕಾರ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕೂಡ ಒಂದು ಪುಸ್ತಕ ಬಂದಿದೆ. ಅಂದರೆ, ರಾಮ ಎಂಬ ಒಬ್ಬ ಮಹಾವ್ಯಕ್ತಿ ಜಗತ್ತಿನ ಮೇಲೆ ಉಂಟುಮಾಡಿರುವ ಅಸಾಧ್ಯವಾದಂತಹ, ರಮಣೀಯವಾದಂತಹ ಪ್ರಭಾವವನ್ನು ಈ 300 ರಾಮಾಯಣಗಳ ಸೃಷ್ಟಿಯೇ ಹೇಳುತ್ತದೆ. ಅಲ್ಲದೆ, ಈ 300 ರಾಮಾಯಣಗಳು 300 ರೀತಿಯಲ್ಲಿವೆ. ನಾವು ಎಲ್ಲರೂ ಕೂಡ ಅಷ್ಟೂ ರಾಮಾಯಣಗಳ ಮನಸ್ಸನ್ನು ಮತ್ತು ಹೃದಯಗಳನ್ನು ಸೃಷ್ಟಿ ಮಾಡಿದ್ದೇವೆ. ಕೆಲವರು ಹೇಳುತ್ತಿರುವಂತೆ ಭಾರತ ದೇಶದಲ್ಲಿ ಮಾತ್ರ ರಾಮಾಯಣ ಸೃಷ್ಟಿಯಾಗಿಲ್ಲ. ಜಗತ್ತಿನ ಎಲ್ಲ ದೇಶದಲ್ಲಿ ರಾಮಾಯಣಗಳು ಸೃಷ್ಟಿಯಾಗಿವೆ. ಕಾಂಬೋಡಿಯಾದಲ್ಲಿ, ಥಾಯ್ಲೆಂಡ್‌ನಲ್ಲಿ, ಫಿಲಿಪ್ಪೀನ್ಸ್‌ನಲ್ಲಿ, ಇಂಡೋನೇಶ್ಯದಲ್ಲಿ ಪೂರ್ವದೇಶಗಳಲ್ಲಿಯೂ ವೈವಿಧ್ಯಮಯವಾಗಿರುವಂಥ ರಾಮಾಯಣ ಇದೆ.

ನಮ್ಮ ದೇಶದಲ್ಲಿ ಪಂಪರಾಮಾಯಣ ಇದೆ. ಪಂಪ ರಾಮಾಯಣದಲ್ಲಿ ರಾವಣ ತುಂಬಾ ದೊಡ್ಡ ಮನುಷ್ಯನೆಂದು ಚಿತ್ರಿಸಲಾಗಿದೆ. ಭಾರತೀಯ ಜನತಾ ಪಕ್ಷ ಅಧಿಕಾರ ಕಳೆದುಕೊಂಡ ಮಧ್ಯಪ್ರದೇಶದಲ್ಲಿ ಗೊಂಡ ಎಂಬ ಜನಾಂಗ ಇತ್ತು. ಅಲ್ಲಿ ಗೊಂಡ ರಾಮಾಯಣ ಎಂಬುದು ಪ್ರಚಲಿತದಲ್ಲಿದೆ. ಇದರಲ್ಲಿ ಘರ್ಷಣೆ ಮತ್ತು ಯುದ್ಧ ನಡೆಯುವುದು ರಾಮ ಮತ್ತು ರಾವಣನ ನಡುವೆ ಅಲ್ಲ; ರಾಮ ಮತ್ತು ಲಕ್ಷ್ಮಣನ ನಡುವೆ. ಸೀತೆ ಮೇಲೆ ಕಣ್ಣಿಟ್ಟಿದ್ದ ಎಂದು ರಾಮನಿಗೆ ಅನುಮಾನ ಬಂದು ಲಕ್ಷ್ಮಣನನ್ನು ಹಿಂಸೆಗೆ ಒಳಪಡಿಸುವುದು ಇದರ ಮುಖ್ಯ ತಿರುಳು. ಕುವೆಂಪುರವರ ರಾಮಾಯಣ ದರ್ಶನ ಈ ದೃಷ್ಟಿಯಿಂದ ಬಹಳ ವೈಶಿಷ್ಟವಾದುದು. ಅದರಲ್ಲಿ ಕೆಟ್ಟ ಪಾತ್ರಗಳೆಲ್ಲ ಮಾನವೀಯ ಪಾತ್ರಗಳಾಗಿ ಚಿತ್ರಿಸಲ್ಪಟ್ಟಿವೆ. ಕೈಕೆ ರಾವಣ ಎಲ್ಲಾ ಪಾತ್ರಗಳು ಮಾನವೀಯ ಪಾತ್ರಗಳಾಗಿ, ಪ್ರಗತಿಪರ ಪಾತ್ರಗಳಾಗಿ ಬಂದಿರುವುದನ್ನು ನೋಡುತ್ತೇವೆ. ಇದರಿಂದ ಭಾರತದ ಸಂಸ್ಕೃತಿಯ ಒಂದು ಭಾಗವಾಗಿರುವ ರಾಮ ಜಗತ್ತಿಗೆ ಕೂಡ ಸೇರಿದವನು ಎಂಬುದು ತಿಳಿಯುತ್ತದೆ.

ನಮ್ಮ ದೇಶದಲ್ಲಿ ರಾಮ, ಲಕ್ಷ್ಮಣ, ಸೀತೆ ಈ ಮೂರು ಜನ ಕಾಲಿಡದ ಜಾಗವಿಲ್ಲ; ಸುತ್ತಾಡದ ಬೆಟ್ಟಗುಡ್ಡಗಳು, ನೀರು ಕುಡಿಯದ ನದಿ ಸರೋವರಗಳು ಇಲ್ಲ. ಅವರು ವನವಾಸಕ್ಕೆ ಎಲ್ಲಾ ಕಡೆ ಹೋಗಬೇಕಾಗಿ ಬಂತು. ಆದುದರಿಂದ ದೇಶಾದ್ಯಂತ ಇವರ ಪ್ರಭಾವವಿದೆ. ಅವರು ಅರಮನೆಯಲ್ಲಿ ಮಾತ್ರ ಇದ್ದಂಥವರು ಅಲ್ಲ; ಊರೂರುಗಳಲ್ಲಿ ಸುತ್ತಬೇಕಾಗಿ ಬಂದದ್ದಷ್ಟೇ ಅಲ್ಲದೆ, ಸಾಹಸ ಮಾಡಬೇಕಾಗಿ ಬಂತು; ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಾಗಿ ಬಂತು. ಲವ-ಕುಶ ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಥಣಿ ಎಂಬ ಗ್ರಾಮದಲ್ಲಿ, ಅಲ್ಲಿ ಸೀತೆಬೆಟ್ಟ ಎಂದು ಇದೆ; ಅಲ್ಲಿಯೇ ಲವ-ಕುಶ ಹುಟ್ಟಿದ್ದು, ಇದನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ, ರಾಮ ರಾಜಕೀಯದ ವಸ್ತು ಆಲ್ಲವೆಂದು ಸೂಚಿಸುವುದಕ್ಕೆ.

ಸೀತೆ ಸ್ನಾನ ಮಾಡಿದ್ದು ತುಮಕೂರಿನ ಸೀತಮ್ಮನ ದೋಣಿ ಎಂಬಲ್ಲಿ. ಸ್ನಾನ ಮಾಡಿದ ಮೇಲೆ ಆಕೆಗೆ ನಾಮ ಇಟ್ಟುಕೊಳ್ಳುವುದಕ್ಕೆ ನೀರು ಸಿಗಲಿಲ್ಲ. ಆಗ ರಾಮ ಬಾಣ ಬಿಟ್ಟ, ನೀರು ಬಂತು. ಅದನ್ನು ರಾಮನ ಚಿಲುಮೆ ಎನ್ನುತ್ತಾರೆ. ರಾಷ್ಟ್ರಾದ್ಯಂತ ಇಂತಹ ಅನೇಕ ದಂತಕಥೆಗಳಿವೆ. ಬಳ್ಳಾರಿಯ ಆನೆಗುಂದಿ ತಾಲೂಕಿನ: ಕಿಷಿಂಧ ಎಂಬುದು ವಾಲಿ-ಸುಗ್ರೀವರು ಹುಟ್ಟಿದ ಜಾಗ. ರಾಮನಗರದಲ್ಲಿ ರಾಮನ ಪಾದ ಇದೆ. ಜಗತ್ತನ್ನು ವ್ಯಾಪಿಸಿರತಕ್ಕ ಎಲ್ಲರ ಹೃದಯ, ಮನಸ್ಸನ್ನು ಸೂರೆಗೊಂಡಿರುವವನು ರಾಮ. ಇದನ್ನೆಲ್ಲ ಇಷ್ಟೊಂದು ದೀರ್ಘವಾಗಿ ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣವಿದೆ. ತಾವು ಸಮಾಜವಾದಿ ಹಿನ್ನೆಲೆಯಿಂದ ಬಂದಿರುವಂಥವರು. ಯಾರು ಕಷ್ಟ ಬೀಳುತ್ತಿರುತ್ತಾರೋ ಅವರ ಬಗ್ಗೆ ನಮ್ಮ ಜನರಿಗೆ ತುಂಬಾ ಕನಿಕರ ಬರುತ್ತದೆ, ಪ್ರೀತಿ ಬರುತ್ತದೆ. ಬೇರೆಯವರು ಕಷ್ಟ ಎದುರಿಸುವಂಥ ರೀತಿ ನೋಡಿ ಪೂಜ್ಯ ಭಾವನೆ ಬೆಳೆಯುತ್ತದೆ. ಪಾಂಡವರು ದೊಡ್ಡವರಾದುದು ಕೂಡ ವನವಾಸದಿಂದಲೇ. ಇಂಥ ಹಿನ್ನೆಲೆಯಿಂದಲೇ ರಾಮನು ಮಹತ್ವದ ವ್ಯಕ್ತಿಯಾದ. ಇಂಥ ರಾಮನನ್ನು ಕೆಲವು ಸ್ನೇಹಿತರು ಆತ ಅಯೋಧ್ಯೆಯಲ್ಲಿ 9 ಲಕ್ಷ ವರ್ಷದ ಹಿಂದೆ ಇದೇ ಜಾಗದಲ್ಲಿ ಹುಟ್ಟಿದ ಎಂದು ಹೇಳಿ ಅಲ್ಲಿದ್ದಂಥ ಮಸೀದಿಯನ್ನು ಕೆಡವಿ ಒಂದಷ್ಟು ಇಟ್ಟಿಗೆ ಜೋಡಿಸಿ ಇದೇ ‘ರಾಮ ಮಂದಿರ’ ಎಂದರೆ ಅಂಥ ಮಹಾನ್ ವ್ಯಕ್ತಿಯನ್ನು ಇಟ್ಟಿಗೆ ಸಿಮೆಂಟ್ ಮಟ್ಟಕ್ಕೆ ಇಳಿಸಿದರಲ್ಲ ಎಂದು ವ್ಯಥೆಯಾಗುತ್ತದೆ.

ಹಿಂದೂ-ಮುಸ್ಲಿಮರು ಒಟ್ಟಿಗೆ ಬಾಳತಕ್ಕವರು. ಜಗತ್ತಿನ ಯಾವುದೇ ಧರ್ಮವಾದರೂ ಒಟ್ಟಿಗೇ ಬಾಳಬೇಕೆಂಬುದು ಎಲ್ಲಾ ಧರ್ಮಗಳ ತಿರುಳು. ಮಾಸ್ತಿ ವೆಂಕಟೇಶ ಐಯ್ಯಂಗಾರ್‌ರವರು ಒಂದು ಕಡೆ ಹೇಳುತ್ತಾರೆ ‘ಇತಿಹಾಸದ ಪ್ರವಾಹದಲ್ಲಿ ಮತಗಳು ಮೂರು ದಿನಕ್ಕೆ ಕಟ್ಟಿದ ಅರಗಿನ ಮನೆಗಳು. ಅದು ಹಿಂದೂ ಧರ್ಮವಾಗಲಿ, ಕ್ರೈಸ್ತ, ಬೌದ್ಧ, ಇಸ್ಲಾಂ ಧರ್ಮವಾಗಲಿ ಮತದ ಮಟ್ಟಕ್ಕೆ ಇಳಿದರೆ ಅದು ಅರಗಿನ ಮನೆ, ಆ ಅರಗಿನ ಮನೆಯಲ್ಲಿ ಧರ್ಮ ಏನಾದರೂ ಮಲಗಿದ್ದರೆ ಅದು ಸುಟ್ಟು ಹೋಗುತ್ತದೆ’ ಎಂದು ಹೇಳಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಹೀಗೆ ಉಲ್ಲೇಖವಿದೆ: ಮತ ಬೇರೆ, ಧರ್ಮ ಬೇರೆ. ಧರ್ಮ ಅಂತರಂಗಕ್ಕೆ ಸಂಬಂಧಪಟ್ಟದ್ದು, ಮತ ಬಾಹ್ಯ ಆಚರಣೆಗಳಿಗೆ ಸಂಬಂಧಪಟ್ಟದ್ದು ಎಂದು. ಇದರಲ್ಲೇ ಇನ್ನೂ ಒಂದು ಮಾತು ಬರುತ್ತದೆ. ಸೀತೆ ವನವಾಸದ ಸಂದರ್ಭದಲ್ಲಿ ರಾಮ ಯಾವಾಗಲೂ ತನ್ನ ಜೊತೆಯಲ್ಲಿ ಆಯುಧ ಇಟ್ಟು ಕೊಳ್ಳುವುದರ ಬಗ್ಗೆ, ಏಕೆ ಆಯುಧ ಇಟ್ಟುಕೊಂಡಿದ್ದೀರಿ ಎಂದು ಕೇಳಿ, ಆಯುಧ ಇಟ್ಟುಕೊಳ್ಳುವುದು ಕೆಟ್ಟದ್ದು ಎಂದು ಹೇಳುತ್ತಾಳೆ. ಅದಕ್ಕೆ ರಾಮ ನಾನು ಸುಮ್ಮನೆ ಇಟ್ಟುಕೊಂಡಿದ್ದೀನಿ ಎನ್ನುತ್ತಾನೆ. ಆಗ ಸೀತೆ ಒಂದು ಕತೆಯನ್ನು ಹೇಳುತ್ತಾಳೆ ‘ಒಬ್ಬ ಬೇಟೆಗಾರ ಆಯುಧ ಇಟ್ಟುಕೊಂಡಿದ್ದನಂತೆ. ಅವನು ಎಲ್ಲೋ ಹೋಗಬೇಕಾಗಿ ಬಂದಾಗ ಅದನ್ನು ತಪಸ್ಸು ಮಾಡುತ್ತಿದ್ದ ಒಬ್ಬ ಋಷಿಯ ಕೈಗೆ ಕೊಟ್ಟು ಹೋದನಂತೆ. ಅದನ್ನು ಆ ಋಷಿ ತನ್ನ ಪಕ್ಕದಲ್ಲಿಯೇ ಇಟ್ಟುಕೊಳ್ಳುತ್ತಿದ್ದ. ಆಯುಧದ ಚಿಂತೆಯಲ್ಲಿ ಅವನ ತಪಸ್ಸು ಭಂಗಗೊಳ್ಳುತ್ತಾ ಬಂತು. ಕ್ರಮೇಣ ಆ ಋಷಿ ಬೇಡನಾಗಿ ಪರಿವರ್ತಿತನಾದ’. ಇದನ್ನು ಸೀತೆ ರಾಮನಿಗೆ ಹೇಳಿದಳು. ಆಯುಧ ಸಮೀಪದಲ್ಲಿ ಇರಬಾರದು ಎನ್ನುವುದಕ್ಕೆ ಈ ಕತೆ ಜನ್ಮ ತಾಳಿದೆ. ಆದರೆ ನಮ್ಮ ಸ್ನೇಹಿತರು ಧರ್ಮದ ಇಂಥ ಸತ್ಯವನ್ನು ಗ್ರಹಿಸದೆ ಹೋದರು. ರಾಮನ ರಕ್ಷಣೆಗೆ ಆಯುಧಗಳನ್ನು ಹಿಡಿದುಕೊಂಡರು. ಆಯುಧಗಳಿಂದ ರಾಮನನ್ನು ರಕ್ಷಿಸಬೇಕೇ? ಆಯುಧಗಳು ಧರ್ಮದ ಸೂಚಕವೇ? ಇಂಥ ಮನೋಭಾವ ಸರಿಯೇ? ಇದನ್ನು ನಮ್ಮ ಸ್ನೇಹಿತರುಯೋಚಿಸಲೇ ಇಲ್ಲ. ನಿಜವಾದ ಧರ್ಮ ಅಹಿಂಸಾತ್ಮಕವಾಗಿರುತ್ತದೆ. ಪ್ರೀತಿ ಮತ್ತು ಸಮಾನತೆಯ ಸಂಕೇತವಾಗಿರುತ್ತದೆ. ಆದರೆ ಆಯುಧಗಳ ಮೂಲಕರಕ್ಷಣೆ ಮಾಡಬೇಕಾದ ಧರ್ಮ ತುಂಬಾ ದಿನ ಉಳಿಯುವುದಿಲ್ಲ.

ಇನ್ನೊಂದು ಸಭಾಪತಿಗಳೇ, ನಮ್ಮ ಭಾರತೀಯ ಸಂಸ್ಕೃತಿಯ ಜೀವಾಳ ಕೋಮು ಸೌಹಾರ್ದ. ನಮ್ಮ ಹಿರಿಯ ಬಿಜೆಪಿ ಸದಸ್ಯರ ಕುರಿತಂತೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ನಾನು ಅವರ ಮನೆಯಲ್ಲಿ ಊಟ ಮಾಡಿದ್ದೇನೆ. ಕೆಲವರ ಮನೆಗೆ ಹೋಗಿಬಂದಿದ್ದೇನೆ. ಶಂಕರಮೂರ್ತಿಯವರು ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಅವರ ಮನೆಯ ಕೆಲವಾರು ಸಮಾರಂಭಗಳಲ್ಲಿ ನಾನು ಭಾಗವಹಿಸಿದ್ದೇನೆ.

ಅವರ ಸಜ್ಜನಿಕೆ, ಸಂಸ್ಕೃತಿ ಬಗ್ಗೆ ತುಂಬಾ ಸಂತೋಷವಾಗುತ್ತದೆ. ಎಲ್ಲರನ್ನೂ ಅವರು ಸಹೋದರರಂತೆ ಕಾಣುತ್ತಾರೆ. ಅವರು ಇಂಥದ್ದಕ್ಕೆಲ್ಲಾ ಸಮ್ಮತಿ ಕೊಡುವವರಲ್ಲವೆಂದು ನನ್ನ ಭಾವನೆ. ಅವರಿಗೂ ಗೊತ್ತು, ನಮಗೆಲ್ಲಾ ಗೊತ್ತು, ನಮ್ಮ ಸಂಸ್ಕೃತಿಯ ಜೀವಾಳ ಕೋಮು ಸೌಹಾರ್ದ, ಇದನ್ನು ನಮ್ಮ ಜನರು ಸರಿಯಾಗಿ ಅರ್ಥಮಾಡಿಕೊಂಡಿಲ್ಲವೇನೋ ಅನ್ನಿಸುತ್ತದೆ.

ನಮ್ಮಲ್ಲಿ ಬಾಬಯ್ಯನ ಹಬ್ಬ ಮಾಡುತ್ತಾರೆ. ಹಿಂದೂಗಳ ಸಾಂಸ್ಕೃತಿಕ ಬದುಕಿನಲ್ಲಿ ಈ ಬಾಬಯ್ಯನ ಹಬ್ಬ ಒಂದು ಮುಖ್ಯ ಭಾಗ. ದೊಡ್ಡಬಳ್ಳಾಪುರದ ಪುಟ್ಟೇನ ಅಗ್ರಹಾರದಲ್ಲಿ ಈ ಹಬ್ಬವನ್ನು ಹಿಂದೂ ಮುಸ್ಲಿಮರು ಒಟ್ಟಿಗೆ ಸೇರಿ ಆಚರಣೆ ಮಾಡುತ್ತಾರೆ. ದೊಡ್ಡ ಬಳ್ಳಾಪುರ ದಲ್ಲಿ ನಡೆಯುವ ಹಬ್ಬದಲ್ಲಿ ಕೊಂಡ ಹಾಯೋದು ಹಿಂದೂಗಳು, ಆ ದೇವರನ್ನು ಹೊತ್ತು ಓಡಾಡೋದು ಹಿಂದೂಗಳು. ಇದು ಈ ದೇಶದಲ್ಲೇ ನಡೆಯುತ್ತಿದೆ. ಇವೆಲ್ಲ ಸೌಹಾರ್ದದ ಹಬ್ಬಗಳು. ಇದಲ್ಲದೇ, ಸಂತೋಷದಿಂದ ಇಬ್ಬರೂ ಕಲೆತು ಮಾಡುವಂಥ ಹಬ್ಬಗಳು ಇನ್ನೂ ಹಲವಾರು ಇವೆ. ನಮ್ಮ ಕರಗ ಮಸೀದಿ ಮುಂದೆ ನಿಂತು ಪೂಜೆ ತೆಗೆದುಕೊಳ್ಳದೆ ಮುಂದೆ ಹೋಗುವುದೇ ಇಲ್ಲ. ಇದು ಅಷ್ಟು ಹಿಂದಿನಿಂದ ಇಬ್ಬರ ನಡುವೆ ಬೆಳೆದು ಬಂದಿರುವಂಥ ಐಕ್ಯತೆ. ಬೆಳಗಾವಿಯಲ್ಲಿ ಸಾವಳಗಿ ಮಠದಲ್ಲಿ ಮಸೀದಿ ಮತ್ತು ದೇವಸ್ಥಾನ ಒಂದೇ ಕಟ್ಟಡದಲ್ಲಿ ಇವೆ. ಹಿಂದೂಗಳು ಮುಸ್ಲಿಮರು ಅದನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಕಡೆ ಇಂಥ ಐಕ್ಯತೆ ಇದೆ. ಏಕೆಂದರೆ ಮೊದಲಿನಿಂದಲೂ ಇಲ್ಲಿ ಧರ್ಮ ಮುಖ್ಯ ದೇವರು ಮುಖ್ಯ ಎನ್ನುವ ಭಾವನೆ ಇದ್ದದ್ದರಿಂದ ಇಂಥ ದೊಡ್ಡತನ ನಮ್ಮ ಜನರಿಗೆ ಬಂದಿದೆ.

ಬಾಬಾಬುಡಾನ್‌ಗಿರಿಯಲ್ಲಿ ದರ್ಗಾ ಮತ್ತು ದೇವಸ್ಥಾನ ಎರಡೂ ಒಂದೇ ಕಡೆ ಇವೆ. ಮುಸಲ್ಮಾನರ ಹಬ್ಬಗಳಲ್ಲಿ ಹಾಡು ಹೇಳುವವರು ಕೇವಲ ಮುಸ್ಲಿಮರಲ್ಲ, ಹಿಂದೂ ಮತ್ತು ಮುಸ್ಲಿಮರಿಬ್ಬರೂ ಹಾಡುತ್ತಾರೆ. ನಮ್ಮ ಜನಪದ ಸಂಸ್ಕೃತಿ ಸಂಪ್ರದಾಯದ ದೊಡ್ಡ ಕೊಡುಗೆ ಇದು. ಮೇಲುಕೋಟೆಯಲ್ಲಿ ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಇದಕ್ಕಿಂತ ವಿಶೇಷ ಉದಾಹರಣೆಯಿದೆ. ದೇವಸ್ಥಾನದ ಒಳಗೆ ಗರ್ಭಗುಡಿಗೆ ಸಮೀಪದಲ್ಲಿ ದೇವರ ಪಕ್ಕದಲ್ಲಿ ಮುಸ್ಲಿಮ್ ಹೆಣ್ಣುಮಗಳ ವಿಗ್ರಹ ಇದೆ. ಇದು ಆಶ್ಚರ್ಯದ ವಿಷಯ. ಆಕೆ ದೇವಿ ನಾಚ್ಸಾರ್ ಎಂಬ ಮುಸ್ಲಿಮ್ ಹೆಣ್ಣು ಮಗಳು. ಅದನ್ನು ತೆಗೆದುಹಾಕುವುದಕ್ಕೆ ಯಾರಿಂದಲೂ ಎಂದೂ ಸಾಧ್ಯವಿಲ್ಲ. ತೆಗೆದುಹಾಕಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ಏಕೆಂದರೆ ಆಕೆ ಆತನ ಪತ್ನಿ. ಇದು ಮತಗಳ ಸಂಗಮ ಅಲ್ಲ, ಎರಡು ಜೀವಗಳ ಎರಡು ಹೃದಯಗಳ ಸಂಗಮ. ಇದನ್ನು ಮತಗಳ ಮಿಲನ ಅನ್ನದೆ, ನಮ್ಮ ದೇವರುಗಳ ಆತ್ಮಮಿಲನ ಅನ್ನಬೇಕಾಗಿದೆ. ಆದ್ದರಿಂದ ದೈವ ಕೂಡಾ ಕೋಮು ಸೌಹಾರ್ದಕ್ಕೆೆ ಒಪ್ಪಿಗೆ ಕೊಟ್ಟಿದೆ. ಅದನ್ನು ಕೆಡವಿಸಿದರೆ ಅದು ದೈವದ್ರೋಹವಲ್ಲದೆ ಬೇರೇನೂ ಅಲ್ಲ.

ಶಿಶುನಾಳ ಶರೀಫರ ಹೆಸರು ಕೇಳಿದರೆ ಅವರು ಹಿಂದೂಗಳೋ ಮುಸ್ಲಿಮರೋ ಎನ್ನುವ ಗೊಂದಲ ನನಗೆ ಉಂಟಾಗುತ್ತದೆ. ಆತ ಒಬ್ಬ ಮುಸ್ಲಿಮ್ ಸಂತ. ಅಂತಹ ದೊಡ್ಡ ವ್ಯಕ್ತಿಯ ಗುರುಗಳು ಯಾರು? ಗುರುಗೋವಿಂದಭಟ್ ಎನ್ನುವ ಸನಾತನಿ ಬ್ರಾಹ್ಮಣ. ಅವರಿಬ್ಬರದು ಬಹು ದೊಡ್ಡ ಆದರ್ಶದ ಬದುಕು. ಗುರು ಶಿಷ್ಯರ ಸಂಬಂಧ ಆ ರೀತಿ ಬೆಳೆದು ಬಂದಿದೆ.

ಉತ್ತರ ಕರ್ನಾಟಕದಲ್ಲಿ ಒಬ್ಬ ಸಂತನ ಹೆಸರು ‘ಖಾದರ್‌ಲಿಂಗ’ ಎಂದಿದೆ. ‘ಖಾದರ್’ ಮತ್ತು ‘ಲಿಂಗ’ ಎರಡೂ ಹೆಸರು ಇರಬೇಕಾದರೆ ಅವನೊಬ್ಬ ಸೌಹಾರ್ದದ ಸಂಕೇತವಾಗಿದ್ದಾನೆ. ಸಿರಡಿ ಸಾಹೇಬ ಹೆಸರಿನ ಸಂತ ಹಾಗೂ ಆತನ ಭಕ್ತರ ಒಂದು ಪರಂಪರೆಯಿದೆ. ನನಗನ್ನಿಸುತ್ತದೆ, ಪರಂಪರೆಯನ್ನು ಪುನರುಜೀವನಗೊಳಿಸುವುದೇ ಇವತ್ತು ದೇಶ ರಕ್ಷಣೆಗೆ ದೊಡ್ಡ ಸಾಧನವಾಗಬಲ್ಲದು. ಸ್ವಾಮಿ, ಇಂಥ ಈ ನೆಲದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದ ಕೆಲವರು ಕೋಮುಗಲಭೆಯಾದಾಗ ಏನೇನೋ ಮಾಡಿದರು. ಈ ಬಗ್ಗೆ ಕೆಲವರಾದರೂ ಮಠಾಧಿಪತಿಗಳು ತುಂಬಾ ಧೈರ್ಯದ ಮಾತನ್ನಾಡಿದರು. ನನಗೆ ಮಠಾಧಿಪತಿಗಳು, ದೇವರುಗಳ ಬಗ್ಗೆ ಅಷ್ಟೊಂದು ವಿಶ್ವಾಸವಿಲ್ಲದಿದ್ದರೂ ಇತ್ತೀಚೆಗೆ ಅವರನ್ನು ತುಂಬಾ ಟೀಕೆ ಮಾಡುವುದು ಸಾಧುವಲ್ಲ ಅನ್ನಿಸಿದೆ. ನಮ್ಮ ಜನರ ಜೀವನಕ್ಕೆ ಬೆಳಕು ಮತ್ತು ಸಮಾಜಕ್ಕೆ ಚೈತನ್ಯ ಕೊಡುವಂಥ ಶಕ್ತಿ ಇದರಲ್ಲಿ ಇದೆ ಅನ್ನಿಸಿ ನನಗೆ ದೇವರ ಬಗ್ಗೆ ಸ್ವಲ್ಪ ಗೌರವ ಬರುತ್ತಾ ಇದೆ.

ಮಸೀದಿ ಕೆಡವಿದ ಸಂದರ್ಭದಲ್ಲಿ ಸಿರಿಗೆರೆ ಮಠದಸ್ವಾಮಿಗಳು, ಕೊಳದಮಠದ ಸ್ವಾಮಿಗಳು ಹಾಗೆ ಮಾಡಿದ್ದು ತಪ್ಪು, ಹಿಂದೂ-ಮುಸ್ಲಿಮ್ ಎಲ್ಲರೂ ಸಹೋದರರು ಎಂದು ಘೋಷಣೆ ಮಾಡಿ ರಕ್ತಪಾತ ಹಾಗೂ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದರು. ಆ ಮಹಾತ್ಮರಿಗೆ ಆದರ್ಶ ವ್ಯಕ್ತಿಗಳಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಈ ಗಲಾಟೆ ನಡೆಯುತ್ತಿರುವಾಗಲೇ ಕೆಲವು ಹಿಂದೂ-ಮುಸ್ಲಿಮ್ ಪ್ರೇಮಿಗಳು ಪೊಲೀಸ್ ಸ್ಟೇಷನ್‌ನಲ್ಲಿ ಮದುವೆಯಾದರು. ಏಕೆಂದರೆ ಮತೀಯ ಗಲಭೆಯ ಸಮಯದಲ್ಲಿ ಎರಡೂ ಕಡೆಯವರು ತಮ್ಮನ್ನು ಹೊಡೆಯಬಹುದೆಂದು ಅವರು ಪೊಲೀಸ್ ಸ್ಟೇಷನನ್ನೇ ಆರಿಸಿಕೊಂಡರು. ಈ ಗಲಭೆ ನಡೆಯುವಾಗಲೇ ಪ್ರೇಮಿಗಳು ಧೈರ್ಯಮಾಡಿ ಮದುವೆಯಾದದ್ದು ನನಗೆ ತುಂಬಾ ಸಂತೋಷ ತಂದಿತು. ಆ ನವದಂಪತಿಗಳ ಜೀವನ ಕೋಮು ಸೌಹಾರ್ದದ ಸಂಕೇತದ ಮಿಲನ. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇದೇ ಸಂದರ್ಭದಲ್ಲಿನ ದುರದೃಷ್ಟ ಏನೆಂದರೆ, ಕೆಲವು ಸ್ವಾಮಿಗಳು ಯಾವ ಉದ್ದೇಶಕ್ಕೋ ಪ್ರಚೋದನಾತ್ಮಕ ಹೇಳಿಕೆ ಕೊಟ್ಟರು. ಅವರಲ್ಲಿ ಪೇಜಾವರ ಸ್ವಾಮಿಗಳೂ ಒಬ್ಬರು. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ಅವರು ಆ ಸಂದರ್ಭಕ್ಕೆ ಹಾಗೆ ಮಾತಾಡಬಾರದಾಗಿತ್ತು. ‘ಅಯೋಧ್ಯೆಯಲ್ಲಿ ಅಗೆಯುತ್ತಿದ್ದಾಗ ಆಂಜನೇಯನ ವಿಗ್ರಹ ಸಿಕ್ಕಿತು.’ ಇನ್ನು ಏನೇನೋ ಸಿಕ್ಕಿತು ಎಂದು ಅವರೇ ಮೊದಲು ಪತ್ರಿಕಾ ಹೇಳಿಕೆಗಳನ್ನು ಕೊಟ್ಟದ್ದು. ಇದು ಪ್ರಚೋದನೆಗೆ ಕಾರಣವಾಯಿತು. ಇದರಿಂದ ನನಗೆ ತುಂಬಾ ವ್ಯಥೆಯಾಯಿತು. ಅವರು ಮನಸ್ಸು ಮಾಡಿದ್ದರೆ ಹಾಗೆ ಹೇಳುವುದಕ್ಕಿಂತ ಇನ್ನೂ ಒಳ್ಳೆಯ ಕೆಲಸ ಮಾಡಬಹುದಾಗಿತ್ತು. ಉಡುಪಿಯಲ್ಲಿ ಕನಕನ ಕಿಂಡಿ ಇದೆಯಲ್ಲವೇ, ಕನಕನನ್ನು ಹೊಡೆದರೂ ಅವನ ಹಿಂದುಗಡೆಯೇ ಹೋದ ದೇವರು ಹಿಂದುಗಡೆಯಿಂದಲೇ ದರ್ಶನ ಕೊಟ್ಟ, ಅಂಥ ಕನಕನ ಕಿಂಡಿ ಇವತ್ತು ಕತ್ತೆ ನಾಯಿಗಳು ಮಲಗುವ ಜಾಗವಾಗಿದೆ. ನಿಜವಾಗಿಯೂ ಭಾರತದಲ್ಲಿ ಅದ್ಭುತವಾದ ಸ್ಥಳಮಹಿಮೆ ಎಲ್ಲಿಯಾದರೂ ಇದ್ದರೆ ಅದು ಉಡುಪಿಯ ಕನಕನ ಕಿಂಡಿ. ಮೊದಲು ಅದನ್ನು ದುರಸ್ತಿ ಮಾಡಿ ಅಭಿವೃದ್ಧಿ ಪಡಿಸಿ ಎಂದು ನಾನು ಅವರನ್ನು ಕೇಳುತ್ತೇನೆ. ಜೊತೆಗೆ ಅಷ್ಟೊಂದು ದೂರ ಹೋಗಿ ನೀವು ಆ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ನನಗೆ ಅಷ್ಟೊಂದು ಸೂಕ್ತ ಅನ್ನಿಸಲಿಲ್ಲ ಎಂದು ವಿನಯದಿಂದ ಹೇಳುತ್ತೇನೆ.

ಏಕೆಂದರೆ ಅವರ ತಪಸ್ಸಿನ ಮುಂದೆ ನಾನು ತುಂಬಾ ಕುಬ್ಜ. ಅವರಲ್ಲಿ ನನ್ನ ಪ್ರಾರ್ಥನೆ ಇಷ್ಟೇ, ತಾವು ಮಾಡತಕ್ಕ ಕೆಲಸ ಕರ್ನಾಟಕದಲ್ಲಿ ಬಹಳ ಇದೆ. ಅಸ್ಪಶ್ಯತಾ ನಿವಾರಣೆ, ಅಂತರ್ಜಾತಿ ವಿವಾಹ ಮಾಡಿಸಿ, ಮಹಿಳೆಯರ ಉನ್ನತಿಗೆ ಶ್ರಮಿಸಿ, ಕೊನೆಯ ಪಕ್ಷ ಬ್ರಾಹ್ಮಣೇತರ ವಿಷಯದಲ್ಲಿ ಸಹಪಂಕ್ತಿ ಭೋಜನ ಮಾಡಿಸಿ, ಉಡುಪಿಯಲ್ಲಿ ಉಳಿದ ಪಂಗಡದವರಿಗೆ ಭೋಜನ ಇದ್ದಹಾಗೆ ಇಲ್ಲ. ಎಲ್ಲ ಬ್ರಾಹ್ಮಣರ ಜೊತೆ ಉಳಿದವರಿಗೂ ಸಹಪಂಕ್ತಿ ಭೋಜನ ಮಾಡಿಸಿ, ಇದನ್ನು ಬಿಟ್ಟು ಪ್ರಚೋದನಾತ್ಮಕವಾದ ಹೇಳಿಕೆಗಳನ್ನು ಕೊಡುತ್ತಾ ಜನಗಳನ್ನು ಒಡೆಯುವ ಕೆಲಸ ಮಾಡುವುದು ಧರ್ಮವಲ್ಲ, ಇದನ್ನು ಯೋಚನೆ ಮಾಡಬೇಕು.

ಕೊನೆಯದಾಗಿ ಒಂದು ಮಾತು. ಪೊಲೀಸ್ ಇಲಾಖೆಗೆ ಕೋಮು ಸೌಹಾರ್ದದ ಬಗ್ಗೆ ಒಂದು ಪರಿಕಲ್ಪನೆ ಇಲ್ಲ. ಹಿಂದೂ ಧರ್ಮವನ್ನು ಅವರು ಅಸಾಂಸ್ಕೃತಿಕವಾಗಿ ಅಳವಡಿಸಿಕೊಳ್ಳುತ್ತಾರೆ. ಖಾಕಿಬಟ್ಟೆ ಹಾಕಿದ ಕೂಡಲೇ ಭಾಷೆಯನ್ನು ತುಂಬಾ ಕೆಳಮಟ್ಟದಲ್ಲಿ ಬಳಸಬೇಕೆಂಬ ಕಾನೂನು ಇರಬಹುದೇನೋ ಎಂಬಂತೆ ಅವರು ವರ್ತಿಸುತ್ತಾರೆ. ಡಿಸೆಂಬರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News