ಎಫ್‍ಐಆರ್ ದಾಖಲಿಸಲು ಹಿಂದೇಟು ಆರೋಪ: ಎಸಿಪಿ ನಜ್ಮಾ ಫಾರೂಖಿ ವಿರುದ್ಧ ಡಿಜಿಪಿಗೆ ದೂರು

Update: 2021-06-13 12:51 GMT

ಬೆಂಗಳೂರು, ಜೂ.13: ಹಲ್ಲೆದಾರನ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಕೋರಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪ್ರಥಮ ವರ್ತಮಾನ ವರದಿ(ಎಫ್‍ಐಆರ್) ದಾಖಲಿಸದೆ, ಕಿರಿಯ ಅಧಿಕಾರಿಗಳ ಮೇಲೆ ಎಸಿಪಿ ನಜ್ಮಾ ಫಾರೂಖಿ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಸಲಾಗಿದೆ.

ಇಮ್ರಾನ್ ಶರೀಫ್ ಎಂಬವರು ದೂರು ಸಲ್ಲಿಸಿದ್ದು, ತಮ್ಮ ಹಲ್ಲೆ ನಡೆಸಿರುವ ವ್ಯಕ್ತಿ ಹಾಗೂ ಎಸಿಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಇಮ್ರಾನ್ ಶರೀಫ್, ತಾನು ಇಲ್ಲಿನ ಎಸ್ಪಿ ರಸ್ತೆ ನಿವಾಸಿಯಾಗಿದ್ದು, ಸಹೋದರ ಇನಾಯತ್ ಶರೀಫ್ ಬಳಿ ಮುಹಮ್ಮದ್ ಫೈಝಲ್ ಎಂಬಾತ 7.5 ಲಕ್ಷ ರೂ.ಸಾಲ ಪಡೆದಿದ್ದ. ಆದರೆ, ಸಾಲ ವಾಪಸ್ ನೀಡದೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರವಾಗಿ ಮೇ 15 ರಂದು ಬೆಳಗಿನ ಜಾವ ಹಣ ಹಿಂತಿರುಗಿ ಕೊಡುವುದಾಗಿ ಫೈಝಲ್ ಕರೆ ಮಾಡಿದ್ದ ಎಂದರು.

ಹಣ ಪಡೆದುಕೊಳ್ಳಲು ಸಹೋದರ ಇನಾಯತ್ ಬದಲಾಗಿ ನಾನೇ ಹೋಗಿದ್ದು, ಈ ವೇಳೆ ನನ್ನ ಮೇಲೆ ಫೈಝಲ್ ಮತ್ತು ಆತನ ಸಹಚರರು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಫೈಝಲ್ ಮತ್ತು ಆತನ ಸಹಚರರು ಹಲ್ಲೆ ನಡೆಸಿರುವುದಾಗಿ ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ದೂರು ಪಡೆದು ಎಫ್‍ಐಆರ್ ದಾಖಲಿಸಬೇಕಿದ್ದ ಎಸಿಪಿ ನಜ್ಮಾ ಫಾರೂಖಿ ಆರೋಪಿಗಳ ಪ್ರಭಾವಕ್ಕೊಳಗಾಗಿ ಎನ್‍ಸಿಆರ್ ದಾಖಲಿಸಿ, ನಮ್ಮನ್ನು ವಾಪಸ್ಸು ಹೋಗುವಂತೆ ಕಳುಹಿಸಿದರು ಎಂದು ದೂರಿದರು.

ಅಲ್ಲದೆ, ಮೇ 19ರಂದು ನನ್ನನ್ನು ಕಚೇರಿಗೆ ಕರೆಸಿಕೊಂಡ ಎಸಿಪಿ ನಜ್ಮಾ ಅವರು ಹಲ್ಲೆಗೊಳಗಾದ ನಮಗೆ ತಾಕೀತು ಮಾಡಿ, ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಿಸದಂತೆ ಇನ್‍ಸ್ಪೆಕ್ಟರ್ ಗೆ ಸೂಚಿಸಿದ್ದಾರೆ. ಹಾಗಾಗಿ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ ಐಜಿಪಿ ಪ್ರವೀಣ್ ಸೂದ್‍ಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News