ಮುಂದಿನ 3 ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಕೋವಿಡ್ ಲಸಿಕೆ ಡೋಸ್ ಪಡೆಯಲಿರುವ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು

Update: 2021-06-13 16:23 GMT

ಹೊಸದಿಲ್ಲಿ, ಜೂ. 13: ಕೋವಿಡ್ ಲಸಿಕೆಯ ನಾಲ್ಕು ಲಕ್ಷ (4,48,760) ಕ್ಕೂ ಅಧಿಕ ಡೋಸ್ಗಳು ಬರಲಿದ್ದು, ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಡೋಸ್ಗಳನ್ನು ಪಡೆಯಲಿವೆ. ಪತ್ರಿಕಾ ಹೇಳಿಕೆ ಮೂಲಕ ಈ ಘೋಷಣೆ ಮಾಡಿರುವ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆಯ 1.53 ಕೋಟಿ (1,53,79,233)ಗೂ ಅಧಿಕ ಡೋಸ್ಗಳು ಪ್ರಸ್ತುತ ಲಭ್ಯವಿವೆ ಎಂದು ಸ್ಪಷ್ಟನೆ ನೀಡಿದೆ. 

ಇದುವರೆಗೆ ಕೇಂದ್ರ ಸರಕಾರ (ಉಚಿತವಾಗಿ)ದ ಹಾಗೂ ರಾಜ್ಯ ನೇರ ಖರೀದಿ ಗುಂಪಿನ ಮೂಲಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯ 26 ಕೋಟಿ (26,64,84,350)ಗೂ ಅಧಿಕ ಡೋಸ್ಗಳನ್ನು ಪೂರೈಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದರೊಂದಿಗೆ ವ್ಯರ್ಥ್ಯ ಸೇರಿದಂತೆ ಒಟ್ಟು 25,12,66,637 ಡೋಸ್ಗಳು ಬಳಕೆಯಾಗಿವೆ ಎಂಬುದನ್ನು ರವಿವಾರ ಬೆಳಗ್ಗೆ 8 ಗಂಟೆಯ ದತ್ತಾಂಶ ಬಹಿರಂಗಪಡಿಸಿದೆ. 

ರಾಷ್ಟ್ರವ್ಯಾಪಿ ಲಸಿಕಾಕರಣದ ಒಂದು ಭಾಗವಾಗಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ಪೂರೈಸುವ ಮೂಲಕ ಕೇಂದ್ರ ಸರಕಾರ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡುತ್ತಿದೆ. ಇದಲ್ಲದೆ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನು ನೇರವಾಗಿ ಖರೀದಿಸಲು ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದೆ. ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ಕೋವಿಡ್ ಸೂಕ್ತ ನಡತೆಯೊಂದಿಗೆ ಸಾಂಕ್ರಾಮಿಕ ರೋಗ ನಿರ್ವಹಣೆ ಹಾಗೂ ಕಂಟೈನ್ಮೆಂಟ್ಗೆ ಕೇಂದ್ರ ಸರಕಾರದ ಸಮಗ್ರ ಕಾರ್ಯತಂತ್ರದಲ್ಲಿ ಲಸಿಕಾಕರಣ ಅವಿಭಾಜ್ಯ ಅಂಗವಾಗಿದೆ. ಈ ದಿಶೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣದ ಉದಾರೀಕೃತ ಹಾಗೂ ವೇಗವರ್ಧಿತ ಹಂತ 3ನ್ನು ಕೇಂದ್ರ ಸರಕಾರ ಈ ವರ್ಷ ಮೇ 1ರಂದು ಅನುಷ್ಠಾನಗೊಳಿಸಿತ್ತು. ಭಾರತದ ಲಸಿಕಾಕರಣ ಜನವರಿ 16ರಂದು ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News