ಬಿಸ್ಕತ್ ಕಂಪೆನಿ ಹೆಸರಿನಲ್ಲಿ ಆನ್‍ಲೈನ್ ಮೂಲಕ 16.69 ಲಕ್ಷ ರೂ. ವಂಚನೆ

Update: 2021-06-13 18:02 GMT

ಬೆಂಗಳೂರು, ಜೂ.13: ಓರಿಯೋ ಬಿಸ್ಕತ್ ಕಂಪೆನಿ ಹೆಸರಿನಲ್ಲಿ 16.69 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವೈಟ್‍ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಟ್‍ಫೀಲ್ಡ್‍ನ ಅಮಿತ್ ತಲ್ವರ್(44) ಎಂಬುವರು ವಂಚನೆಗೊಳಗಾಗಿದ್ದು, ವಂಚನೆ ಆರೋಪ ಸಂಬಂಧ ಜನೀಸ್ ಮತ್ತು ರಿಶಿ ಕಪೂರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಇತ್ತೀಚಿಗೆ ಅಮಿತ್ ಅವರನ್ನು ಸಂಪರ್ಕ ಮಾಡಿದ ಆರೋಪಿಗಳ ಪೈಕಿ ಡಾ.ರಿಶಿ ಕಪೂರ್ ಏಜೆನ್ಸಿಯ ಪ್ರತಿನಿಧಿಗಳೆಂದು ಪರಿಚಯ ಮಾಡಿಕೊಂಡಿದ್ದಾರೆ. ತದನಂತರ, ನಿಮ್ಮ ಮಕ್ಕಳಿಗೆ ಓರಿಯೋ ಬಿಸ್ಕತ್ ಕಂಪೆನಿ ಕಡೆಯಿಂದ ಕಮಷಿರ್ಯಲ್ ಸ್ಟಾರ್ ಎಂಬ ಆಡಿಷನ್ ಆಯೋಜನೆ ಮಾಡಲಾಗುತ್ತಿದೆ. ವಿಜೇತ ಮಕ್ಕಳಿಗೆ ಆಕರ್ಷಕ ಬಹುಮಾನ ಲಭಿಸಲಿದೆ ಎಂದು ನಂಬಿಸಿದ್ದರು. ಇದರನ್ವಯ ಅಮಿತ್ ಅವರಿಗೆ ಆರೋಪಿಗಳು ವಾಟ್ಸ್ ಆ್ಯಪ್‍ನಲ್ಲಿ ಲಿಂಕ್ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಬಳಿಕ ಪೋಷಕರು ಮಗು ಫೋಟೋ, ವಿಡಿಯೋ ಅಪ್‍ಲೋಡ್ ಮಾಡಿದ್ದರು.

ನಾಲ್ಕೈದು ದಿನದ ಬಳಿಕ ಅಮಿತ್‍ಗೆ ಕರೆ ಮಾಡಿದ ಆರೋಪಿಗಳು ನಿಮ್ಮ ಮಗು ಆಯ್ಕೆಯಾಗಿದೆ ಎಂದು ಹೇಳಿ ಮುಂದಿನ ಹಂತಕ್ಕೆ ಹೋಗಲು ಮತ್ತೊಂದು ವಿಡಿಯೊ ಅಪ್‍ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಆನಂತರ, ಮಗುವಿನ ನೃತ್ಯದ ವಿಡಿಯೊ ಮಾಡಿದ ಅಮಿತ್, ಆರೋಪಿಗಳು ನೀಡಿದ್ದ ಲಿಂಕ್ ಬಳಸಿ ವೆಬ್‍ಸೈಟ್ ತೆರೆದು ವಿಡಿಯೋ ಅಪ್‍ಲೋಡ್ ಮಾಡಿದ್ದರು. ಈ ಬಾರಿ ಶುಲ್ಕವೆಂದು 1.34 ಲಕ್ಷ ರೂ. ಪಾವತಿ ಮಾಡಬೇಕೆಂದು ಹಣ ವಸೂಲಿ ಮಾಡಿದ್ದರು. ಇದಾದ ಮೇಲೆ ಹಂತ ಹಂತವಾಗಿ ಒಟ್ಟು 16.69 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದರ ಬಗ್ಗೆ ಅಮಿತ್‍ಗೆ ಅನುಮಾನ ಬಂದು ಆರೋಪಿಗಳ ಕಂಪೆನಿ ಬಗ್ಗೆ ವಿಚಾರಿಸಿದಾಗ ಇದೊಂದು ವಂಚನೆ ಎಂಬುದು ಗೊತ್ತಾಗಿ, ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News