ದೇಶದ 80% ಪ್ರದೇಶ ವ್ಯಾಪಿಸಿದ ಮುಂಗಾರು

Update: 2021-06-13 18:33 GMT

ಹೊಸದಿಲ್ಲಿ, ಜೂ.13: ಎರಡು ದಿನ ತಡವಾಗಿ, ಜೂನ್ 3ರಂದು ಮುಂಗಾರು ಪ್ರವೇಶಿಸಿದರೂ ಅತ್ಯಂತ ವೇಗವಾಗಿ ಮುಂದುವರಿಯುತ್ತಿದ್ದು 10 ದಿನದೊಳಗೆ ದೇಶದ 80% ಪ್ರದೇಶವನ್ನು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರವಿವಾರದ ವೇಳೆ ಮುಂಗಾರು ಮಳೆ ಒಡಿಶಾ, ಪ.ಬಂಗಾಳ, ಜಾರ್ಖಂಡ್, ಬಿಹಾರ, ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಮುಝಾಫರ್ಬಾದ್ ಹಾಗೂ ಹರ್ಯಾನ ಮತ್ತು ಪಂಜಾಬ್ನ ಕೆಲ ಭಾಗಗಳನ್ನು ಆವರಿಸಿಕೊಂಡಿದೆ. ‌

ನೈಋತ್ಯ ಮುಂಗಾರು ಈಗ ದಿಲ್ಲಿಯ ಹೊರಭಾಗದಲ್ಲಿದೆ. ಸಾಮಾನ್ಯವಾಗಿ ಜೂನ್ 26ರ ವೇಳೆಗೆ ದಿಲ್ಲಿ ಪ್ರವೇಶಿಸುವ ಮುಂಗಾರು ಈ ಬಾರಿ ಜೂನ್ 16-17ರ ವೇಳೆ ದಿಲ್ಲಿ ಪ್ರವೇಶಿಸಬಹುದು ಎಂದು ಇಲಾಖೆ ಹೇಳಿದೆ. ಮುಂದಿನ ವಾರದ ಮಧ್ಯಭಾಗದಲ್ಲಿ ಮುಂಗಾರು ಮಳೆ ಪೂರ್ವ ಉತ್ತರಪ್ರದೇಶ, ದಿಲ್ಲಿ, ಹರ್ಯಾನ ಹಾಗೂ ಮಧ್ಯಪ್ರದೇಶ ಮತ್ತು ಪಂಜಾಬ್‌ ನ ಉಳಿದ ಭಾಗಗಳಿಗೂ ವ್ಯಾಪಿಸುವ ನಿರೀಕ್ಷೆಯಿದೆ. ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡ ಪರಿಸ್ಥಿತಿ ಮುಂದಿನ ಎರಡು-ಮೂರು ದಿನಗಳಲ್ಲಿ ಬಿರುಸುಗೊಳ್ಳುವ ಮೂಲಕ ಮುಂಗಾರು ಮಾರುತದ ಚಲನೆಗೆ ನೆರವಾಗಲಿದೆ ಎಂದು ಇಲಾಖೆ ಹೇಳಿದೆ.

ಬಂಗಾಳ ಕೊಲ್ಲಿಯ ವಾಯವ್ಯದಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶದ ಜೊತೆಗೆ ಪಶ್ಚಿಮದ ಕಡೆ ಬೀಸುವ ಬಲವಾದ ಗಾಳಿಯಿಂದ ಒಡಿಶಾ, ಛತ್ತೀಸ್ಗಢ, ಮಧ್ಯಪ್ರದೇಶ, ಜಾರ್ಖಂಡ್, ತೆಲಂಗಾಣ, ವಿದರ್ಭ, ದಿಲ್ಲಿ, ಪಂಜಾಬ್, ಉತ್ತರಾಖಂಡ, ಚಂಡೀಗಢ ಮತ್ತು ಉತ್ತರಪ್ರದೇಶದಲ್ಲಿ ಗುರುವಾರದವರೆಗೆ ಭಾರೀ ಮಳೆ ಸುರಿಯಲಿದೆ . ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶದ ಕೆಲವೆಡೆ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News