ಅದಾನಿ ಸಮೂಹ ಸಂಸ್ಥೆಗಳಲ್ಲಿ 43,500 ಕೋಟಿ ರೂ. ಮೌಲ್ಯ ಷೇರು ಹೊಂದಿರುವ 3 ಎಫ್‍ಪಿಐಗಳ ಖಾತೆ ಮುಟ್ಟುಗೋಲು

Update: 2021-06-14 06:04 GMT
ಗೌತಮ್ ಅದಾನಿ (PTI)

ಹೊಸದಿಲ್ಲಿ: ಅದಾನಿ ಸಮೂಹದ ನಾಲ್ಕು ಕಂಪೆನಿಗಳಲ್ಲಿ ಒಟ್ಟು 43,500 ಕೋಟಿ ರೂ. ಹೂಡಿಕೆ ಹೊಂದಿರುವ ಅಲ್ಬುಲಾ ಇನ್ವೆಸ್ಟ್ ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಹಾಗೂ ಎಪಿಎಂಎಸ್ ಇನ್ವೆಸ್ಟ್ ಮೆಂಟ್ ಫಂಡ್ ಎಂಬ ಮೂರು ಫಾರಿನ್ ಪೋರ್ಟ್‍ಫೋಲಿಯೋ ಇನ್ವೆಸ್ಟರ್ಸ್ (ಎಫ್‍ಪಿಐ) ಇವುಗಳ ಖಾತೆಗಳನ್ನು ಎನ್‍ಎಸ್‍ಡಿಎಲ್ ಮೇ 31 ಹಾಗೂ ಅದಕ್ಕಿಂತ ಮೊದಲು ಮುಟ್ಟುಗೋಲು ಹಾಕಿದೆ. ಇದೇ ಕಾರಣದಿಂದಾಗಿ ಅದಾನಿ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ.

ಖಾತೆಗಳ ಮುಟ್ಟುಗೋಲಿನಿಂದಾಗಿ ಮೇಲೆ ತಿಳಿಸಿದ ಮೂರು ಎಫ್‍ಪಿಐಗಳು ಯಾವುದೇ ಹೊಸ ಸೆಕ್ಯುರಿಟಿಗಳನ್ನು ಮಾರಾಟ ಅಥವಾ ಖರೀದಿಸುವಂತಿಲ್ಲ.

ಅಕ್ರಮ ನಗದು ವರ್ಗಾವಣೆ ತಡೆ ಕಾಯಿದೆಯನ್ವಯ ಫಲಾನುಭವಿ ಮಾಲಕತ್ವದ ಕುರಿತು ಸೂಕ್ತ ಮಾಹಿತಿ ಬಹಿರಂಗಪಡಿಸದೇ ಇರುವುದರಿಂದ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆಯೆನ್ನಲಾಗಿದೆ.

ಮೂರು ಖಾತೆಗಳೂ ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್‍ನಲ್ಲಿವೆ ಎನ್ನಲಾಗಿದ್ದು ಇವುಗಳು ಅದಾನಿ ಎಂಟರ್‍ಪ್ರೈಸಸ್‍ನಲ್ಲಿ ಶೇ6.82, ಅದಾನಿ ಟ್ರಾನ್ಸ್‍ಮಿಷನ್ ಸಂಸ್ಥೆಯಲ್ಲಿ ಶೇ8.03, ಅದಾನಿ ಟೋಟಲ್ ಗ್ಯಾಸ್‍ನಲ್ಲಿ ಶೇ5.92 ಹಾಗೂ ಅದಾನಿ ಗ್ರೀನ್‍ನಲ್ಲಿ ಶೇ3.58ರಷ್ಟು ಪಾಲು ಹೊಂದಿವೆ. ಮೂರೂ ಸಂಸ್ಥೆಗಳು ಸೆಬಿಯಲ್ಲಿ ಎಫ್‍ಪಿಐ ಎಂದು ನೋಂದಣಿಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News