ಕೋವಿಡ್ ನಿರ್ವಹಣೆ ವಿಚಾರ: ಸರಕಾರದ ವಿರುದ್ಧ ಎಡ, ಜಾತ್ಯತೀತ ಪಕ್ಷಗಳಿಂದ ಪ್ರತಿಭಟನೆ

Update: 2021-06-15 13:58 GMT

ಬೆಂಗಳೂರು, ಜೂ.15: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿವೆ ಎಂದು ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಪಕ್ಷಗಳು ನಗರದ ಗಾಂಧಿ ಭವನದ ಮುಂಭಾಗ ಪ್ರತಿಭಟನೆ ನಡೆಸಿದವು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಸಿಪಿಐ ಹಿರಿಯ ನಾಯಕ ಅನಂತ ಸುಬ್ಬರಾವ್, ಸಾತಿ ಸುಂದರೇಶ್, ಎಸ್‍ಯುಸಿಐ(ಸಿ) ಮುಖಂಡ ಶ್ರೀರಾಮ್, ಸಿಪಿಎಂನ ಕೆ.ಎನ್ ಉಮೇಶ್, ಸಿಪಿಐ(ಎಮ್‍ಎಲ್)ನ ಕ್ಲಿಫ್ಟನ್ ಡಿ. ರೊಝಾರಿಯೊ ಹಾಗೂ ಅಪ್ಪಣ್ಣ, ಆರ್‍ಪಿಐನ ಮೋಹನ್ ರಾಜ್, ಸ್ವರಾಜ್ ಇಂಡಿಯಾದ ಚಾಮರಸ ಮಾಲಿ ಪಾಟೀಲ್ ಹಾಗೂ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವರನ್ನು ಬಂಧಿಸಿದರು.

ರಾಜ್ಯ ಸರಕಾರ ಜನರ ಒತ್ತಡಕ್ಕೆ ಮಣಿದು, ಒಲ್ಲದ ಮನಸ್ಸಿನಿಂದ ಅಗ್ಗದ ಪ್ರಚಾರ ಪಡೆಯಲು ಕೇವಲ 1,423 ಕೋಟಿ ರೂ.ಗಳ ಪರಿಹಾರದ ಎರಡು ಪ್ಯಾಕೇಜ್‍ಗಳೆಂಬ ಅಣಕಗಳನ್ನು ಘೋಷಿಸಲಾಗಿದೆ. ಇವುಗಳು ಯಾವುದೇ ರೀತಿಯಲ್ಲೂ ಜನತೆಯ ಕೋವಿಡ್ ಮತ್ತಿತರೆ ಭಾರೀ ಸಂಕಷ್ಟಕ್ಕೆ ಪರಿಹಾರಗಳಾಗಿಲ್ಲವೆಂದು ಸಿಪಿಎಂ ಮುಖಂಡ ಕೆ.ಎನ್.ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಪ್ರಾಣ ಹಾಗೂ ಆರೋಗ್ಯಕ್ಕಿಂತಲೂ, ಕಾರ್ಪೋರೇಟ್ ಲೂಟಿಯೇ ಈ ಸರಕಾರಗಳಿಗೆ ಮುಖ್ಯವಾಗಿದೆ. ಆದಾಯ ತೆರಿಗೆಯಡಿ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರ ಧಾನ್ಯ, ಮಾಸಿಕ 10ಸಾವಿರ ರೂ.ಗಳ ಕೋವಿಡ್ ಪರಿಹಾರ, ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News