ಸ್ಮಶಾನವಾಗುತ್ತಿರುವ ಬೆಂಗಳೂರಿನ ಕಲಾಗ್ರಾಮ!!

Update: 2021-06-15 19:30 GMT

ಬೆಂಗಳೂರಿನ ಮಲ್ಲತಹಳ್ಳಿಯ ಪ್ರದೇಶದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಒಂದು ಕಲಾಗ್ರಾಮವನ್ನು ಸ್ಥಾಪಿಸಬೇಕೆಂದು 2001ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ನಿರ್ಧರಿಸಿತು. ಆಗ ಮುಖ್ಯಮಂತ್ರಿಯಾಗಿದ್ದವರು ಎಸ್. ಎಂ. ಕೃಷ್ಣ. ಸುಮಾರು 30 ಎಕರೆಯಷ್ಟು ಜಾಗವಿರುವ ಕಲಾಗ್ರಾಮದಲ್ಲಿ 2013-14ರ ಅವಧಿಯಲ್ಲಿ ರಂಗಚಟುವಟಿಕೆಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ಜರುಗಿದವು. ಆನಂತರ ಕ್ರಮೇಣ ಕಳೆಗುಂದಲು ತೊಡಗಿದವು. ಅಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಕರ್ನಾಟಕ ಶಿಲ್ಪಕಲಾ ಅಕಾಡಮಿ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಮತ್ತು ನಾಲ್ಕು ಬಯಲು ರಂಗಮಂದಿರಗಳು ಇವೆ.

2018ರ ಕೊನೆಯಲ್ಲಿ ಅಲ್ಲಿನ ಸಭಾಂಗಣವೊಂದರಲ್ಲಿ ಅಗ್ನಿದುರಂತ ಸಂಭವಿಸಿ ತುಂಬ ಲುಕ್ಸಾನಾಯಿತು. ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಗ್ರಾಮವನ್ನು ಒಂದು ಅಂತರ್‌ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಗಳಿವೆ ಎಂದು ತಿಳಿಸಿತ್ತು. ಈ ವರ್ಷದ ಅಂದರೆ 2021-22ನೇ ಸಾಲಿನ ಬಜೆಟ್‌ನಲ್ಲಿ ಕಲಾಗ್ರಾಮದಲ್ಲಿ ಪ್ರತಿ ವಾರಾಂತ್ಯದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಜರುಗಿಸಲು 2 ಕೋಟಿ ರೂಗಳನ್ನು ಮೀಸಲಿಡುವುದಾಗಿ ರಾಜ್ಯ ಸರಕಾರ ಘೋಷಿಸಿತ್ತು. ಏನೇ ಇರಲಿ, ನಿರೀಕ್ಷಿಸಿದಂತೆ ಅದೊಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿಲ್ಲ. ಏತನ್ಮಧ್ಯೆ, ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿದ್ದ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪಡಿಸೆಂಬರ್ 23, 2013ರಂದು ಅಸುನೀಗಿದರು. ಅವರ ಅಂತ್ಯಸಂಸ್ಕಾರವನ್ನು ಕಲಾಗ್ರಾಮದಲ್ಲಿ ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನೆರವೇರಿಸಲಾಯಿತು. ಇದು ಕಲಾಗ್ರಾಮದಲ್ಲಿ ಜರುಗಿದ್ದಕ್ಕೆ ಅವರ ಹತ್ತಿರದ ಸಂಬಂಧಿಯೊಬ್ಬರ ತೀವ್ರ ಒತ್ತಡ ಕಾರಣವಾಗಿತ್ತೆಂದು ಹೇಳಲಾಯಿತು.

ಕನ್ನಡ ಸಾರಸ್ವತ ಜಗತ್ತಿನ ಉದ್ದಾಮ ಸಾಹಿತಿಯಾಗಿದ್ದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಯು. ಆರ್. ಅನಂತಮೂರ್ತಿಯವರು ಆಗಸ್ಟ್ 22, 2014ರಂದು ಗತಿಸಿದರು. ಅವರ ಪಾರ್ಥಿವ ಶರೀರವನ್ನು ಕಲಾಗ್ರಾಮದಲ್ಲಿ ಚಂದನದ ಕಟ್ಟಿಗೆಗಳೊಂದಿಗೆ, ಎಲ್ಲ ಸರಕಾರಿ ರೀತಿ-ರಿವಾಜುಗಳೊಡನೆ ದಹಿಸಲಾಯಿತು.

ಇತ್ತೀಚೆಗೆ ನಿಧಾನರಾದ ದಲಿತ ಮತ್ತು ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯು, ಬೌದ್ಧಮತದ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಕಲಾಗ್ರಾಮದಲ್ಲೇ ಜರುಗಿತು. ದಲಿತ ಸಂಘರ್ಷ ಸಮಿತಿ ಒಕ್ಕೂಟ ಅಲ್ಲೇ ಅಂತಿಮ ಸಂಸ್ಕಾರಗಳು ಜರುಗಬೇಕು ಮತ್ತು ಒಂದು ಸ್ಮಾರಕವನ್ನು ನಿರ್ಮಿಸಬೇಕೆಂದು ಆಗ್ರಹಿಸಿತ್ತು ಎನ್ನಲಾಗಿದೆ. ಹೀಗೆ, ಒಂದೆಡೆ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿರುವ ಕಲಾಗ್ರಾಮ ಮತ್ತೊಂದೆಡೆ ಅತಿಗಣ್ಯರ ಸ್ಮಶಾನತಾಣವಾಗುತ್ತಿರುವ ಬಗೆಗೆ ಅನೇಕ ಪ್ರಜ್ಞಾವಂತರು, ಈ ಮೂವರು ಮಹನೀಯರ ನಾಡು-ನುಡಿಗೆ ನೀಡಿರುವ ಅನುಪಮ ಸೇವೆಗಳನ್ನು ಪರಿಗಣಿಸುತ್ತಲೇ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಿಂದೆ, ಕನ್ನಡ ಚಲನಚಿತ್ರರಂಗದ ಧ್ರುವತಾರೆ ಡಾ. ರಾಜಕುಮಾರ್, ಅಂಬರೀಷ್ ಮತ್ತು ವಿಷ್ಣುವರ್ಧನರ ಅಂತ್ಯಕ್ರಿಯೆಗಳು ಕ್ರಮವಾಗಿ ಕಂಠೀರವ ಮತ್ತು ಅಭಿಮಾನ್ ಸ್ಟುಡಿಯೋಗಳಲ್ಲಿ ಜರುಗಿದಾಗ ಕೂಡ ಅಪಸ್ವರಗಳು ಎದ್ದಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ಜರುಗಿತು ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದ ಗಿರೀಶ್ ಕಾರ್ನಾಡರ ಅಂತ್ಯಕ್ರಿಯೆ. ಅವರು ತಮ್ಮ ಅಂತಿಮಯಾತ್ರೆಗೆ ಸಂಬಂಧಿಸಿದ ಕಾರ್ಯಗಳನ್ನು ತಮ್ಮ ಕುಟುಂಬದವರ ಮತ್ತು ಕೆಲವೇ ಕೆಲವು ಗೆಳೆಯರ ಸಮ್ಮುಖದಲ್ಲಿ ಜರುಗಿಸಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರಿಂದ, ಅದು ಅವರು ಇಚ್ಛಿಸಿದಂತೆಯೇ ಜರುಗಿತು!

ನಮ್ಮ ದೇಶದ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಪ್ರಸಿದ್ಧ ಗಾಂಧಿವಾದಿಯಾಗಿದ್ದರು. ಸಾರ್ವಜನಿಕ ಜೀವನದಲ್ಲಿ ದೊಡ್ಡ ಸ್ಥಾನವನ್ನು ಗಳಿಸಿದ್ದರು. ಅವರು ತಮ್ಮ ಜೀವನಕ್ಕೆ ವಿದಾಯ ಹೇಳಿದಾಗ, ಅವರ ಪಾರ್ಥಿವ ಶರೀರವನ್ನು ಚಂದನದ ಕಟ್ಟಿಗೆಗಳ ಮೇಲಿಟ್ಟು, ಅಗ್ನಿಸ್ಪರ್ಶ ಮಾಡಲಾಯಿತು!

 ಇದಕ್ಕೆ ಅಪವಾದವೆಂಬಂತೆ ರಾಜಕೀಯ ಮತ್ತು ಸಾಮಾಜಿಕ ವಲಯದ ಕೆಲವು ಖ್ಯಾತನಾಮರು ಗತಿಸಿದಾಗ, ಅವರ ಅಂತ್ಯಕ್ರಿಯೆಗಳು ಸರಳವಾಗಿ ಜರುಗಿರುವುದರ ನಿದರ್ಶನಗಳಿವೆ. ದೀರ್ಘಾವಧಿ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಕೊನೆಯುಸಿರೆಳೆದಾಗ, ಅವರ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು. ಇತ್ತೀಚೆಗೆ ನಮ್ಮನ್ನಗಲಿದ ಶತಾಯುಷಿ, ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಎಚ್. ಎಸ್. ದೊರೆಸ್ವಾಮಿಯವರ ಅಂತ್ಯಸಂಸ್ಕಾರ ಕೂಡ ಬೆಂಗಳೂರಿನಲ್ಲಿ ಸರಳವಾಗಿ, ಕೋವಿಡ್ ನಿಬಂಧನೆಗಳೊಡನೆ ಜರುಗಿತು. ಇನ್ನು ಅನೇಕ ಉದಾಹರಣೆಗಳೂ ಇವೆ. ಅಷ್ಟೇಕೆ, ಅನೇಕ ಸಾಮಾನ್ಯ ಜನರು ಕೂಡ ಗತಿಸಿದ ನಂತರ ತಮ್ಮ ದೇಹಗಳನ್ನು ದಾನ ಮಾಡುವುದರ ಮೂಲಕ ಉದಾತ್ತತೆಯನ್ನು ಮೆರೆದಿದ್ದಾರೆ.

ಹಾಗಾಗಿ, ಇನ್ನಾದರೂ ಕಲಾಗ್ರಾಮದಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿಗಣ್ಯರ ಅಂತ್ಯ ಸಂಸ್ಕಾರಗಳು ಜರುಗದಿರಲಿ ಎಂಬ ಪ್ರಜ್ಞಾವಂತ ನಾಗರಿಕರ ಅಭಿಮತವನ್ನು ಗಣನೆಗೆ ತೆಗೆದುಕೊಂಡು, ನಮ್ಮನಾಳುವ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುವುದೇ?

Writer - ಮ. ಶ್ರೀ. ಮುರಳಿ ಕೃಷ್ಣ

contributor

Editor - ಮ. ಶ್ರೀ. ಮುರಳಿ ಕೃಷ್ಣ

contributor

Similar News