ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಜೂ.20ರವರೆಗೆ ವ್ಯಾಪಕ ಮಳೆ ಸಾಧ್ಯತೆ

Update: 2021-06-16 08:51 GMT
 ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್

ಬೆಂಗಳೂರು, ಜೂ.16: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆ ಸುರಿದಿದೆ. ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಜೂ.20ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಜೂ.20ರವರೆಗೆ ಉತ್ತರ ಕನ್ನಡ, ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಜೂ.16 ಮತ್ತು 17ರಂದು ಆರೆಂಜ್ ಅಲರ್ಟ್, ಜೂ.18ರಿಂದ 20ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಜೂ.16ರಂದು ಯೆಲ್ಲೋ ಅಲರ್ಟ್, ಶಿವಮೊಗ್ಗ, ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಜೂ.16ರಂದು ಆರೆಂಜ್ ಅಲರ್ಟ್ ಹಾಗೂ ಜೂ.17, 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದವರು ಹೇಳಿದ್ದಾರೆ.

 ಬುಧವಾರ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆ ಸುರಿಯುತ್ತಿದೆ. ಆಗುಂಬೆಯಲ್ಲಿ 20 ಸೆಂ.ಮೀ., ಉತ್ತರ ಕನ್ನಡ ಜಿಲ್ಲೆಯ ಕದ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ತಲಾ 14 ಸೆಂ.ಮೀ. ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 11 ಸೆಂ.ಮೀ. ಮತ್ತು ಕಾರವಾರದಲ್ಲಿ 10 ಸೆಂ.ಮೀ. ಮಳೆ ಸುರಿದಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

ಇದೇವೇಳೆ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News