ಡಿಜೆ ಹಳ್ಳಿ ಗಲಭೆ ಪ್ರಕರಣ: 115 ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್

Update: 2021-06-16 17:47 GMT

ಬೆಂಗಳೂರು, ಜೂ.16: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ 115 ಆರೋಪಿಗಳಿಗೆ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. 

ಪ್ರಕರಣದಲ್ಲಿ ಡೀಫಾಲ್ಟ್ ಜಾಮೀನು ಕೋರಿ ಮುಝಮ್ಮಿಲ್ ಪಾಷಾ ಸೇರಿ 115 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವನಾಥ್ ಶೆಟ್ಟಿ ಅವರಿದ್ದ ನ್ಯಾಯಪೀಠ, 115 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಡಿಜೆ ಹಳ್ಳಿ ಪ್ರಕರಣದ ತನಿಖೆಯ ಪೂರ್ಣಗೊಳಿಸಲು ಎನ್‌ಐಎಗೆ ಎನ್‌ಐಎ ಕೋರ್ಟ್ 90 ದಿನಗಳ ಕಾಲ ಹೆಚ್ಚಿನ ಸಮಯಾವಕಾಶ ನೀಡಿದ ಹಿನ್ನೆಲೆಯಲ್ಲಿ 115 ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜತೆಗೆ ಮೂರು ತಿಂಗಳಲ್ಲಿ ಸಲ್ಲಿಸಬೇಕಾಗಿದ್ದ ತನಿಖೆಯ ವರದಿಯನ್ನೂ ಎನ್‌ಐಎ ಸಲ್ಲಿಸಿರಲಿಲ್ಲ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆಗೆ ಹೆಚ್ಚಿನ ಸಮಯಾವಕಾಶವನ್ನು ನೀಡಿದ ವಿಚಾರವನ್ನು ಆರೋಪಿಗಳ ಗಮನಕ್ಕೆ ತಂದು ಅವರ ವಾದವನ್ನೂ ಆಲಿಸಬೇಕು. ಆದರೆ, ಈ ಯಾವ ವಿಚಾರವನ್ನೂ ಗಮನಕ್ಕೆ ತರದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ನೀಡಬಹುದು ಎಂದು ಹೇಳಿತು.

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಆರೋಪಿಗಳಿಗೆ ತಲಾ ಎರಡು ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ, ವಿಚಾರಣೆಗೆ ಕರೆದಾಗ ಬರಬೇಕು ಎಂಬುದು ಸೇರಿ ಇತರೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News