ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವ್ಯವಸ್ಥೆ-ಒಂದು ಅವಲೋಕನ

Update: 2021-06-16 19:30 GMT

‘‘ಗುರು-ಶಿಷ್ಯ’’ -ಗುರು ಕುಲ, ಗುರು ಪರಂಪರೆಯ ಹಿನ್ನೆಲೆ ಇರುವ ನಮ್ಮ ದೇಶ ಆಗಿನ ವಿದ್ಯಾಭ್ಯಾಸದ ಪದ್ಧತಿಯಿಂದ ಬಹು ದೂರ ಸಾಗಿ ಬಂದಿದೆ. 1835ರಲ್ಲಿ ಲಾರ್ಡ್ ಮೆಕಾಲೆ ಭಾರತದಲ್ಲಿ ಶಿಕ್ಷಣವನ್ನು ಯಶಸ್ವಿಯಾಗಿ ಪಾಶ್ಚಾತ್ಯಕರಣಗೊಳಿಸಿದರು; ಇಂಗ್ಲಿಷ್ ಅನ್ನು ಸರಕಾರ ಮತ್ತು ನ್ಯಾಯಾಲಯಗಳಿಗೆ ಅಧಿಕೃತ ಭಾಷೆಯನ್ನಾಗಿ ಮಾಡಿದರು ಮತ್ತು ಇದನ್ನು ಅಧಿಕೃತ ಬೋಧನಾ ಮಾಧ್ಯಮವಾಗಿ ಸ್ವೀಕರಿಸಲಾಯಿತು. ಈಗ ಅಮೆರಿಕದ ನಂತರ ಉನ್ನತ ಶಿಕ್ಷಣ ಪ್ರಪಂಚದಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗಲು ಭಾರತ ದಾಪುಗಾಲಿಕ್ಕಿದೆ.

ಸಮಾಜದ ಪ್ರಬುದ್ಧ ಸದಸ್ಯನಾಗಿ ಒಬ್ಬ ವ್ಯಕ್ತಿಯನ್ನು ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಲು ಸಿದ್ಧಪಡಿಸುವುದು ಉನ್ನತ ಶಿಕ್ಷಣದ ಉದ್ದೇಶ. ವಿಶ್ವ ವಿದ್ಯಾನಿಲಯಗಳ ಶಿಕ್ಷಣವು ಐಷಾರಾಮಿ ಅಲ್ಲ, ಅದು ಜೀವನೋಪಾಯಕ್ಕಾಗಿ ಅವಶ್ಯಕವಾಗಿದೆ. ಉನ್ನತ ಶಿಕ್ಷಣದ ಮುಖ್ಯ ಧ್ಯೇಯವೆಂದರೆ ಶಿಕ್ಷಣ, ತರಬೇತಿ, ಸಂಶೋಧನೆ ಕೈಗೊಳ್ಳುವುದು ಮತ್ತು ಸಮುದಾಯಕ್ಕೆ ಸೇವೆಯನ್ನು ನೀಡುವುದು. ಜಾಗತೀಕರಣದ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣದ ವ್ಯಾಪ್ತಿ ಮತ್ತು ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಗುಣಮಟ್ಟದ ಉನ್ನತ ಶಿಕ್ಷಣದಿಂದ ಮಾತ್ರ ಈ ಬೇಡಿಕೆಯನ್ನು ಈಡೇರಿಸಬಹುದು.

ಭಾರತದ ವಿಶ್ವವಿದ್ಯಾನಿಲಯಗಳ ವಿಧಗಳು:
 ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸಂಸತ್ತಿನ ಕಾಯ್ದೆಯೊಂದರಿಂದ ಸ್ಥಾಪಿಸಲ್ಪಟ್ಟಿವೆ ಮತ್ತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. 12 ಡಿಸೆಂಬರ್ 2018ರ ಹೊತ್ತಿಗೆ, ಯುಜಿಸಿ ಪ್ರಕಟಿಸಿದ ಕೇಂದ್ರ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ 49 ಕೇಂದ್ರ ವಿಶ್ವವಿದ್ಯಾನಿಲಯಗಳಿವೆ.
    
ರಾಜ್ಯ ವಿಶ್ವವಿದ್ಯಾನಿಲಯಗಳನ್ನು ರಾಜ್ಯ ಸರಕಾರವು ನಡೆಸುತ್ತದೆ ಮತ್ತು ಸಾಮಾನ್ಯವಾಗಿ ಸ್ಥಳೀಯ ಶಾಸಕಾಂಗ ಸಭೆಯ ಕಾಯ್ದೆಯಿಂದ ಸ್ಥಾಪಿಸಲ್ಪಡುತ್ತವೆ. 6 ಅಕ್ಟೋಬರ್ 2017ರ ಹೊತ್ತಿಗೆ, ಯುಜಿಸಿ ಪ್ರಕಟನೆ ಪ್ರಕಾರ 367 ರಾಜ್ಯ ವಿಶ್ವವಿದ್ಯಾನಿಲಯಗಳನ್ನು ಪಟ್ಟಿಮಾಡಿದೆ. ಹೆಚ್ಚಿನ ರಾಜ್ಯ ವಿಶ್ವವಿದ್ಯಾನಿಲಯಗಳು ಅನೇಕ ಅಂಗಸಂಸ್ಥೆ ಕಾಲೇಜುಗಳನ್ನು (ಸಾಮಾನ್ಯವಾಗಿ ಸಣ್ಣ ಪಟ್ಟಣಗಳಲ್ಲಿವೆ) ನಿರ್ವಹಿಸುವ ವಿಶ್ವವಿದ್ಯಾನಿಲಯಗಳನ್ನು ಸಂಯೋಜಿಸುತ್ತವೆ. ಡೀಮ್ಡ್ ವಿಶ್ವವಿದ್ಯಾನಿಲಯ, ಯುಜಿಸಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಯುಜಿಸಿಯ ಸಲಹೆಯ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯಿಂದ ನೀಡಲ್ಪಟ್ಟ ಸ್ವಾಯತ್ತತೆಯಾಗಿದೆ. 6 ಅಕ್ಟೋಬರ್ 2017ರ ಹೊತ್ತಿಗೆ, ಯುಜಿಸಿ 123 ಡೀಮ್ಡ್ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿದೆ. ಈ ಪಟ್ಟಿಯ ಪ್ರಕಾರ, ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ಪಡೆದ ಮೊದಲ ಸಂಸ್ಥೆ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ ಆಗಿದೆ, ಇದನ್ನು 12 ಮೇ 1958ರಂದು ನೀಡಲಾಯಿತು. ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಯುಜಿಸಿ ಅನುಮೋದಿಸುತ್ತದೆ. ಅವು ಪದವಿಗಳನ್ನು ನೀಡಬಹುದು, ಆದರೆ ಕ್ಯಾಂಪಸ್ ಸಂಯೋಜಿತ ಕಾಲೇಜುಗಳನ್ನು ಹೊಂದಲು ಅನುಮತಿಸಲಾಗುವುದಿಲ್ಲ. 6 ಅಕ್ಟೋಬರ್ 2017ರ ಹೊತ್ತಿಗೆ, ಖಾಸಗಿ ವಿಶ್ವವಿದ್ಯಾನಿಲಯಗಳ ಯುಜಿಸಿ ಪಟ್ಟಿ 282 ವಿಶ್ವವಿದ್ಯಾನಿಲಯಗಳನ್ನು ಗುರುತಿಸಿದೆ. ಈ ನಾಲ್ಕು ಬಗೆಯ ವಿಶ್ವವಿದ್ಯಾನಿಲಯಗಳ ವಿಧಗಳಲ್ಲಿ ಒಟ್ಟು 821 ವಿಶ್ವವಿದ್ಯಾನಿಲಯಗಳಿವೆ.

ಭಾರತದ ಮೊದಲ ವಿಶ್ವವಿದ್ಯಾನಿಲಯ ಜನವರಿ 24, 1857ರಂದು ಸ್ಥಾಪನೆಯಾಯಿತು. ಪಾಶ್ಚಾತ್ಯ ಶೈಲಿಯ ವಿಶ್ವವಿದ್ಯಾನಿಲಯವಾಗಿ ಸ್ಥಾಪನೆಯಾದ ಮೊದಲ ಸಂಸ್ಥೆಗಳಲ್ಲಿ ಇದೂ ಒಂದು. ಭಾರತದೊಳಗೆ ಇದನ್ನು ಫೈವ್-ಸ್ಟಾರ್ ವಿಶ್ವವಿದ್ಯಾನಿಲಯ ಎಂದು ಗುರುತಿಸಲಾಗಿದೆ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ ‘ಎ’ ಶ್ರೇಣಿಯ ಮಾನ್ಯತೆ ಪಡೆದಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ನಂತಹ ಕೆಲವು ಭಾರತೀಯ ವಿಶ್ವವಿದ್ಯಾನಿಲಯಗಳನ್ನು ವಿಶ್ವದ ಅಗ್ರ ವಿಶ್ವವಿದ್ಯಾನಿಲಯಗಳಲ್ಲಿ ಪಟ್ಟಿ ಮಾಡಲಾಗಿದೆ. ಹಣಕಾಸು ಕ್ಷೇತ್ರದಲ್ಲಿ, ಲಂಡನ್‌ನ ‘ಫೈನಾನ್ಷಿಯಲ್ ಟೈಮ್ಸ್’ ಪ್ರಕಾರ ‘ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್, ಹೈದರಾಬಾದ್’ ಜಾಗತಿಕ ಎಂಬಿಎ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಲ್ಲಿ, ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಕೇವಲ ಶಿಕ್ಷಣ ಸಂಸ್ಥೆಗಳ ಲಭ್ಯತೆಯೆಂದರೆ ನಮ್ಮಲ್ಲಿ ದೃಢವಾದ ಉನ್ನತ ಶಿಕ್ಷಣ ವ್ಯವಸ್ಥೆ ಇದೆಯೇ? ನಮ್ಮ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಅನೇಕ ಭಾಗಗಳಲ್ಲಿ ದುಸ್ಥಿತಿಯಲ್ಲಿದೆ. ಸುಮಾರು ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ದಾಖಲಾತಿ ತೀರಾ ಕಡಿಮೆ ಇದೆ. ನಮ್ಮ ಅನೇಕ ವಿಶ್ವವಿದ್ಯಾನಿಲಯಗಳ ಗುಣಮಟ್ಟದ ನಿಯತಾಂಕಗಳಲ್ಲಿ ಸರಾಸರಿಗಿಂತ ಕಡಿಮೆ ಇರುವುದು ಕಂಡು ಬಂದಿರುವುದು ವಿಷಾದಕರ ಸಂಗತಿ. ದುರದೃಷ್ಟವಶಾತ್, ನಮ್ಮ ವಿಶ್ವವಿದ್ಯಾನಿಲಯಗಳಿಂದ ಗುಣಮಟ್ಟದ ವಿಷಯದಲ್ಲಿ ತೀವ್ರ ಕೊರತೆಯಿದೆ. ವಿಶ್ವಮಟ್ಟದ ಸಂಶೋಧನೆಗಳಲ್ಲಿ ಕೆಲವೇ ಕೆಲವು ಹೊಸ ಆವಿಷ್ಕಾರಗಳು ಭಾರತೀಯ ನೆಲದಿಂದ ಬಂದಿವೆ. ಭಾರತದಲ್ಲಿ ಪ್ರತ್ಯೇಕವಾಗಿ ಕೆಲಸ ಮಾಡಿದ ಮತ್ತು ಭಾರತೀಯ ನೆಲದಿಂದ ತನ್ನ ಸಂಶೋಧನೆಯನ್ನು ಪ್ರಕಟಿಸಿದ ಭಾರತೀಯ ವಿಜ್ಞಾನಿಗಳಿಗೆ ನೊಬೆಲ್ ಬಹುಮಾನಗಳನ್ನು ನೀಡಲಾಗಿಲ್ಲ. ವಿದೇಶದಲ್ಲಿ ವಾಸಿಸುವ ಭಾರತೀಯರು ಮಾತ್ರ ಇದಕ್ಕೆ ಹೊರತಾಗಿದ್ದಾರೆ, ಆದ್ದರಿಂದ ಪ್ರತಿಭೆ ಇದೆ ಆದರೆ ಈ ಪ್ರತಿಭೆಯಿಂದ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದು ಬೃಹತ್ ಪ್ರತಿಭಾ ಪಲಾಯನಕ್ಕೆ ಕಾರಣವಾಗಿದೆ.

ವಿಶ್ವ ವಿದ್ಯಾನಿಲಯದ ಶಿಕ್ಷಣ ಮತ್ತು ಸಂಶೋಧನೆಗೆ ಯುಜಿಸಿ ಅಧ್ಯಕ್ಷರು ಇತ್ತೀಚೆಗೆ ಸಾಕಷ್ಟು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ನಾವು ನೋಡಿದ್ದೇವೆ. ಅಮೆರಿಕ (ಶೇ. 2.8), ಚೀನಾ (ಶೇ. 2.1), ಇಸ್ರೇಲ್ (ಶೇ. 4.3) ಮತ್ತು ಕೊರಿಯಾ (ಶೇ. 4.2)ಗೆ ಹೋಲಿಸಿದರೆ ಭಾರತ ತನ್ನ ಜಿಡಿಪಿಯ ಶೇಕಡಾ 0.6-0.7ರಷ್ಟು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡುತ್ತದೆ ಎಂಬುದು ನಿಜಕ್ಕೂ ಬೇಸರದ ಸಂಗತಿ.

ಶಿಕ್ಷಣದ ಖಾಸಗೀಕರಣ, ವಿಶೇಷವಾಗಿ ಉನ್ನತ ಶಿಕ್ಷಣವು ಭಾರತದ ಅತ್ಯಂತ ಚರ್ಚಾಸ್ಪದ ವಿಷಯವಾಗಿದೆ. ಭಾರತದ ಶೇ. 60ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಖಾಸಗಿ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುತ್ತವೆ. ವಿಶ್ವವಿದ್ಯಾನಿಲಯಗಳನ್ನು ಕ್ರಮೇಣ ಖಾಸಗಿ ಘಟಕಗಳಾಗಿ ಹೇಗೆ ಪರಿವರ್ತಿಸಲಾಗುತ್ತಿದೆ ಎಂಬುವುದು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟ ಅಂಶವಾಗಿದೆ.

ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (ಎಚ್‌ಇಎಫ್‌ಎ) ರಚನೆಯ ವಿಷಯವನ್ನು ತೆಗೆದುಕೊಳ್ಳೋಣ. ಹೆಫಾ, ಕೆನರಾ ಬ್ಯಾಂಕ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಂಎಚ್‌ಆರ್‌ಡಿ) ಜಂಟಿ ಉದ್ಯಮವಾಗಿದೆ. ಶೈಕ್ಷಣಿಕ ಮೂಲಸೌಕರ್ಯಗಳ ಸೃಷ್ಟಿಗೆ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇದು ಹಣಕಾಸಿನ ನೆರವು ನೀಡಬೇಕಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಯೋಜನೆಗಳಿಗೆ ಭಾರತ ಸರಕಾರ ಪ್ರಸ್ತುತ ನೀಡುತ್ತಿರುವ ಅನುದಾನದ ಸಹಾಯವನ್ನು ಹೆಫಾ ಧನಸಹಾಯವು ಬದಲಾಯಿಸುತ್ತದೆ. ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಹೆಫಾದಿಂದ ಸಾಲ ಪಡೆಯಲು ಮುಂದಾಗುತ್ತವೆ. ಈ ಒಪ್ಪಂದಗಳ ವ್ಯಾಪ್ತಿಯಲ್ಲಿ, ವಿಶ್ವವಿದ್ಯಾನಿಲಯಗಳು ಭೂಮಿಯನ್ನು ಅಥವಾ ಕಟ್ಟಡಗಳನ್ನು ಅಡಮಾನ ಇಡಬೇಕಾಗುತ್ತದೆ.

ಆದರೆ ಈ ಸಾಲವನ್ನು ಮರುಪಾವತಿಸುವ ವಿಧಾನ ಯಾವುದು? ಇದು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಅತ್ಯಾಧುನಿಕ ವಿಧಾನವಲ್ಲವೇ? ಎಂಬುದು ಚರ್ಚಾರ್ಹ.

ಗುಣಮಟ್ಟದ ಶಿಕ್ಷಣವು ಪ್ರಾಥಮಿಕ ಅಥವಾ ಉನ್ನತ ಶಿಕ್ಷಣವಾಗಲಿ ಇಂದಿನ ಶಿಕ್ಷಣ ವ್ಯವಸ್ಥೆಯ ‘‘ಮಂತ್ರ’’ ಆಗಿದೆ. ಭಾರತದ ಯಾವುದೇ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ವಿಶ್ವದ ಅಗ್ರ ನೂರು ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿಲ್ಲ. ಹೀಗಾಗಿ ಅನೇಕ ವಿಶ್ವ ವಿದ್ಯಾನಿಲಯಗಳು ನಿರುದ್ಯೋಗ ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಯಾಗಿವೆ. ನಮ್ಮ ದೇಶವು ವಿಶ್ವದ ಶೈಕ್ಷಣಿಕ ಕೇಂದ್ರವಾಗಲು, ಹೆಚ್ಚಿನ ಪ್ರಗತಿ ಸಾಧಿಸಲು ಉನ್ನತ ಶಿಕ್ಷಣದಲ್ಲಿನ ಗುಣಮಟ್ಟವು ಈಗಿನ ಸಮಯದ ಅತಿದೊಡ್ಡ ಅಗತ್ಯವಾಗಿದೆ. 21ನೇ ಶತಮಾನದಲ್ಲಿ ಭಾರತವು ತನ್ನ ಆಧಿಪತ್ಯವನ್ನು ಸ್ಥಾಪಿಸಲು ಬಹು ಆಯಾಮದ ಮತ್ತು ವಿಶಾಲ-ಆಧಾರಿತ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ, ಆದ್ದರಿಂದ ಭಾರತದಲ್ಲಿ ಶಿಕ್ಷಣವು ಇತರ ದೇಶಗಳೊಂದಿಗೆ ಪ್ರಮಾಣ ಮತ್ತು ಗುಣಮಟ್ಟದ ವಿಷಯದಲ್ಲಿ ಸ್ಪರ್ಧಾತ್ಮಕವಾಗಿಲ್ಲದ ಕಾರಣ ಶಿಕ್ಷಣದ ಗುಣಮಟ್ಟದ ಬಗ್ಗೆ ಭಾರತವು ಆ ದಿಸೆಯಲ್ಲಿ ತುಸು ಹೆಚ್ಚಿನ ಕಾಳಜಿವಹಿಸಬೇಕಿದೆ.

ಕೇವಲ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ ಶ್ರೇಷ್ಠತೆಗೆ ಒತ್ತು ನೀಡಬೇಕು. ಉತ್ತಮ ಮೂಲಸೌಕರ್ಯ ಮತ್ತು ಸೌಲಭ್ಯಗಳ ಮೇಲೆ ಹೆಚ್ಚಿನ ಗಮನವಹಿಸಬೇಕು. ಪ್ರತಿ ಕ್ಷೇತ್ರದ ಸಾಧಕರಿಗೆ ಸಮರ್ಪಕವಾಗಿ ಗುರುತಿಸಿ ಉತ್ತೇಜಿಸುವ ಕಾರ್ಯವಾಗಬೇಕು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಹೊರತುಪಡಿಸಿ ಇತರ ವೈವಿಧ್ಯಮಯ ಶಾಖೆಗಳ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬರಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಹೆಚ್ಚಿನ ಯೋಜನೆಗಳಿಗೆ ಮತ್ತು ಸಂಶೋಧನಾ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲು ವಿಶೇಷ ನಿಧಿಯನ್ನು ಸ್ಥಾಪಿಸಬೇಕು. ರವೀಂದ್ರನಾಥ ಟಾಗೋರ್ ಹೇಳಿರುವಂತೆ, ‘‘ಉನ್ನತ ಶಿಕ್ಷಣವೆಂದರೆ ಅದು ನಮಗೆ ಕೇವಲ ಮಾಹಿತಿಯನ್ನು ನೀಡುವುದಲ್ಲ, ಆದರೆ ಜೀವನವನ್ನು ಸರ್ವ ಅಸ್ತಿತ್ವಕ್ಕೆ ಅನುಗುಣವಾಗಿ ಮಾಡುವುದಾಗಿದೆ.’’ ನಮ್ಮ ವಿಶ್ವ ವಿದ್ಯಾನಿಲಯಗಳು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ.

Writer - ವಿಜಯಕುಮಾರ್ ಎಸ್. ಅಂಟೀನ

contributor

Editor - ವಿಜಯಕುಮಾರ್ ಎಸ್. ಅಂಟೀನ

contributor

Similar News