ಜೂ. 21ರಂದು ಸಚಿವ ಸಂಪುಟ ಸಭೆ

Update: 2021-06-17 16:12 GMT

ಬೆಂಗಳೂರು, ಜೂ.17: ರಾಜ್ಯದಲ್ಲಿ ನಾಯಕತ್ವದ ಬದಲಾವಣೆಗೆ ಸ್ವಪಕೀಯರಿಂದಲೇ ಆಗ್ರಹ ಕೇಳಿ ಬರುತ್ತಿರುವ ಬೆನ್ನಲ್ಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂ.21ರಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಸಚಿವ ಸಂಪುಟದ ಕೆಲ ಹಿರಿಯ ಸದಸ್ಯರು ಮುಖ್ಯಮಂತ್ರಿಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿರುವುದು ಹಾಗೂ ಕೆಲವು ಭಿನ್ನಮತೀಯ ಶಾಸಕರು ತಮ್ಮ ವಿರುದ್ಧ ಸಹಿ ಸಂಗ್ರಹ ಮಾಡಿರುವ ವಿಚಾರವನ್ನು ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬೆಂಗಳೂರಿಗೆ ಆಗಮಿಸಿದ್ದು ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಚಿವ ಸಂಪುಟದ ಎಲ್ಲ ಸದಸ್ಯರು, ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಆಡಳಿತ ಪಕ್ಷ ಹಾಗೂ ಸರಕಾರದಲ್ಲಿ ಮೂಡಿರುವ ಗೊಂದಲಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ.

ಇವೆಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ತನ್ನ ಫೋನ್ ಕದ್ದಾಲಿಕೆಯಾಗುತ್ತಿರುವ ಕುರಿತು ಸ್ಪೀಕರ್ ಹಾಗೂ ಗೃಹ ಸಚಿವರಿಗೆ ದೂರು ನೀಡಿರುವುದು, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಹಾಗೂ ಅವರ ಪುತ್ರನ ವಿರುದ್ಧ ಮಾಡಿರುವ ಆಪಾದನೆಗಳು, ಸಚಿವ ಸಿ.ಪಿ.ಯೋಗೇಶ್ವರ್ ಅಸಮಾಧಾನ ಇವೆಲ್ಲ ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಜೊತೆಗೆ, ಕೋವಿಡ್ ಲಾಕ್‍ಡೌನ್‍ನ ಎರಡನೆ ಹಂತದ ಅನ್‍ಲಾಕ್ ಜೂ.21ರಂದು ಬೆಳಗ್ಗೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಈ ನಡುವೆ ಕೆಲವು ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ಸೇರಿದಂತೆ ಇನ್ನಿತರ ಮಹತ್ವದ ಘೋಷಣೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸುವ ಸಾಧ್ಯತೆಗಳಿವೆ. ಅಲ್ಲದೆ, ಜುಲೈ ತಿಂಗಳಲ್ಲಿ ವಿಧಾನಮಂಡಲದ ಮಳೆಗಾಲದ ಅಧಿವೇಶನ ಕರೆಯಲು ದಿನಾಂಕ ನಿಗದಿಗೊಳಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News