ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ: ಡಿಸಿಎಂ ಅಶ್ವತ್ಥನಾರಾಯಣ

Update: 2021-06-17 12:33 GMT

ಬೆಂಗಳೂರು, ಜೂ.17: ನಮ್ಮ ಪಕ್ಷದಲ್ಲಿ ಯಾರು ಲಕ್ಷ್ಮಣರೇಖೆ ದಾಟಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿ ಅಲ್ಲ. ಈಗ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ರಾಮನಗರದಲ್ಲಿ ರೋಟರಿ ಬಿಜಿಎಸ್ ಆಸ್ಪತ್ರೆ (ಕೋವಿಡ್‍ಯೇತರ) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕತ್ವ ಬದಲಾವಣೆ ಸಂಬಂಧ ನಾನು ಏನನ್ನೂ ಹೇಳುವುದಿಲ್ಲ. ಯಾರಾದರು ಹೇಳಿಕೆಗಳನ್ನು ನೀಡಿದ್ದರೆ ಅವರನ್ನೇ ಕೇಳಿ. ಮುಂದಿನ ದಿನಗಳಲ್ಲಿ ನಾನು ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ಮುಂದುವರಿಯುತ್ತೇನೋ ಇಲ್ಲವೋ ಎಂದು ಹೇಳಲು ನನಗೆ ಭವಿಷ್ಯ ಹೇಳುವುದು ಗೊತ್ತಿಲ್ಲ ಎಂದರು.

ಸದ್ಯಕ್ಕೆ ನನಗೆ ರಾಮನಗರ ಜಿಲ್ಲೆಯ ಉಸ್ತುವಾರಿಯಾಗಿ ಮುಖ್ಯಮಂತ್ರಿ ಅವರು ಅವಕಾಶ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ಈಗಾಗಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಅರುಣ್ ಸಿಂಗ್ ಅವರ ಭೇಟಿ ಹಾಗೂ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎಲ್ಲವೂ ಸರಿಹೋಗುತ್ತದೆ ಎಂದು ಅವರು ಪುನುರುಚ್ಛರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪದೇಪದೆ ಸಮಾಲೋಚನೆ ನಡೆಯುತ್ತಲೇ ಇರುತ್ತದೆ. ಇದರಲ್ಲಿ ತಪ್ಪೇನಿದೆ. ಸರಕಾರ ಉತ್ತಮವಾಗಿ ಕೆಲಸ ಮಾಡುವುದು, ಪಕ್ಷವನ್ನು ಬಲಿಷ್ಠವಾಗಿ ಮುನ್ನಡೆಸುವುದು, ಜನಾಭಿಪ್ರಾಯ ಸಂಗ್ರಹಿಸುವುದು, ಜನರ ಬಳಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ಹೇಳಿದರು.

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಇಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ   ಚರ್ಚೆ ನಡೆಯುತ್ತಿದೆ. ನಾವು ಅಧಿಕಾರ ಪಡೆದಿರುವುದೇ ಜನರ ಸೇವೆಗೆ ಎನ್ನುವುದನ್ನು ಮರೆಯಬಾರದು. ಸಚಿವರಾದ ಸಿ.ಪಿ.ಯೋಗೇಶ್ವರ್, ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ. ನೀವು ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಬಹುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಮುಂದಿನ ಚುನಾವಣೆಗೆ ಪಕ್ಷದ ಮೂಲಕವೇ ಮತಯಾಚನೆ ನಡೆಸುತ್ತೇವೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಎದುರಿಸುವಷ್ಟೇ ನಮ್ಮ ಗುರಿ. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡಿದರು.

ನಮ್ಮ ಬಿಜೆಪಿ ಪಕ್ಷಕ್ಕೆ ಶಕ್ತಿ, ನಿರ್ದಿಷ್ಟ ಗುರಿ ಇದೆ. ಮುಂದಿನ ಹಾದಿಗಳ ಬಗ್ಗೆ ಪಕ್ಷವೇ ನಿರ್ಧಾರ ಮಾಡುತ್ತದೆ. ಈಗ ಯಾವುದೇ ಗೊಂದಲ ಇದ್ದರೂ ಪರಿಹಾರವಾಗುತ್ತದೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರಕಾರ ನಡೆಯುತ್ತಿದೆ. ನಾನು ಅವರ ಸಂಪುಟದಲ್ಲೇ ಇದ್ದೇನೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಈಗ ಏನೇ ಹೇಳಿದರೂ ಗೊಂದಲ ಸೃಷ್ಟಿಯಾಗುತ್ತದೆ. ಆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಅವರು ಹೇಳಿದರು.

ಯಾವಾಗಲು ಸ್ಪರ್ಧೆ ಇರಬೇಕು. ಆಸೆ ಇರಬೇಕು. ಇಂದು ಉಸ್ತುವಾರಿ ಸಚಿವನಾಗಿ ನಾನಿದ್ದೇನೆ. ಮುಂದೆ ಇನ್ಯಾರೊ ಇರುತ್ತಾರೆ. ಇದರಲ್ಲಿ ತಪ್ಪೇನು ಎಂದು ಜಿಲ್ಲಾ ಉಸ್ತುವಾರಿ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಮಾಗಡಿಯಿಂದ ಸ್ಪರ್ಧೆ ಇಲ್ಲ: ಮಾಗಡಿಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಯಾರು ಘೋಷಣೆ ಮಾಡಿದರೊ ಅವರನ್ನೆ ಕೇಳಬೇಕು. ಅಂತಹ ಯಾವುದೇ ಉದ್ದೇಶ ನನಗೆ ಇಲ್ಲ. ಚುನಾವಣೆಗಾಗಿ ನಾನು ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದೆನೆ. ನಾನು ಮಲ್ಲೆಶ್ವರಂ ಕ್ಷೇತ್ರದಲ್ಲಿ ಭದ್ರವಾಗಿದ್ದೆನೆ ಎಂದು ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News