ಚೆನ್ನೈ ಬಳಿ ಸಮುದ್ರಕ್ಕೆ ಭಾರಿ ತೈಲ ಸೋರಿಕೆ

Update: 2021-06-18 04:13 GMT

ಹೊಸದಿಲ್ಲಿ: ಪೋರ್ಚುಗಲ್ ಧ್ವಜ ಹೊಂದಿದ್ದ ಕಂಟೈನರ್ ಹಡಗು ಎಂವಿ ಡೆವೋನ್‌ನಿಂದ ಚೆನ್ನೈ ಬಳಿ ಸಮುದ್ರದಲ್ಲಿ ಸುಮಾರು 10 ಸಾವಿರ ಲೀಟರ್ ತೈಲ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತೈಲ ಸೋರಿಕೆ ನಿಯಂತ್ರಿಸಲು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸನ್ನದ್ಧವಾಗಿದೆ.

ಸೋರಿಕೆ ತಡೆ ಕ್ರಮಗಳನ್ನು ಕೈಗೊಳ್ಳುವ ವೇಳೆಗಾಗಲೇ 10 ಸಾವಿರ ಲೀಟರ್‌ನಷ್ಟು ತೈಲ ಸಮುದ್ರಕ್ಕೆ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಉಳಿದ ತೈಲವನ್ನು ಹಡಗಿನ ಸಿಬ್ಬಂದಿಯ ನೆರವಿನೊಂದಿಗೆ ಬೇರೆ ಟ್ಯಾಂಕ್‌ಗೆ ವರ್ಗಾಯಿಸಲಾಯಿತು ಎಂದು ಉನ್ನತ ಮೂಲಗಳು ಹೇಳಿವೆ.

"ಚೆನ್ನೈನಲ್ಲಿರುವ ಮಾಲಿನ್ಯ ಸ್ಪಂದನೆ ತಂಡಕ್ಕೆ ಸಜ್ಜಾಗಿರುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಐಜಿಸಿ ಹಡಗು ಮತ್ತು ವಿಮಾನಗಳನ್ನು ನಿಯೋಜಿಸಲಾಗಿದೆ" ಎಂದು ಐಜಿಸಿ ಮೂಲಗಳು ಹೇಳಿವೆ.

ಚೆನ್ನೈನಿಂದ ಆಗ್ನೇಯಕ್ಕೆ ಸುಮಾರು 450 ಕಿಲೋಮೀಟರ್ ದೂರದಲ್ಲಿ ಸಮುದ್ರಮಧ್ಯದಲ್ಲಿ ಸೋರಿಕೆಯಾಗಿದೆ ಎಂಬ ಮಾಹಿತಿ ಇದೆ. ಈ ಹಡಗು ಕೊಲಂಬೊದಿಂದ ಪಶ್ಚಿಮ ಬಂಗಾಳದ ಹಲ್ದಿಯಾಗೆ ಹೋಗುತ್ತಿತ್ತು ಎನ್ನಲಾಗಿದೆ. ಕಂಟೈನರ್‌ನಲ್ಲಿ 120 ಸಾವಿರ ಲೀಟರ್ ತೈಲ ಇತ್ತು ಎಂದು ತಿಳಿದುಬಂದಿದೆ.

ಈ ಹಡಗಿನ ಮೂಲಕ 382 ಕಂಟೈನರ್‌ಗಳಲ್ಲಿ 10795 ಟನ್ ಸರಕು ಸಾಗಿಸಲಾಗುತ್ತಿತ್ತು. ಶುಕ್ರವಾರ ಇದು ಹಲ್ದಿಯಾ ತಲುಪವ ನಿರೀಕ್ಷೆ ಇದೆ. ಐಜಿಸಿ ಎಂವಿ ಡೆವೋನ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಹಡಗು ಈಗ ಸುಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News