ಬೆಡ್ ಬ್ಲಾಕಿಂಗ್ ಹಗರಣ: ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಆಪ್ತ ಸೇರಿ ಮೂವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

Update: 2021-06-18 12:40 GMT

ಬೆಂಗಳೂರು, ಜೂ.18: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಆಪ್ತ ಬಾಬು ಸೇರಿ ಮೂವರು ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ನಗರದ 1ನೆ ಎಸಿಎಂಎ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 

ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು, ರೋಹಿತ್ ಮತ್ತು ನೇತ್ರಾವತಿ ವಿರುದ್ಧ ಸಿಸಿಬಿ ಪೊಲೀಸರು ಕೋರ್ಟ್ ಗೆ 150 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಆರೋಪಿಗಳು ಕೊರೋನ ಸೋಂಕಿತರಿಗೆ ಮೀಸಲಿಟ್ಟಿದ್ದ ಆಸ್ಪತ್ರೆಯ ಬೆಡ್‌ಗಳನ್ನು ಬ್ಲಾಕ್ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಾಕ್ಷಿ ಲಭ್ಯವಾಗಿದೆ. ಗೂಗಲ್ ಪೇ, ಪೋನ್ ಪೇ ಮೂಲಕ ಹಣದ ವರ್ಗಾವಣೆ ನಡೆದಿದ್ದು, ರೋಗಿಗಳಿಂದ 18 ಸಾವಿರ, 20, 25 ಸಾವಿರ ರೂ. ನಂತೆ ಹಣ ಪಡೆದಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. 

ಹಣ ಕೊಟ್ಟವರಿಗೆ ಬಾಬು ವಾರ್ ರೂಮ್ ಸಂಪರ್ಕದಿಂದ ಕೋವಿಡ್ ಬೆಡ್ ಕೊಡಿಸುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಂದು ಪ್ರಕರಣದಲ್ಲಿ ಕೆಲವು ಆಸ್ಪತ್ರೆ ಸೇರಿದಂತೆ ಎಂಟು ಮಂದಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ.

ಬೆಡ್ ಬ್ಲಾಕಿಂಗ್ ಪ್ರಕರಣವನ್ನು ಹೊರಗೆಳೆಯುವ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಪೈಕಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಸಿಬ್ಬಂದಿಯ ಹೆಸರನ್ನು ಮಾತ್ರ ಹೇಳಿದ್ದು, ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸಿದ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿತ್ತು. ಆದರೆ ತನಿಖೆಯ ವೇಳೆ ಬಿಜೆಪಿ ಕಾರ್ಯಕರ್ತರೇ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡಿದ್ದು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News