ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವ ಶಾಸಕ ಝಮೀರ್ ಅಹ್ಮದ್: ಸಿದ್ದರಾಮಯ್ಯ

Update: 2021-06-19 17:25 GMT

ಬೆಂಗಳೂರು, ಜೂ.19: ಕೋವಿಡ್ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಮಾಜದ ಎಲ್ಲ ವರ್ಗಗಳ ಜನರಿಗೆ ತಮ್ಮ ಸ್ವಂತ ಖರ್ಚಿನಿಂದ ನೆರವು ನೀಡುತ್ತಿರುವ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಚಾಮರಾಜಪೇಟೆ ಕ್ಷೇತ್ರದ ಶಾಸಕರ ಕಚೇರಿ ಬಳಿ ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿಕ ವಲಯದಲ್ಲಿನ ಸವಿತಾ ಸಮಾಜ, ಮಂಗಳಮುಖಿಯರು, ಅಗರಬತ್ತಿ ಕಾರ್ಮಿಕರು, ಕುರುಡರು, ಸಂಡೆ ಬಝಾರ್ ಮ್ಯಾಕ್ಸಿ ವ್ಯಾಪಾರಸ್ಥರು, ದಿನ ಪತ್ರಿಕೆ ಹಂಚುವವರು, ಆಟೋ ಚಾಲಕರು, ಬಿಬಿಎಂಪಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು, ಸಿಬ್ಬಂದಿಗಳು, ಹೌಸ್ ಕೀಪಿಂಗ್ ಸಿಬ್ಬಂದಿಗಳಿಗೆ 2000 ರೂ.ನಗದು, ದಿನಸಿ ಕಿಟ್, ಸ್ಟೀಮರ್, ಸ್ಯಾನಿಟೈಸರ್, ಮಾಸ್ಕ್ ಹಾಗೂ ಆನಂದಪುರ ಕೊಳಚೆ ಪ್ರದೇಶದ 1600 ಮನೆಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಝಮೀರ್ ಅಹ್ಮದ್ ಖಾನ್ ಈಗಾಗಲೇ ಸಮಾಜದ ವಿವಿಧ ವಲಯಗಳ ಜನರಿಗೆ ನೆರವು ನೀಡಿದ್ದಾರೆ. ಇದೀಗ ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವವರ ನೆರವಿಗೆ ಧಾವಿಸಿದ್ದಾರೆ. ಬಡವರ ಸೇವೆಗಾಗಿ ಸದಾ ಮುಂಚೂಣಿಯಲ್ಲಿರುವ ಶಾಸಕ ಇವರು. ಬಡವರಿಗೆ ಆಹಾರ, ಆರೋಗ್ಯ ಹಾಗೂ ಆರ್ಥಿಕ ನೆರವನ್ನು ಸದಾ ಮಾಡಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಕೋವಿಡ್ ಎರಡನೆ ಅಲೆಯ ಸಂಕಷ್ಟ ಎದುರಾಗಿದೆ. ಕಳೆದ ಸಾಲಿನ ನವೆಂಬರ್ ನಲ್ಲಿಯೇ ತಜ್ಞರು ಕೋವಿಡ್ ಎರಡನೆ ಅಲೆಯ ಬಗ್ಗೆ ವರದಿ ಕೊಟ್ಟಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡಿದ್ದರಿಂದ, ಸಾವಿರಾರು ಮಂದಿ ಕೋವಿಡ್ ಸೋಂಕಿತರು ಹಾಸಿಗೆ, ಆಕ್ಸಿಜನ್ ಹಾಗೂ ಅಗತ್ಯ ವೈದ್ಯಕೀಯ ನೆರವು ಸಿಗದೆ ಸಾವನ್ನಪ್ಪಿದರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಬಿಪಿಎಲ್ ಕಾರ್ಡುದಾರರಿಗೆ ಸರಕಾರ 10 ಸಾವಿರ ರೂ.ಗಳ ಆರ್ಥಿಕ ನೆರವು ಒದಗಿಸಿ, ಲಾಕ್‍ಡೌನ್ ಮಾಡಿದ್ದರೆ ಜನರು ಬದುಕುತ್ತಿದ್ದರು. ಆದರೆ, ಸರಕಾರ ಬಡವರಿಗೆ ಯಾವುದೆ ನೆರವು ನೀಡದೆ, ಲಾಕ್‍ಡೌನ್ ಮಾಡಿದ್ದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಯಿತು. ಸೋಂಕು ಬರದಂತೆ ತಡೆಯಲು ದೇಶದ 130 ಕೋಟಿ ಜನರಿಗೂ ಲಸಿಕೆ ಹಾಕಬೇಕು. ಆದರೆ, ಇವರು ನಮ್ಮನ್ನು ಕಡೆಗಣಿಸಿ ವಿದೇಶಕ್ಕೆ 6.50 ಕೋಟಿ ಲಸಿಕೆ ನೀಡಿದರು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ರೀತಿಯಿದೆ ಕೇಂದ್ರ ಸರಕಾರದ ಧೋರಣೆ ಎಂದು ಅವರು ಹೇಳಿದರು.

ಶಾಸಕ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಬಿಜೆಪಿ ಸರಕಾರ ಏನು ಮಾಡುತ್ತಿಲ್ಲ. ಸರಕಾರ ಮಾಡಬೇಕಾದ ಕೆಲಸವನ್ನು ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಕಾರ್ಯಕರ್ತರು, ಮಾಜಿ ಶಾಸಕರು ಮಾಡಿಕೊಂಡು ಬರುತ್ತಿದ್ದಾರೆ. ಎರಡನೆ ಅಲೆ ಬಂದ ಮೇಲೆ ವೇಳೆ ಜೆಡಿಎಸ್‍ನವರು ಹೋಂ ಕ್ವಾರಂಟೈನ್ ಆಗಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರು ಎಲ್ಲ ಸಹವಾಸ ಬಿಟ್ಟು ತೋಟಕ್ಕೆ ಸೇರಿಕೊಂಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರುವುದು ಬಿಟ್ಟು, ತೋಟ ಸೇರಿಕೊಳ್ಳಲು ನಿಮಗೆ ಜನ ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದರೇ? ಪ್ರಶ್ನಿಸಿದ ಅವರು, ಬಿಪಿಎಲ್ ಪಡಿತರ ಚೀಟಿ ಹೊಂದಿರುವರ ಪೈಕಿ ಯಾರು ಮನೆಗಳಲ್ಲಿ ಆದಾಯ ಗಳಿಸುವವರು ಇರುತ್ತಾರೋ ಅಂತಹವರು ಕೋವಿಡ್‍ನಿಂದ ಮೃತಪಟ್ಟರೆ ಮಾತ್ರ ಒಂದು ಲಕ್ಷ ರೂ.ಪರಿಹಾರ ನೀಡುವುದಾಗಿ ಸರಕಾರ ಹೇಳಿದೆ. ಇದು ಯಾವ ನ್ಯಾಯ. ಎಪಿಎಲ್ ಕಾರ್ಡು ಹೊಂದಿರುವಂತಹವರು ಸತ್ತಿದ್ದಾರೆ ಅವರ ಪರಿಸ್ಥಿತಿ ಏನು? 12, 13 ಲಕ್ಷ ರೂ. ಚಿಕಿತ್ಸೆಗಾಗಿ ಖರ್ಚು ಮಾಡಿ ಹೈರಾಣಾಗಿದ್ದಾರೆ ಅವರ ಬಗ್ಗೆ ಸರಕಾರದ ನಿರ್ಲಕ್ಷ್ಯವೇಕೆ ಎಂದರು.

ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಅನ್ನಲು ನನಗೆ ಮನಸ್ಸು ಬರುತ್ತಿಲ್ಲ. ಅವರನ್ನು ಭಾವಿ ಸಿಎಂ ಹೇಳಲು ನಾನು ಇಚ್ಛಿಸುತ್ತೇನೆ. ಅವರ ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜ್ಯದ ಜನತೆಯೂ ಅದನ್ನೆ ಬಯಸುತ್ತಿದ್ದಾರೆ. ತಮ್ಮ ಆರೋಗ್ಯ, ಪ್ರಾಣವನ್ನು ಲೆಕ್ಕಿಸದೆ ಸಿದ್ದರಾಮಯ್ಯ ಜನರಿಗಾಗಿ ಹೋರಾಡುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಕಳೆದ ಒಂದೂವರೆ ವರ್ಷದಿಂದ ನಾವು ಶ್ರಮಿಸುತ್ತಿದ್ದೇವೆ. ಚಾಮರಾಜಪೇಟೆಯಲ್ಲಿ ವಿವಿಧ ಕಡೆಗಳಲ್ಲಿ 350 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಉಚಿತ ಔಷಧಿ ಜೊತೆಯಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸೇವಾ ದಳದ ಕಾರ್ಯಕರ್ತರಿಗೂ ಝಮೀರ್ ಅಹ್ಮದ್ ಖಾನ್ ಅವರ ವತಿಯಿಂದ ಕೋವಿಡ್ ಲಸಿಕೆ ಹಾಕಿಸುವ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ಡಾ.ಅಜಯ್‍ಸಿಂಗ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಕಾಂಗ್ರೆಸ್ ಮುಖಂಡ ಬಿ.ಕೆ.ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News