ಕ್ಷಮಿಸು ವಿಜಯ್ ನೀನೀಗ ನಮ್ಮವ!

Update: 2021-06-19 19:30 GMT

ವಿಜಯ್ ಮರೆಯಾದ. ಇತ್ತೀಚೆಗೆ ಸಂಭವಿಸಿದ ಯಾವ ಸಾವುಗಳೂ ನನ್ನನ್ನು ಇಷ್ಟು ಕಾಡಲಿಲ್ಲ. ಅವನ ಸಾವಿಗೆ ಇಡೀ ನಾಡೇ ಮರುಗಿತ್ತು. ಪಂಚನಹಳ್ಳಿ ಜನ ಕೈಚಾಚಿ ‘‘ಇವ ನಮ್ಮವನು’’ ಎಂದರು. ಆದರೇನು ವಿಜಯ್ ಹೊರಟುಹೋಗಿದ್ದ. ನಾವು ನಿನ್ನನ್ನು ನಡೆಸಿಕೊಂಡ ರೀತಿಗೆ ಕ್ಷಮೆ ಕೇಳುತ್ತೇವೆ ಎನ್ನುವ ಭಾವ ಅವರಲ್ಲಿ ಮೂಡಿದ್ದರೆ ಅದಕ್ಕೆ ವಿಜಯ್‌ನ ಶ್ರೇಷ್ಠ ಬದುಕೇ ಕಾರಣ.


ಸಂಚಾರಿ ವಿಜಯ್‌ನನ್ನು ಪಂಚನಹಳ್ಳಿ ಪ್ರಾಂತದ ಜನ ಕಡೆಗೂ ಅಪ್ಪಿಕೊಂಡದ್ದು ನೋಡಿ ವಿಷಾದ ಮಿಶ್ರಿತ ಕಿರುನಗೆ ಮೂಡಿತು. ಈ ನಡುವೆ ಅಜ್ಜಂಪುರದ ಪ್ರಸ್ತಾಪವೇ ಬರಲಿಲ್ಲ. ನಾನು ಅಜ್ಜಂಪುರದಲ್ಲಿ ಹದಿನಾಲ್ಕು ವರ್ಷವಿದ್ದು, ಆ ಊರಿನಿಂದ ಶಿವಮೊಗ್ಗಕ್ಕೆ ವರ್ಗವಾದಾಗ ವಿಜಯ್‌ನಿಗೆ ಬಹುಶಃ ಆರು ವರ್ಷಗಳಾಗಿರಬಹುದು. ಹಾಗೆಂದು ನಾನೇನು ಅವನನ್ನು ನೋಡಿರಲಿಲ್ಲ. ಆದರೆ ಆತನ ತಂದೆ ತಾಯಿಯನ್ನು ನೋಡಿದ್ದೆ.

ಆತನ ತಾಯಿ ಗೌರಮ್ಮ ಇಲ್ಲಿನ ಹರಿಜನ ಕೇರಿಯವರು. ಪ್ರತಿಭಾವಂತ ಹೆಣ್ಣುಮಗಳು. ಊರ ಕೆಲಸಗಳಿಗೆ ಮುನ್ನುಗ್ಗಿ ಹೋಗುತ್ತಿದ್ದ ದಿಟ್ಟ ಮಹಿಳೆ. ಇಲ್ಲಿನ ಹರಿಜನ ಕೇರಿ ಬೇರೆ ಊರಿನಂತಲ್ಲ. ಗಾಂಧೀಜಿಯ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಶೆಟ್ಟರು ಇಲ್ಲಿನ ಹರಿಜನ ಕೇರಿಗೆ ಬಂದು ಭಜನೆ ಮಾಡುತ್ತಾ, ಬಡ ಹುಡುಗರ ಶುಲ್ಕ ಕಟ್ಟಿ ಅವರನ್ನು ಓದಿಸುತ್ತಿದ್ದುದಲ್ಲದೆ, ಅಸ್ಪೃಶ್ಯತೆ ತೊಡೆದುಹಾಕಲು ಹೋರಾಡುತ್ತಿದ್ದರು. ಅವರು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದುದು ಹೇಗೆಂದರೆ ಆಗಸ್ಟ್ 15ರಂದು ಹರಿಜನರನ್ನು ಮನೆಗೆ ಕರೆತಂದು ಎಲ್ಲರಿಗೂ ಸ್ನಾನ ಮಾಡಿಸುತ್ತಿದ್ದರು. ದಲಿತರ ಮೈಗೆ ಅವರು ಸೋಪು ಹಾಕಿ ಉಜ್ಜುತ್ತಿದ್ದರೆ, ಹೆಂಡತಿ ರುಕ್ಮಿಣಿಯಮ್ಮನವರು ನೀರು ಹಾಕಬೇಕಿತ್ತು. ಅವರಿಬ್ಬರೂ ಆ ಊರಿನ ಭಾಗಕ್ಕೆ ಗಾಂಧೀಜಿ, ಕಸ್ತೂರಿಬಾರಂತಿದ್ದರು. ಹಾಗಾಗಿ ಅಜ್ಜಂಪುರದ ಹರಿಜನಕೇರಿಯ ಹುಡುಗರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ.

ವಿಜಯನ ತಾಯಿ ಗೌರಮ್ಮ ಕೂಡ ತನ್ನೆಲ್ಲ ಸಂಕೋಚ ಮತ್ತು ಕೀಳರಿಮೆ ಬಿಟ್ಟು ಅಲ್ಲಿನ ಆಸ್ಪತ್ರೆಯ ಆಯಾ ಆಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಅಜ್ಜಂಪುರದ ಕಲಾಕ್ಷೇತ್ರದವರು ಆಡುತ್ತಿದ್ದ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಪಾತ್ರ ಮಾಡುವುದಲ್ಲದೆ, ಹಾಡನ್ನೂ ಹೇಳುತ್ತಿದ್ದರು. ಅವರು ಜನಪದ ಹಾಡುಗಳನ್ನು ಮನಮುಟ್ಟುವಂತೆ ಹಾಡುತ್ತಿದ್ದರು. ‘ಜಗಜ್ಯೋತಿ ಬಸವೇಶ್ವರ’ ನಾಟಕ ಈ ನಾಡಿನಾದ್ಯಂತ ನೂರಾರು ಪ್ರದರ್ಶನ ಕಂಡು ಅದರ ಆದಾಯದಲ್ಲೇ ಕಲಾಶ್ರೀ ರಂಗಮಂದಿರ ನಿರ್ಮಿಸಲಾಗಿತ್ತು. ಮೇಲ್ಛಾವಣಿ ಮುಚ್ಚಲು ಸಾಧ್ಯವಾಗದಿದ್ದಾಗ ಅಂದಿನ ಚಿಕ್ಕಮಗಳೂರು ಡಿ.ಸಿ. ಆಗಿದ್ದ ಎಚ್. ಎಲ್. ನಾಗೇಗೌಡರು ರಂಗಮಂದಿರ ಪೂರ್ಣಗೊಳಿಸಿದರು. ಕಾಲಕ್ರಮೇಣ ‘ಜಗಜ್ಯೋತಿ ಬಸವೇಶ್ವರ’ ನಾಟಕವು ನಿಂತುಹೋಯಿತು ನಿರುದ್ಯೋಗಿಯಂತಾದ ಗೌರಮ್ಮನವರು ದಿನ ಕೂಲಿ ಕೆಲಸಕ್ಕೆ ಆಸ್ಪತ್ರೆಗೆ ಹೋಗತೊಡಗಿದರು. ಅಲ್ಲಿನ ವೈದ್ಯರು ‘‘ಗೌರಮ್ಮ ನೀನು ಏಳನೇ ತರಗತಿ ಪಾಸು ಮಾಡಿದರೆ ನಿನ್ನ ಕೆಲಸ ಖಾಯಂ ಮಾಡುತ್ತೇನೆ’’ ಎಂದರು. ಗೌರಮ್ಮ ಏಳನೇ ತರಗತಿ ಪಾಸು ಮಾಡಿದರು. ಅವರ ಆಯಾ ವೃತ್ತಿ ಖಾಯಂ ಆಯಿತು. ಜೊತೆಗೆ ಪಂಚನಹಳ್ಳಿಗೆ ವರ್ಗವಾಯಿತು.

ಪಂಚನಹಳ್ಳಿಯಲ್ಲಿ ಅದಾಗಲೇ ಬಸವರಾಜಯ್ಯ ರೆವಿನ್ಯೂ ಇಲಾಖೆಯಲ್ಲಿದ್ದು, ತಬಲ ನುಡಿಸುವ ಕಲಾವಿದರೂ ಆಗಿದ್ದುದರಿಂದ ಎರಡು ಪ್ರತಿಭೆಗಳ ಪರಿಚಯವಾಯಿತು. ಈ ಪ್ರತಿಭೆಗಳ ಪ್ರೇಮದ ನಡುವೆ ಜಾತಿ ಗಣನೆಗೇ ಬರಲಿಲ್ಲ. ಆದರೆ ಪಂಚನಹಳ್ಳಿ ಪಂಚಮಸಾಲಿಗಳಿಗೆ ಇದು ಬರಸಿಡಿಲ ಸುದ್ದಿಯಾಗಿತ್ತು. ಅವರು ತಲೆಗೊಂದರಂತೆ ಮಾತಾಡಿದರು. ಆದರೆ ಈ ಇಬ್ಬರು ಪ್ರೇಮಿಗಳಿಗೆ ಜನರ ಮಾತುಗಳು ಕ್ಷುದ್ರ ಸಂಗತಿಗಳಂತೆ ಕಂಡವು. ಯಾರ ಮಾತಿಗೂ ಕಿವಿಗೊಡದೆ ಅವರು ಮದುವೆಯಾದರು. ಜನ ಬಸವರಾಜಯ್ಯನವರನ್ನು ಹರಿಜನರಿಗೇ ಜಮಾವೊಟು ಮಾಡಿ ಕುಹಕ ಮತ್ತು ವ್ಯಂಗ್ಯದಿಂದ ಮಾತನಾಡಿಸುತ್ತಿದ್ದರು. ಇನ್ನು ಗೌರಮ್ಮನ ಬಗೆಗಿನ ಜಾತಿ ಮನಸ್ಸು ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದ ಜಾಡಿನಲ್ಲೇ ಮುಂದುವರಿಯಿತು. ಈ ಜೋಡಿ ಪಂಚನಹಳ್ಳಿ ಪ್ರಾಂತದ ಜನರ ಬಾಯಿಗೆ ಸಿಕ್ಕ ರುಚಿಕಟ್ಟಾದ ವಸ್ತುವಾಯಿತು. ಇವರಿಗಾದ ಇಬ್ಬರು ಮಕ್ಕಳು ಕೂಡ ಇದನ್ನು ಅನುಭವಿಸಿದರು. ನಮ್ಮನ್ನು ಜನರೇಕೆ ಈ ರೀತಿ ನಡೆಸಿಕೊಳ್ಳುತ್ತಾರೆ ಎಂಬುದು ಅವರಿಗೆ ಅರ್ಥೈಸಿಕೊಳ್ಳಲಾರದ ಸಂಗತಿಯಾಗಿತ್ತು.

ಈ ಜನ ದಲಿತರನ್ನು ನಡೆಸಿಕೊಳ್ಳುತ್ತಿರುವ ಕ್ರೌರ್ಯಕ್ಕೆ ಮಿತಿಯಿರಲಿಲ್ಲ. ಹಾಗಾಗಿ ತಾವು ಹರಿಜನರು ಅನ್ನುವಂತಿರಲಿಲ್ಲ. ಇನ್ನು ಅಲ್ಲಿನ ಪಂಚಮಸಾಲಿ ಲಿಂಗಾಯತರು ಮನೆಯೊಳಗೆ ಬಸವಣ್ಣನ ಫೋಟೊ ಇಟ್ಟುಕೊಂಡರೂ ಆಚರಿಸುತ್ತಿರುವ ಅಸ್ಪಶ್ಯತೆ ನೋಡಿದರೆ ಅವರ ಮನೆಗಳಿಗೂ ಹೋಗುವಂತಿಲ್ಲ. ಹಾಗಾಗಿ ಊರು ಬಿಡುವುದು ಆ ಮಕ್ಕಳಿಗೆ ಅನಿವಾರ್ಯವಾಗಿತ್ತು. ತಂದೆತಾಯಿಗಳು ತಾವು ಕ್ರಾಂತಿ ಮಾಡಿದ ನೆಲದಲ್ಲಿ ಜಯಿಸಿ ನಿಂತರು. ಯಾಕೆಂದರೆ ಬಸವರಾಜಯ್ಯ ರೆವಿನ್ಯೂ ಇಲಾಖೆಯ ನೌಕರರಾಗಿದ್ದರು. ಗೌರಮ್ಮ ಸರಕಾರಿ ಆಸ್ಪತ್ರೆಯ ಆಯಾ ಆಗಿದ್ದರು. ಹೀಗಾಗಿ ಯಾರ ಹಂಗೂ ಇಲ್ಲದೆ ಅವರ ಬದುಕು ಸರಾಗವಾಗಿತ್ತು. ಈ ದಂಪತಿ ಅಜ್ಜಂಪುರಕ್ಕೆ ಬಂದಾಗ ದಲಿತರ ಕೇರಿಯಲ್ಲೇ ನೆಲೆಸಿದ್ದರು. ಗೌರಮ್ಮನ ಮನೆ ಇದ್ದುದೂ ಅಲ್ಲಿಯೇ. ಆ ಸಮಯದಲ್ಲಿ ಅಜ್ಜಂಪುರದಲ್ಲೊಂದು ಕ್ರಾಂತಿ ನಡೆಯಿತು. ಸಾವಿರಾರು ವರ್ಷಗಳಿಂದ ದಲಿತರ ಹೆಣ್ಣುಮಕ್ಕಳಿಗೆ ಸಿಡಿ ಆಡಿಸುತ್ತಿದ್ದರು. ಇದು ಆ ಜನಾಂಗದ ಹೆಣ್ಣುಮಕ್ಕಳಿಗೆ ಅವಮಾನಕರ ಪ್ರಸಂಗವಾಗಿದ್ದುದು ಅವರ ಅರಿವಿಗೇ ಬಂದಿರಲಿಲ್ಲ. ಆರಾಳಮ್ಮನಿಗೆ ಸಿಡಿ ಹೋಗುವುದೆಂದರೆ ಊರಿಗೆ ಒಳ್ಳೆಯದಾಗಲೆಂದು ನಡೆದುಕೊಳ್ಳುವ ಪೂಜೆಯಾಗಿತ್ತು. ಇಡೀ ಊರು ಸಂಭ್ರಮದಲ್ಲಿ ಆಚರಿಸುವ ಈ ಹಬ್ಬವೇ ನಡೆಯದಂತೆ ಯಾರೋ ಅರ್ಜಿ ಬರೆದದ್ದರಿಂದ ಇಡೀ ಜಿಲ್ಲಾಡಳಿತವೇ ಅಜ್ಜಂಪುರಕ್ಕೆ ಬಂತು. ಇದರಲ್ಲಿ ಗೌರಮ್ಮನ ಕೈವಾಡವಿತ್ತು ಎಂಬುದು ಯಾರ ಗಮನಕ್ಕೂ ಬರಲಿಲ್ಲ. ಬಂದಿದ್ದರೆ ಮೂಢ ಭಕ್ತರು ಅದರಲ್ಲೂ ಹರಿಜನರು ಮತ್ತು ಮಾದಿಗರು ಗೌರಮ್ಮನನ್ನು ಸಿಗಿದು ಹಾಕುತ್ತಿದ್ದರು. ಜಿಲ್ಲಾಡಳಿತ ಬಂದು ಹೆಣ್ಣು ಮಕ್ಕಳನ್ನು ಸಿಡಿ ಏರಿಸಕೂಡದೆಂಬ ಆಜ್ಞೆ ಹೊರಡಿಸಿ ಹೊರಟು ಹೋದರು. ಪರಮ ಭಕ್ತಾದಿಗಳು ಗಂಡಸರನ್ನು ಏರಿಸಬಹುದು ಎಂಬ ಪರವಾನಿಗೆ ಪಡೆದು ಬಂದು ಗಂಡಸರಿಗೆ ಹೆಂಗಸರ ವೇಷ ತೊಡಿಸಿ ಸಿಡಿ ಆಡಿಸತೊಡಗಿದರು. ಇದು ಗೌರಮ್ಮ ಸದ್ದಿಲ್ಲದೆ ಮಾಡಿದ ಕ್ರಾಂತಿ.

ಆ ಸಮಯದಲ್ಲಿ ಬಸವರಾಜಯ್ಯ ನಾನು ಕೆಲಸ ಮಾಡುತ್ತಿದ್ದ ಗ್ರಂಥಾಲಯಕ್ಕೆ ಬಂದು ಪೇಪರ್ ಓದಿ ಹೋಗುತ್ತಿದ್ದರು. ಅವರು ಸಂಚಾರಿ ವಿಜಯ್‌ನ ಆಕಾರದಲ್ಲಿದ್ದರೂ ದೊಡ್ಡ ಆಳು. ಆ ಊರಿನ ಶಾಲಾ ಮಾಸ್ತರ್ ರಂಗಪ್ಪರ ಸ್ನೇಹಿತರಾಗಿದ್ದು ಇಬ್ಬರೂ ಅಕ್ಕಪಕ್ಕದ ಮನೆಯಲ್ಲಿದ್ದರು. ಬಸವರಾಜಯ್ಯನವರಿಗೆ ಸ್ವಜಾತಿಯ ಸ್ನೇಹಿತರಾರೂ ಇರಲಿಲ್ಲ. ತನ್ನ ಹೆಂಡತಿಯ ಸಮುದಾಯದವರೊಡನೆ ಬೆರೆತು ಬದುಕುತ್ತಿರುವಾಗ ಗೌರಮ್ಮ ಜಾಂಡೀಸ್ ಆಗಿ ತೀರಿಕೊಂಡರು. ತಾಯಿ ತೀರಿಕೊಂಡ ಮೇಲೆ ಇನ್ನು ಅಲ್ಲಿರುವುದು ಸಾಧ್ಯವಿಲ್ಲವೆಂಬಂತೆ ವಿಜಯ್ ಮತ್ತವರ ಸಹೋದರ ಬೆಂಗಳೂರು ಸೇರಿಕೊಂಡು ಬದುಕನ್ನು ಎದುರಿಸತೊಡಗಿದರು. ಇತ್ತ ತಂದೆಯೂ ತೀರಿಹೋದರು. ವಿಜಯ್ ಪಂಚನಹಳ್ಳಿ, ಅಜ್ಜಂಪುರದಿಂದ ಮುಕ್ತಿ ಪಡೆದಂತೆ ಬದುಕತೊಡಗಿದರು.

ಶಿವಮೊಗ್ಗದ ‘ಹೊಂಗಿರಣ’ ತಂಡದ ಗೆಳೆಯರೆಲ್ಲ ಸೇರಿ (ಅವ್ಯಕ್ತ) ಸಿನೆಮಾ ತೆಗೆಯುವ ತೀರ್ಮಾನ ಮಾಡಿದಾಗ ಅದರ ನಾಯಕ ನಟನನ್ನಾಗಿ ವಿಜಯ್‌ನನ್ನು ಕೇಳಲು ಹೋದೆವು. ಅದಕ್ಕೂ ಮೊದಲು ಮಧ್ಯವಯಸ್ಕನ ಪಾತ್ರವಾಗಿದ್ದರಿಂದ ಅನಂತ್‌ನಾಗ್‌ರನ್ನು ಕೇಳಲು ಹೋಗಿದ್ದೆವು. ಅವರಲ್ಲಿ ಮಾತಾಡಲು ಅಂಜಿಕೆಯಾಗಿ ವಿಜಯ್ ಬಳಿ ಹೋದೆವು. ಅದಾಗಲೇ ವಿಜಯ್ ‘ನಾನು ಅವನಲ್ಲ ಅವಳು’ ಚಿತ್ರದಿಂದ ದೇಶದ ಗಮನ ಸೆಳೆದಿದ್ದರು. ಆ ಚಿತ್ರ ನೋಡಿದ ನಾವು ದಂಗುಬಡಿದಿದ್ದೆವು. ಏಕೆಂದರೆ ಗಂಡು ಹೆಣ್ಣಾಗುವ ಒಂದು ರೀತಿಯ ಭಯಾನಕವಾದ ರೂಪಾಂತರದ ಆನಂತರ, ತಂದೆ ತಾಯಿ, ಒಡಹುಟ್ಟಿದವರಿಂದ ದೂರವಾಗುತ್ತಾ, ಈ ಸಮಾಜದಿಂದಲೇ ಗೇಲಿಗೊಳಗಾಗಿ ಭಿಕ್ಷೆಯಿಂದ ಬದುಕುವ ಆ ನಟನೆ ಸಾಮಾನ್ಯದ್ದಲ್ಲ. ಇದು ವಿಜಯ್‌ನ ಮುಖದಲ್ಲಿ ಕಡೆಯವರೆಗೂ ಮಡುಗಟ್ಟಿ ನಿಂತಿತ್ತು. ಸಿನೆಮಾದಲ್ಲಿ ನಟಿಸಿದ ನಂತರ ಆರಾಮವಾಗಿದ್ದ ವಿಜಯ್‌ಗೆ ಆಶ್ಚರ್ಯವಾಗುವಂತೆ ರಾಷ್ಟ್ರ ಪ್ರಶಸ್ತಿ ಬಂದಿತು. ಗೌರಮ್ಮ, ಬಸವರಾಜಯ್ಯ ಇದ್ದರೆ ಅದೆಷ್ಟು ಆನಂದ ಪಡುತ್ತಿದ್ದರೋ ಏನೋ.

ಇಂತಹ ಘನತೆಯ ಪ್ರಶಸ್ತಿ ಪಡೆದರೂ ವಿಜಿ ಆರಾಮವಾಗಿದ್ದ. ಈ ಹಿಂದೆ ವಾಸುದೇವ ರಾವ್‌ರನ್ನು ಕೊಂಡಾಡಿ, ಅವರ ಬದುಕನ್ನೇ ಶೋಧಿಸಿ ಬರೆದ ಮಾಧ್ಯಮದವರ ಜಾಣಗುರುಡು ಅರ್ಥೈಸಲಾಗದು. ಈ ಪ್ರಶಸ್ತಿಯ ನಂತರವೂ ವಿಜಯ್‌ನಿಗೆ ಹೇಳಿಕೊಳ್ಳುವ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ. ಅಂತಹ ಸಮಯದಲ್ಲೇ ನಾವು ಅವರ ಬಳಿ ಹೋದದ್ದು. ನಾನು ಸುಮ್ಮನೆ ‘‘ನಿಮ್ಮದು ಯಾವ ಊರು’’ ಎಂದೆ. ‘‘ಯಗಟಿ’’ ಅಂದ. ನಾನು ಮತ್ತೆ ಕೆದಕಲಿಲ್ಲ. ಬಹುಶಃ ಪಂಚನಹಳ್ಳಿಯಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ನೋವು ಆತನನ್ನು ಹೆಸರನ್ನೇ ಮರೆಮಾಚುವಂತೆ ಮಾಡಿರಬಹುದು. ನಮ್ಮ ಶಿವಕುಮಾರ್ ಮಾವಲಿ ಬರೆದ ‘ಮಧ್ಯವಯಸ್ಕನ ಮನೋಲಾಗ್’ ಎಂಬ ಕಥೆಯನ್ನು ‘ಅವ್ಯಕ್ತ’ ಎಂದು ಬದಲಾಯಿಸಿ ಸಿನೆಮಾ ಮಾಡುವ ವಿಷಯ ಕೇಳಿ, ನಮಗೆ ಹೊರೆಯಾಗದಂತಹ ಗೌರವ ಸಂಭಾವನೆ ಪಡೆದು ವಿಜಯ್ ನಟಿಸಿದ್ದ. ಆಗ ಗ್ರಹಿಸಿದಂತೆ ವಿಜಯ್ ಸ್ವಚ್ಛ ಮನಸ್ಸಿನ ಹುಡುಗ. ಆ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಇರಲಿಲ್ಲ. ಎಲ್ಲರನ್ನೂ ಪ್ರೀತಿಸುವುದು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು, ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳುವುದು, ರಾಷ್ಟ್ರಪ್ರಶಸ್ತಿ ಪಡೆದದ್ದು ಅರಿವಿಗೇ ಬರದಂತೆ ಸಹಜವಾಗಿ ಬದುಕುವುದು ವಿಜಯ್‌ನ ಜಾಯಮಾನವಾಗಿತ್ತು. ಆದರೆ ಒಂದೇ ಒಂದು ಸಣ್ಣ ತಪ್ಪಿನಿಂದ ಈ ಲೋಕದಿಂದಲೇ ನಿರ್ಗಮಿಸಿದ. ಹೆಲ್ಮೆಟ್ ಧರಿಸಿದ್ದರೆ ಬದುಕಿರುತ್ತಿದ್ದನೋ ಏನೋ. ಅಂತೂ ವಿಜಯ್ ಮರೆಯಾದ. ಇತ್ತೀಚೆಗೆ ಸಂಭವಿಸಿದ ಯಾವ ಸಾವುಗಳೂ ನನ್ನನ್ನು ಇಷ್ಟು ಕಾಡಲಿಲ್ಲ. ಅವನ ಸಾವಿಗೆ ಇಡೀ ನಾಡೇ ಮರುಗಿತ್ತು. ಪಂಚನಹಳ್ಳಿ ಜನ ಕೈಚಾಚಿ ‘‘ಇವ ನಮ್ಮವನು’’ ಎಂದರು. ಆದರೇನು ವಿಜಯ್ ಹೊರಟುಹೋಗಿದ್ದ. ನಾವು ನಿನ್ನನ್ನು ನಡೆಸಿಕೊಂಡ ರೀತಿಗೆ ಕ್ಷಮೆ ಕೇಳುತ್ತೇವೆ ಎನ್ನುವ ಭಾವ ಅವರಲ್ಲಿ ಮೂಡಿದ್ದರೆ ಅದಕ್ಕೆ ವಿಜಯ್‌ನ ಶ್ರೇಷ್ಠ ಬದುಕೇ ಕಾರಣ.

ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಆತ ತನ್ನನ್ನು ಅವಮಾನಿಸಿದ ಮಣ್ಣಿಗೆ ಮರಳುವಾಗ ತನ್ನ ಅಂಗಾಂಗಗಳನ್ನೇ ಕೊಟ್ಟು ಹಲವು ಜನರ ಬಾಳಿಗೆ ಬೆಳಕು ನೀಡಿದ. ನಮ್ಮ ನಡುವಿನ ವಿದ್ಯಾವಂತ ರಾಜಕಾರಣಿ ವೈ. ಎಸ್. ವಿ. ದತ್ತಾ ಜನನಾಯಕನ ಜವಾಬ್ದಾರಿಯಿಂದ ಪಂಚನಹಳ್ಳಿಗೆ ವಿಜಯ್ ಪಾರ್ಥಿವ ಶರೀರವನ್ನು ತಂದರು. ಜನ ಸಮೂಹ ಕಣ್ಣೀರು ತುಂಬಿ ವಿದಾಯ ಹೇಳಿದರು. ಇತ್ತ ಅಜ್ಜಂಪುರದಲ್ಲಿ ವಿಜಯ್ ಬಗ್ಗೆ ಸಂತಾಪ ಸಭೆ ನಡೆದು ಆತನ ಬಾಲ್ಯವನ್ನು ನೆನಪಿಸಿಕೊಂಡರು. ಅವೆಲ್ಲ ನೋವಿನಿಂದ ಕೂಡಿದ ನೆನಪುಗಳಾಗಿದ್ದವು.

Writer - ಬಿ. ಚಂದ್ರೇಗೌಡ

contributor

Editor - ಬಿ. ಚಂದ್ರೇಗೌಡ

contributor

Similar News