ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ಸಲ್ಲಿಕೆ

Update: 2021-06-20 12:22 GMT

ಬೆಂಗಳೂರು, ಜೂ. 20: ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡಿದ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸಂಬಂಧ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮ ಜರುಗಿಸುವಂತೆ ಇಲ್ಲಿನ ಹನುಮಂತನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. 

ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಖಂಡರು ದೂರು ಸಲ್ಲಿಸಿದ್ದು, ಪ್ರಚಾರದ ಗೀಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುವಂತಹ ಕಾರ್ಯದಲ್ಲಿಯೇ ತೊಡಗಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸೂಲಿಬೆಲೆ ತಮ್ಮ ಫೇಸ್ಬುಕ್ ಪುಟದಲ್ಲಿ 'ಕಾಂಗ್ರೆಸ್ ಆಕ್ಸಿಜನ್ ಅನ್ನು ಅಕ್ರಮ ದಾಸ್ತಾನು ಮಾಡಿ ಜನರ ಜೀವದ ಜತೆ ಚೆಲ್ಲಾಟವಾಡಿದೆ. ಲಸಿಕೆಯನ್ನು ಕಸದ ಬುಟ್ಟಿಗೆ ಹಾಕಿದೆ, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ಮಾಡಿ ಜನರು ಸಾಯುವಂತೆ ಮಾಡಿದೆ. ಕೊನೆಗೆ ಅಮಾಯಕರ ಸಾವನ್ನು ವೈಭವಿಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದೆ. ರಾಷ್ಟ್ರೀಯ ಪಕ್ಷವೊಂದು ನಾಲ್ಕು ಕಾಸಿಗೆ ಈ ಹಂತಕ್ಕೆ ಇಳಿಯಬಹುದೆಂದು ಯಾರು ಊಹಿಸರಲಿಲ್ಲ' ಎಂದು ಬರೆದುಕೊಂಡಿದ್ದಾರೆ. 

ಜತೆಗೆ, ಅದೇ ದಿನ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ವಿಶ್ವಗುರು ಎಂಬ ಅಂಕಣದಲ್ಲಿ ಜನರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬ ಶೀರ್ಷಿಕೆಯಡಿ ರೈತರನ್ನು ಮತ್ತು ಮುಸ್ಲಿಮರರ ಮೇಲೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ, ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಸೂಲಿಬೆಲೆ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಪ್ರಚಾರಕ್ಕಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಚಕ್ರವರ್ತಿ ಸೂಲಿಬೆಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು. ಇಲ್ಲದಿದ್ದರೆ, ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News