ವಾಮಾಚಾರ ಮಾಡಿ ಬಾಲಕಿಯ ಬಲಿಗೆ ಯತ್ನಿಸಿದ ಆರೋಪ: ಮಾಂತ್ರಿಕ ಸೇರಿ ಆರು ಮಂದಿ ವಶಕ್ಕೆ

Update: 2021-06-20 16:23 GMT

ಬೆಂಗಳೂರು, ಜೂ. 20: ಮನೆ ಮುಂದೆ ಆಟ ಆಡುತ್ತಿದ್ದ 10 ವರ್ಷದ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಬಲಿ ನೀಡಲು ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಸೋಲದೇವನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗಾಂಧಿ ಗ್ರಾಮದಲ್ಲಿ ಜೂ.14 ರಂದು ದೇವರ ಪೂಜೆ ಹೆಸರಿನಲ್ಲಿ ಬಾಲಕಿಯ ಮೇಲೆ ವಾಮಾಚಾರ ಮಾಡಿದ್ದು, ಬಲಿ ನೀಡಲು ಸಹ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಗ್ರಾಮದ ನಿವಾಸಿ ಮಂಜುನಾಥ್ ಮತ್ತು ಮಾಲ ಎಂಬವರ ದಂಪತಿಯ ಪುತ್ರಯನ್ನು ಇದೇ ಗ್ರಾಮದ ಸುರೇಶ್, ಹನುಮಂತಯ್ಯ, ಶಿವರಾಜು, ರವಿ, ಸೌಮ್ಯ ಸೇರಿದಂತೆ ಮಾಂತ್ರಿಕನೊಬ್ಬ ಅಪಹರಿಸಿದ್ದು, ಹೊಲವೊಂದರಲ್ಲಿ ನರಬಲಿಗೆ ಯತ್ನಿಸಿದ್ದರು ಎಂದು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಯನ್ನು ಎಳೆದೊಯ್ದು ಹೊಲದಲ್ಲಿನ ಗುಡಿಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಕಿ ಮಾಂತ್ರಿಕನೊಬ್ಬ ಕ್ಷುದ್ರ ಪೂಜೆ ಮಾಡಿದ ಬಳಿಕ ಬಲಿ ಪೂಜೆ ನಡೆಸಲಾಗಿದೆ. ಇನ್ನು, ಮನೆಯ ಬಳಿ ಬಾಲಕಿ ಕಾಣದಿದ್ದಾಗ ಕುಟುಂಬದವರು ಹುಡುಕಲು ಆರಂಭಿಸಿದ್ದರು. ಆಗ ಗುಡಿಯ ಬಳಿ ಬಾಲಕಿ ಪತ್ತೆಯಾಗಿದ್ದು, ವಾಮಾಚಾರಿಗಳಿಂದ ಬಾಲಕಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.

ನರಬಲಿಗೆ ಯತ್ನಿಸಿದ ಆರೋಪ ಸಂಬಂಧ ಮಾಂತ್ರಿಕ ಸೇರಿ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News