ವಿದೇಶದಲ್ಲಿ ಯೋಗದ ಕಂಪು ಹರಡಿದ ಹಡಗಲಿ ಯುವಕ

Update: 2021-06-21 07:12 GMT

ಗದಗ: ಹಳ್ಳಿಯ ಬಡಕುಟುಂಬದ ಯುವಕ ವಿಯಟ್ನಾಮ್ ದೇಶದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರಿಗೆ ಯೋಗ ತರಬೇತಿ ನೀಡುವ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯೋಗ ಸಾಧಕನಾಗಿ ಬೆಳೆದ ಯಶೋಗಾಥೆ ಎಂಥವರನ್ನೂ ಬೆರಗಾಗಿಸಿದೆ.

ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ಗುರುಶಿದ್ದಯ್ಯ ಗೋಬಿ ಅವರ ಪುತ್ರ ರಾಚಯ್ಯ ಅವರೇ ಈ ಸಾಧಕ. ವಿಯಟ್ನಾಮ್‌ನಲ್ಲಿ ಶಿಕ್ಷಕ ವೃತ್ತಿಯಲ್ಲಿರುವ ರಾಚಯ್ಯ, ತಮ್ಮ ಯೋಗ ಸಾಧನೆಯ ಅನುಭವಗಳನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ. ‘ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದುದ್ದರಿಂದ ಪದವಿ ಶಿಕ್ಷಣ ಪೂರೈಸಲು ಆಗದ ಹಿನ್ನೆಲೆಯಲ್ಲಿ ಅರ್ಧದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಿದೆ. ನಮ್ಮದೇ ಜಮೀನಿನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ. ತದನಂತರ ವಿಯಟ್ನಾಮ್‌ದಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಾವ ಮಂಜುನಾಥ ಕಲ್ಮಠ ಅವರು ರಜೆಗೆಂದು ನಮ್ಮೂರಿಗೆ ಬಂದಿದ್ದ ವೇಳೆ ಯೋಗ ಕಲಿಯುವಂತೆ ಸಲಹೆ ನೀಡಿದ್ದರಲ್ಲದೆ, ಯೋಗ ಕಲಿತರೆ ವಿದೇಶಗಳಲ್ಲಿರುವು ವಿಫುಲ ಅವಕಾಶಗಳ ಬಗ್ಗೆ ತಿಳಿಸಿದ್ದರು. ಅದರಿಂದಲೇ ನಾನು ಯೋಗ ಕಲಿಯಲು ಒಲವು ತೋರಿಸಿದೆ’ ಎನ್ನುತ್ತಾರೆ ಯೋಗ ಶಿಕ್ಷಕ ರಾಚಯ್ಯ.

ಮಂಜುನಾಥ ಅವರ ಸಲಹೆಯಂತೆ ಕುಂದಗೋಳದ ಶ್ರೀಗುರು ಬಸವೇಶ್ವರ ಸ್ವಾಮೀಜಿ ಶಿವಾನಂದ ಮಠ, ಹುಬ್ಬಳ್ಳಿಯ ಶ್ರೀಆರೂಢ ಸಿದ್ದಾರೂಢ ಮಠದಲ್ಲಿ ಯೋಗ ತರಬೇತಿ ಪಡೆದು ದಿಲ್ಲಿಯ ಸತ್ವ ಸ್ಕೂಲ್ ಆಫ್ ಯೋಗ ಕೇಂದ್ರದಲ್ಲಿ ಶಿಕ್ಷಕನಾಗಿ ತರಬೇತಿ ನೀಡಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಡಿಪ್ಲೊಮಾ ಇನ್ ಯೋಗ ಥೆರೆಫಿ (ಡಿವೈಟಿ), ಡಿಪ್ಲೊಮಾ ಇನ್ ಯೋಗ ನ್ಯಾಚರೋಪಥಿ (ಡಿವೈಎನ್), ಇಂಡಿಯನ್ ಸ್ಕೂಲ್ ಆಫ್ ಯೋಗ ಇನ್ ಬೆಂಗಳೂರು (ಐಎಸ್‌ವೈಬಿ) ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ನಂತರ ವಿಯಟ್ನಾಮ್‌ನ ಹೋ ಚಿ ಮಿನ್ಹ್ ನಗರದ ಶುಭ ಯೋಗ ಕೇಂದ್ರದಲ್ಲಿ ಸುಮಾರು ಎರಡು ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೆ ಕ್ಯಾವೌ ನಗರದ ತನ್‌ಪುಂಗ್ ಯೋಗ ಕೇಂದ್ರದಲ್ಲಿ ಮೂರು ವರ್ಷದಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ನಮ್ಮ ತನ್‌ಪುಂಗ್ ಯೋಗ ಕೇಂದ್ರಕ್ಕೆ ಬರುವ ಸುಮಾರು ಜನರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ. ಅಂತವರಿಗೆ ಯೋಗಾಸನದ ತರಬೇತಿ ನೀಡುವ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ. ವಿಯಟ್ನಾಮ್‌ದಲ್ಲಿ ಭಾರತೀಯ ಯೋಗ ಶಿಕ್ಷಕರಿಗೆ ತುಂಬಾ ಗೌರವ ನೀಡುತ್ತಾರೆ. ಯೋಗ ಕಲಿತರೆ ಭಾರತೀಯ ಶಿಕ್ಷಕರಿಂದ ಕಲಿಯಬೇಕು ಎಂಬ ಅಭಿಪ್ರಾಯ ಅವರಲ್ಲಿದೆ ಎಂದು ಹೇಳಿದರು.

13ನೇ ದಕ್ಷಿಣ ಭಾರತದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್, 35ನೇ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್ ಶಿಪ್, ರಾಜ್ಯಮಟ್ಟದ ಯೋಗಾಸನ ಚಾಂಪಿಯನ್ ಶಿಪ್, ಸೇರಿದಂತೆ ರಾಜ್ಯಮಟ್ಟದ ವಿವಿಧ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಚಯ್ಯ ಅವರು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನಡೆದ ಯೋಗೋತ್ಸವ ಸ್ಪರ್ಧೆಯಲ್ಲಿ ‘ಆವಾರ್ಡ್ ಆಫ್ ಯೋಗ ಕಿರಣ’ ಎಂಬ ಬಿರುದು ಪಡೆದಿದ್ದಾರೆ. 

ವಿಯಟ್ನಾಮ್ ದೇಶದಲ್ಲಿ ಯೋಗಕ್ಕೆ ತುಂಬಾ ಮಹತ್ವ ನೀಡುತ್ತಾರೆ. ಇಲ್ಲಿ ಪ್ರತಿಯೊಬ್ಬರು ಯೋಗ ಕಲಿಯುತ್ತಾರೆ. ವಿದೇಶದಲ್ಲಿ ತರಬೇತಿ ನೀಡಲು ಭಾರತೀಯ ಯೋಗ ಶಿಕ್ಷಕರಿಗೆ ಬೇಡಿಕೆ ಹೆಚ್ಚಿದೆ. ಯೋಗ ಕಲಿಯುವುದರಿಂದ ಮಾನಸಿಕ, ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ. ನಾನು ಆರೋಗ್ಯದ ಜೊತೆಗೆ ಇಲ್ಲಿ ಉತ್ತಮ ವೇತನ ದೊರೆಯುತ್ತಿದೆ. ಯೋಗ ಕಲಿತರೆ ವಿದೇಶಗಳಲ್ಲಿ ಸಾಕಷ್ಟು ಅವಕಾಶಗಳಿವೆ.
-ರಾಚಯ್ಯ ಗೋಬಿ,

ಯೋಗ ಶಿಕ್ಷಕ

Writer - ಕೆ.ಎಮ್.ಪಾಟೀಲ

contributor

Editor - ಕೆ.ಎಮ್.ಪಾಟೀಲ

contributor

Similar News