ಯೋಗ ಅಂತಃಶಕ್ತಿಯ ಮೂಲ: ಪ್ರಧಾನಿ ಮೋದಿ

Update: 2021-06-21 03:33 GMT

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ನಡುವೆ ಯೋಗ ಪ್ರತಿಯೊಬ್ಬರ ಅಂತಃಶಕ್ತಿಯ ಮೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಏಳನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ಇದು ನಾವು ವೈರಸ್ ವಿರುದ್ಧ ಹೋರಾಡಬಹುದು ಎಂಬ ನಂಬಿಕೆಯನ್ನು ಜನರಲ್ಲಿ ಅಚ್ಚೊತ್ತಿದೆ. ಯೋಗ ಒತ್ತಡದಿಂದ ದೃಢತೆಗೆ ಮತ್ತು ಋಣಾತ್ಮಕತೆಯಿಂದ ಸೃಜನಶೀಲತೆಯೆಡೆಗೆ ಒಯ್ಯುವ ಮಾರ್ಗ ಎಂದು ಪ್ರತಿಪಾದಿಸಿದರು.

"ಕೋವಿಡ್ ಸಾಂಕ್ರಾಮಿಕ ಕಂಡುಬಂದಾಗ ಯಾವ ದೇಶವೂ ಸಜ್ಜಾಗಿರಲಿಲ್ಲ. ಇಂಥ ಸಮಯದಲ್ಲಿ ಯೋಗ ಅಂತಃಶಕ್ತಿಯಾಯಿತು. ಯೋಗ ಸ್ವಯಂ ಶಿಸ್ತಿಗೆ ನೆರವಾಗುತ್ತದೆ ಹಾಗೂ ವೈರಸ್ ವಿರುದ್ಧ ನಾವು ಹೋರಾಡಬಹುದು ಎಂಬ ಭಾವನೆಯನ್ನು ಅಚ್ಚೊತ್ತುತ್ತದೆ. ಯೋಗವನ್ನು ವೈರಸ್ ವಿರುದ್ಧ ಹೋರಾಟದ ಅಸ್ತ್ರವಾಗಿ ಮಾಡಿಕೊಂಡಿರುವುದಾಗಿ ಹಲವು ಮಂದಿ ಮುಂಚೂಣಿ ಕೋವಿಡ್ ಯೋಧರು ಹೇಳಿದ್ದಾರೆ ಎಂದು ಪ್ರಧಾನಿ ವಿವರಿಸಿದರು.

"ಸಾಮಾನ್ಯವಾಗಿ ಯೋಗ ನಮಗೆ ಸಮಗ್ರ ಆರೋಗ್ಯವನ್ನು ನೀಡುತ್ತದೆ. ನಮ್ಮ ದೇಹ ಮತ್ತು ಪ್ರತಿರೋಧ ಶಕ್ತಿಯ ಮೇಲೆ ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ವಿಶ್ವದ ವಿವಿಧೆಡೆ ಅಧ್ಯಯನಗಳು ನಡೆಯುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News