ಯೂರೋ 2020: 16ರ ಘಟ್ಟಕ್ಕೆ ಮುನ್ನಡೆದ ಇಟಲಿ

Update: 2021-06-21 04:07 GMT

ರೋಮ್ : ಯೂರೋ 2020 ಟೂರ್ನಿಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಇಟಲಿ ಎ ಗುಂಪಿನ ಅಗ್ರಸ್ಥಾನಿಯಾಗಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ರವಿವಾರ ನಡೆದ ಪಂದ್ಯದಲ್ಲಿ ವೇಲ್ಸ್ ವಿರುದ್ಧ 1-0 ಜಯ ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ.

ಅತಿಥೇಯರ ವಿರುದ್ಧ ಸೋತರೂ ಗೋಲು ಅಂತರದ ಆಧಾರದಲ್ಲಿ ಸ್ವಿಝರ್‌ಲ್ಯಾಂಡ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದ ವೇಲ್ಸ್ ಕೂಡಾ 16ರ ಘಟ್ಟಕ್ಕೆ ಅರ್ಹತೆ ಪಡೆದಿದೆ.

ಇಟಲಿ ಮುಂದಿನ ಸುತ್ತಿಗೆ ತೇರ್ಗಡೆಯಾಗುವುದು ಖಚಿತವಾಗಿತ್ತಾದರೂ, ಗುಂಪಿನ ಅಗ್ರಸ್ಥಾನ ಉಳಿಸಿಕೊಳ್ಳಲು ಈ ಪಂದ್ಯ ಗೆಲ್ಲಬೇಕಾದ ಅನಿವಾರ್ಯತೆ ಇತ್ತು. ಆಯಾ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವ ನಾಲ್ಕು ಉತ್ತಮ ತಂಡಗಳಿಗೆ ಪ್ರಿ ಕ್ವಾರ್ಟರ್ ಫೈನಲ್ ಅವಕಾಶ ಇರುವುದರಿಂದ ಸ್ವಿಝರ್‌ಲ್ಯಾಂಡ್ ಗೆ ಕೂಡಾ ಮುನ್ನಡೆಯುವ ಅವಕಾಶ ಇದೆ.

ಸ್ವಿಸ್ ತಂಡ ಟರ್ಕಿ ವಿರುದ್ಧ 3-1 ಗೋಲುಗಳ ಗೆಲುವು ಸಾಧಿಸಿತು.

ಸ್ಟೇಡಿಯೋ ಒಲಿಂಪಿಕೊದಲ್ಲಿ ನಡೆದ ಪಂದ್ಯದಲ್ಲಿ 39ನೇ ನಿಮಿಷದಲ್ಲಿ ಪೆಸ್ಸಿನಾ ಏಕೈಕ ಗೋಲು ಹೊಡೆದರು. ಕೋಚ್ ರಾಬರ್ಟೊ ಮನ್ಸಿನಿ ಎಂಟು ಬದಲಾವಣೆಗಳನ್ನು ಮಾಡಿದರೂ ಅತಿಥೇಯರು ಉತ್ತಮ ಪ್ರದರ್ಶನ ಮುಂದುವರಿಸಿದ್ದರು.

30 ಪಂದ್ಯಗಳಿಂದ ಅಜೇಯವಾಗಿ ಉಳಿದಿರುವ ಇಟಲಿ, ತಮ್ಮ ಸರ್ವಕಾಲಿಕ ಅತ್ಯುತ್ತಮ ದಾಖಲೆಯನ್ನು ಸರಿಗಟ್ಟಿದರು. 1935ರಿಂದ 1939ರವರೆಗೆ ಅಜೇಯವಾಗಿ ಉಳಿದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News