ಕುಟುಂಬ ವ್ಯವಸ್ಥೆಯ ಮೇಲೆ ಕೋವಿಡ್ ಲಾಕ್‌ಡೌನ್ ಪರಿಣಾಮ

Update: 2021-06-22 04:30 GMT

ಕೋವಿಡ್ ವ್ಯಾಪಕವಾಗಿ ಹರಡುವುದನ್ನು ನಿರ್ಬಂಧಿಸುವ ಸಂಬಂಧ ಕೈಗೊಳ್ಳಲಾದ ಪ್ರತಿಬಂಧಕ ಕ್ರಮಗಳಿಂದಾಗಿ ಕುಟುಂಬ ವ್ಯವಸ್ಥೆ ತೀವ್ರ ಕೌಟುಂಬಿಕ ಸಂಘರ್ಷವನ್ನು ಎದುರಿಸಬೇಕಾಗಿ ಬಂದಿದೆ. ಕುಟುಂಬದ ಸ್ವಾಸ್ಥ್ಯ ನಿರ್ವಹಣೆಯು ಸಾಮಾಜಿಕ ಸ್ವಾಸ್ಥ್ಯವನ್ನು ಬಲಪಡಿಸುತ್ತದೆ. ಸುಸ್ಥಿರ ಸಮಾಜಕ್ಕೆ ಸುಸ್ಥಿರ ಕುಟುಂಬ ವ್ಯವಸ್ಥೆಯು ಅತಿ ಅವಶ್ಯಕವಾಗಿದೆ. ಕೊರೋನ ನಿಯಂತ್ರಿಸಲು ಹಾಕಿಕೊಂಡಿರುವ ಸಾಮಾಜಿಕ ನಿಯಂತ್ರಣ, ಅದರಲ್ಲೂ ಮುಖ್ಯವಾಗಿ ಹೋಮ್ ಕ್ವಾರಂಟೈನ್ ಹಾಗೂ ಲಾಕ್‌ಡೌನ್‌ಗಳ ಪರಿಣಾಮಗಳಿಂದ ಉಂಟಾಗಿರುವ ಕೌಟುಂಬಿಕ ಸಂಘರ್ಷವನ್ನು ನಿಯಂತ್ರಿಸುವ ಜವಾಬ್ದಾರಿಯೂ ಕುಟುಂಬಕ್ಕೆ ಇರುವುದರಿಂದ ಅತ್ಯಂತ ಪ್ರಜ್ಞಾಪೂರ್ವಕವಾಗಿ ಕುಟುಂಬ ತನ್ನ ಜವಾಬ್ದಾರಿ ನಿಭಾಯಿಸುವುದು ಅಗತ್ಯವಾಗಿದೆ.


ಜಗತ್ತಿನಾದ್ಯಂತ ಕೊರೋನ ವ್ಯಾಪಕವಾಗಿ ಹರಡಿರುವ ಪರಿಣಾಮಗಳಿಂದ ಮಾನವನ ಅಸ್ತಿತ್ವವೇ ಅಲುಗಾಡುತ್ತಿರುವುದು ಸರ್ವವಿಧಿತ ಸಂಗತಿ. ಮಾನವನ ಬದುಕಿನ ಮೇಲೆ ಅದು ಬೀರಿರುವ ಪರಿಣಾಮಗಳು ಮಾನವನ ಇತಿಹಾಸದಲ್ಲಿಯೇ ಕಂಡುಕೇಳರಿಯದಷ್ಟು. ಅದು ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಬದುಕಿನ ಎಲ್ಲಾ ಕ್ಷೇತ್ರಗಳ ಮೇಲೂ ಉಂಟು ಮಾಡಿರುವ ಪರಿಣಾಮಗಳಿಂದ ದಿನನಿತ್ಯದ ಜೀವನದಲ್ಲಿ ಹತ್ತು ಹಲವು ವ್ಯತ್ಯಯ, ವೈಪರೀತ್ಯ ಮತ್ತು ಕಷ್ಟ ನಷ್ಟಗಳು ಸಂಭವಿಸುತ್ತ್ತಿವೆ. ಕೊರೋನ ವ್ಯಾಪಕ ಹರಡುವಿಕೆ ಮತ್ತು ಅದರ ತೀವ್ರತೆಯನ್ನು ಕಡಿಮೆಗೊಳಿಸಲು ಸರಕಾರಗಳು ಕೈಗೊಂಡ ಕ್ರಮಗಳು, ಅದರಲ್ಲೂ ಲಾಕ್‌ಡೌನ್ ಮಾಡಿದ ಅವಾಂತರಗಳು ಕುಟುಂಬ ಸೇರಿದಂತೆ ಸಮಾಜದ ಪ್ರತಿಯೊಂದು ಸಾಮಾಜಿಕ ಸಂಸ್ಥೆಗಳ ಮೇಲೆ ಬೀರಿರುವ ಪರಿಣಾಮವು ಮನುಷ್ಯರ ಎಣಿಕೆಗೆ ಸಿಗದಷ್ಟು ವ್ಯಾಪಕವಾಗಿದೆ. ಕೌಟುಂಬಿಕ ಸಂಬಂಧಗಳ ಮರುವ್ಯಾಖ್ಯಾನ, ಕುಟುಂಬ ವ್ಯವಸ್ಥೆಯಡಿ ಸಂಭವಿಸುತ್ತಿರುವ ತೀವ್ರ ಹೊಂದಾಣಿಕೆ ಸಮಸ್ಯೆ, ಹಳೆಯ ಮತ್ತು ಹೊಸ ಪೀಳಿಗೆಗಳ ನಡುವಿನ ಮಾನಸಿಕ ಸಂಘರ್ಷ, ಪೀಳಿಗೆಗಳ ಅಂತರ, ಸಂಬಂಧಗಳ ನಡುವಿನ ಸಂಘರ್ಷ, ಕೌಟುಂಬಿಕ ಹಿಂಸೆ, ಕುಟುಂಬದ ಸದಸ್ಯರ ಏಕಾಏಕಿ ಮರಣ, ಅದರಿಂದುಂಟಾದ ವ್ಯಾಕುಲತೆ/ನಿರ್ವಾತ, ಚಿಕ್ಕ ಮಕ್ಕಳ ಪಾಲನೆ ಪೋಷಣೆ ಸಂಬಂಧಿತ ಸಮಸ್ಯೆಗಳು ಇತ್ಯಾದಿ.

ಕುಟುಂಬವು ಸಮಾಜದ ಬಹುಮುಖ್ಯ ಮೂಲ ಸಾಮಾಜಿಕ ಸಂಸ್ಥೆ. ಅದರ ಭದ್ರತೆಯು ಸಾಮಾಜಿಕ ಭದ್ರತೆಗೆ ಆಧಾರಸ್ತಂಭ. ಸುಸ್ಥಿರ ಸಮಾಜವು ಮಾನವನ ಉಳಿವಿಕೆಗೆ ಅತಿ ಅಗತ್ಯವಾಗಿದ್ದು ಅದು ಕೌಟುಂಬಿಕ ವ್ಯವಸ್ಥೆಯನ್ನು ಅವಲಂಬಿಸಿದೆ. ಕುಟುಂಬ ವ್ಯವಸ್ಥೆಯಲ್ಲುಂಟಾಗುವ ಏರುಪೇರುಗಳು ಸಮಾಜದ ಸುಸ್ಥಿರತೆಯ ಬೇರುಗಳನ್ನೇ ಅಲುಗಾಡಿಸಬಹುದು. ಆದುದರಿಂದ ಯಾವುದೇ ಸಮಾಜದ ಅಳಿವು ಉಳಿವಿನ ಪ್ರಶ್ನೆಯೂ ಅಲ್ಲಿನ ಕುಟುಂಬ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಆದರೆ ಪ್ರಸಕ್ತ ಕೊರೋನದ ವ್ಯಾಪಕ ಹರಡುವಿಕೆ ಮತ್ತು ಅದರ ತೀವ್ರತೆ, ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳು ಕೌಟುಂಬಿಕ ವ್ಯವಸ್ಥೆಯ ಮೂಲವನ್ನೇ ಏರುಪೇರು ಮಾಡುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅದರ ನಿರ್ವಹಣೆ ಸಮಾಜದ ಸುಸ್ಥಿರತೆಯ ದೃಷ್ಟಿಯಿಂದ ಅತಿ ಅಗತ್ಯವೆಂದೇ ಪರಿಗಣಿಸಲ್ಪಟ್ಟಿದೆ. ಈ ಎಲ್ಲ ಕಾರಣಗಳಿಂದ ಕುಟುಂಬವು ಸಮಾಜದ ಸುಸ್ಥಿರತೆಗೆ ಎಷ್ಟು ಅವಶ್ಯವೆಂದು ಮನಗಾಣಬಹುದು.

ಕೌಟುಂಬಿಕ ವ್ಯವಸ್ಥೆಯೊಳಗೆ ಸಂಬಂಧಗಳು ಪರಸ್ಪರ ಅವಲಂಬಿತವಾಗಿರುತ್ತವೆ. ಕುಟುಂಬದ ಸದಸ್ಯರ ಮಧ್ಯೆ ನೈಜವಾದ ಮತ್ತು ಸ್ಪಷ್ಟವಾಗಿ ಗುರುತಿಸಲ್ಪಟ್ಟ ಸಂಬಂಧಗಳಿದ್ದು ಅವುಗಳ ನಡುವೆ ಏರುಪೇರಾದಾಗ ಕೌಟುಂಬಿಕ ವ್ಯವಸ್ಥೆಯಲ್ಲಿ ಸಂಘರ್ಷವುಂಟಾಗಿ ಅದು ವಿಘಟನೆಯ ಹಾದಿ ಹಿಡಿಯಬಹುದು. ಇತ್ತೀಚಿನ ದಿವಸಗಳಲ್ಲಿ ಕೊರೋನ ಸೋಂಕು ತಗಲುವ ಭಯದ ವಾತಾವರಣದಲ್ಲಿ ಜನರು ಜೀವಿಸುತ್ತಿದ್ದು, ಸಂಬಂಧಿಕರನ್ನು ಕೂಡ ಸಂಶಯದಿಂದ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಕುಟುಂಬದ ಸದಸ್ಯರು ಅನಿವಾರ್ಯ ಸಂದರ್ಭಗಳಲ್ಲಿ ಹೊರಗೆ ಕೆಲಸ ನಿರ್ವಹಿಸುವ ಅಗತ್ಯ ಇದ್ದಾಗಲಂತೂ ಮನೆಯಲ್ಲಿರುವವರು ತೀವ್ರ ಆತಂಕಕ್ಕೆ ಒಳಗಾಗುವ ಸಂಭವವೇ ಹೆಚ್ಚಾಗಿರುತ್ತದೆ.

ಕೊರೋನ ಸೋಂಕು ತಗಲಿರುವ ಕುಟುಂಬದ ಸದಸ್ಯರ ಹೋಂ ಕ್ವಾರಂಟೈನ್ ಕೂಡ ಸಂಬಂಧಗಳನ್ನು ಒರೆಗೆ ಹಚ್ಚುವಂತಹ ಪರಿಸ್ಥಿತಿ ತಂದೊಡ್ಡಿದೆ. ಕ್ವಾರಂಟೈನ್ ಅವಧಿಯಲ್ಲಿ ಸೋಂಕಿತ ವ್ಯಕ್ತಿಯಿಂದ ಅಂತರ ಕಾಪಾಡಿಕೊಳ್ಳುವ ದರ್ದು ಎಲ್ಲಾ ಸದಸ್ಯರಿಗೂ ಇರುವುದರಿಂದ, ಅನಿವಾರ್ಯವಾಗಿ ಪ್ರತ್ಯೇಕತೆಯನ್ನು ಕಾಪಾಡುವ ಸಂದರ್ಭಗಳಲ್ಲಿ ಸೋಂಕಿತ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುವ ಸಂಭವವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಮನೆಗಳಿದ್ದಲ್ಲಿ ಕ್ವಾರಂಟೈನ್ ನಿಯಮ ಪಾಲನೆ ದುಸ್ತರ. ಎಷ್ಟೋ ಪ್ರಕರಣಗಳಲ್ಲಿ ಕುಟುಂಬದ ಎಲ್ಲ ಸದಸ್ಯರೂ ಬಲಿಯಾಗುವ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದು ದುರ್ಲಭವಾಗುತ್ತಿದೆ. ಕೆಲವು ಕುಟುಂಬದಲ್ಲಿ ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಎಲ್ಲಾ ವಯಸ್ಕ ಸದಸ್ಯರು ಕೊರೋನ ಮಹಾಮಾರಿಗೆ ಬಲಿಯಾಗಿ ಮಕ್ಕಳು ತಬ್ಬಲಿಯಾಗಿರುವ ಪ್ರಕರಣಗಳು ವರದಿಯಾಗಿವೆ.

 ಪ್ರಪಂಚದ ಬೇರೆಲ್ಲೆಡೆ ಇರುವಂತೆ ಭಾರತದಲ್ಲಿಯೂ ಅವಿಭಕ್ತ/ಸಂಯುಕ್ತ ಕುಟುಂಬಗಳು ತೀವ್ರವಾಗಿ ನಾಶಗೊಂಡು ಅವುಗಳ ಬದಲಿಗೆ ವಿಭಕ್ತ ಕುಟುಂಬಗಳು ಅಸ್ತಿತ್ವಕ್ಕೆ ಬಂದಿವೆ. ಈ ವಿಭಕ್ತ ಕುಟುಂಬಗಳು ಗಾತ್ರದಲ್ಲಿ ಚಿಕ್ಕವಿದ್ದು, ಗಂಡ ಹೆಂಡತಿ ಮತ್ತು ಅವರ ಮಕ್ಕಳನ್ನು ಮಾತ್ರ ಹೊಂದಿರುತ್ತವೆ. ಕೊರೋನ ಸೋಂಕು ತಗಲಿದ ಪಕ್ಷದಲ್ಲಿ ಸೂಕ್ತ ಭದ್ರತೆ ಒದಗಿಸುವುದನ್ನು ಈ ವಿಭಕ್ತ ಕುಟುಂಬವು ನಿರ್ವಹಿಸುವುದು ಅತಿ ದುಸ್ತರ. ಹೆಂಡತಿಯಾಗಲಿ ಅಥವಾ ಗಂಡನಾಗಲಿ ಸೋಂಕಿನಿಂದ ಬಾಧಿತವಾದರೆ ಬಾಧಿತ ವ್ಯಕ್ತಿಯ ಆರೈಕೆ, ಆಸ್ಪತ್ರೆಗೆ ಸೇರಿಸುವ ಹೊಣೆಗಾರಿಕೆ ಮತ್ತು ಸೋಂಕಿತ ವ್ಯಕ್ತಿಯಿಂದ ಸೋಂಕು ತಗಲುವ ಭಯವಿರುವ ಕುಟುಂಬದ ಸದಸ್ಯರು ಹಿಂದೇಟು ಹಾಕುವ ಪರಿಸ್ಥಿತಿ ಎಷ್ಟೋ ಪ್ರಕರಣಗಳಲ್ಲಿ ಗಮನಿಸಬಹುದು. ಇಂತಹ ಸಂದಿಗ್ಧಮಯ ಪರಿಸ್ಥಿತಿಯಿಂದಾಗಿ ಸಂಬಂಧಗಳು ತೀವ್ರವಾಗಿ ಬಾಧಿತವಾಗುವುದೇ ಹೆಚ್ಚು. ಅದು ಕೌಟುಂಬಿಕ ಸಂಬಂಧಗಳ ಸಂಘರ್ಷಕ್ಕೆ ನಾಂದಿ ಹಾಡಬಹುದಾದ ಪರಿಸ್ಥಿತಿ ತರಬಹುದು.

ಸೋಂಕಿತ ವ್ಯಕ್ತಿಯ ಸಾವು ಸಂಭವಿಸಿದಾಗ ಅವಿಭಕ್ತ ಕುಟುಂಬದ ಸದಸ್ಯರು ಅಂತಿಮ ಸಂಸ್ಕಾರ ಮಾಡುವುದಿರಲಿ, ಮೃತದೇಹವನ್ನು ಪಡೆಯುವ ಕಾರ್ಯಕ್ಕೂ ಮುಂದಾಗದ ಸ್ಥಿತಿ ಇದೆ. ಸತ್ತವರು ಸತ್ತು ಹೋದರು, ಆದರೆ ಬದುಕಿರುವವರ ಭವಿಷ್ಯ ಮತ್ತು ಆರೋಗ್ಯದ ಬಗೆಗಿನ ಆತಂಕ ಮತ್ತು ಭಯದಿಂದಾಗಿ ಶವಸಂಸ್ಕಾರ ಮಾಡುವುದಕ್ಕೂ ಹಿಂದೇಟು ಹಾಕಿದ ಅನೇಕ ಉದಾಹರಣೆಗಳಿವೆ. ಮಾನವಸಂಬಂಧಗಳನ್ನು ಪುನರ್ ವ್ಯಾಖ್ಯಾನಿಸುವ ದರ್ದು ತಂದಿಟ್ಟ ಕೊರೋನ ಮಹಾಮಾರಿ ಕುಟುಂಬದ ಮೂಲ ಸ್ವರೂಪವನ್ನೇ ಅಲ್ಲಾಡಿಸುವ ಹಂತಕ್ಕೆ ತಂದು ನಿಲ್ಲಿಸಿದೆ.

ವಿಭಕ್ತ ಕುಟುಂಬದಲ್ಲಿ ಗಂಡ ಅಥವಾ ಹೆಂಡತಿ ಸೋಂಕಿನಿಂದ ತೀರಿಕೊಂಡ ಸಂದರ್ಭದಲ್ಲಿ ತಂದೊಡ್ಡುವ ಸವಾಲುಗಳು ಹಲವು. ಕುಟುಂಬದ ಜವಾಬ್ದಾರಿ ನಿರ್ವಹಿಸುವವರೇ ಸೋಂಕಿಗೆ ತುತ್ತಾಗಿ ಮರಣ ಸಂಭವಿಸಿದಾಗ ಆಗುವ ಆರ್ಥಿಕ ನಷ್ಟ, ಸಂಕಷ್ಟಗಳು ಹಾಗೂ ನಿರ್ವಾತ ಸ್ಥಿತಿಯಿಂದ ಕುಟುಂಬದ ಜೀವಂತ ಸದಸ್ಯರು ಮಾನಸಿಕ ಸ್ಥಿಮಿತತೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಕುಟುಂಬ ನಿರ್ವಹಣೆಗೆ ದುಡಿದು ಸಂಪಾದಿಸುವ ಗಂಡಾಗಲಿ, ಹೆಣ್ಣಾಗಲಿ ಅಗಲಿದಾಗ ಇಡೀ ಕುಟುಂಬವೇ ಅತ್ಯಂತ ಹೀನ ಸ್ಥಿತಿಯನ್ನು ತಲುಪುವಂತಹ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಶಾಶ್ವತ ಅಗಲಿಕೆಯ ನೋವು ಮಾನಸಿಕ ಖಿನ್ನತೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಸಾಧ್ಯತೆಗಳೇ ಹೆಚ್ಚು. ಅದರ ಪರಿಣಾಮಗಳಿಂದ ಪಾರಾಗಿ ಬರುವುದು ದುಸ್ತರವೇ ಸರಿ.

ಕೊರೋನ ಸೋಂಕು ತಗಲಿರುವ ವ್ಯಕ್ತಿಯ ಆರೈಕೆ ಮತ್ತು ಆತನಿಗೆ ಮಾನಸಿಕ ಭದ್ರತೆ ನೀಡುವ ಕುಟುಂಬವಿದ್ದರೆ ಮಾತ್ರ ಆತ ಸೋಂಕಿನಿಂದ ಪಾರಾಗಿ ಬರಲು ಸಾಧ್ಯ. ವ್ಯಕ್ತಿಯ ರೋಗನಿರೋಧಕ ಶಕ್ತಿ ವೃದ್ಧಿಸಲು ಸಮತೋಲಿತ ಆಹಾರ, ನಿದ್ರೆ ಹಾಗೂ ವೈದ್ಯಕೀಯ ಚಿಕಿತ್ಸೆ ಎಷ್ಟು ಅವಶ್ಯವೋ, ಅಷ್ಟೇ ಕುಟುಂಬದ ಸದಸ್ಯರ ಒತ್ತಾಸೆ, ಮಾನಸಿಕ ಭದ್ರತೆ ಸ್ಪುರಿಸುವ ವಾತಾವರಣ, ಕೌಟುಂಬಿಕ ಬೆಂಬಲ ಹಾಗೂ ಮಾನಸಿಕ ಸ್ವಾಸ್ಥ್ಯ ವೃದ್ಧಿಸುವಂತಹ ವಾತಾವರಣ ಕೂಡ ಅಗತ್ಯವಾಗಿದೆ. ಇವುಗಳು ಇಲ್ಲದಿದ್ದಲ್ಲಿ ಸೋಂಕಿತ ವ್ಯಕ್ತಿಯು ತೀವ್ರ ಮಾನಸಿಕ ಖಿನ್ನತೆ ಹಾಗೂ ಒತ್ತಡಕ್ಕೊಳಗಾಗಿ ರೋಗ ಉಲ್ಬಣಗೊಂಡು ಸಾವೂ ಸಂಭವಿಸಬಹುದು.

ಕುಟುಂಬದಲ್ಲಿ ಧನಾತ್ಮಕ ಸಂಬಂಧಗಳಿದ್ದಲ್ಲಿ ಪರಸ್ಪರ ಸಾಮಾಜಿಕ ಬೆಸುಗೆಯು ಸ್ಥಾಪಿತಗೊಂಡಿರುತ್ತದೆ. ಅದು ಕೊರೋನ ಸೋಂಕಿತ ವ್ಯಕ್ತಿಗೆ ಮಾನಸಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ರೋಗಿಯನ್ನು ಕುಟುಂಬದ ಇತರ ಸದಸ್ಯರು ನೋಡುವ ದೃಷ್ಟಿಕೋನವು ಆರೈಕೆಯ ದೃಷ್ಟಿಯಿಂದ ಮಹತ್ವ ವಾಗಿರುತ್ತದೆ. ಅಂತಹ ವಾತಾವರಣವನ್ನು ಒದಗಿಸುವ ಕುಟುಂಬದಿಂದ ಸೋಂಕಿತ ವ್ಯಕ್ತಿಯು ಬದುಕುವ ಭರವಸೆಯನ್ನು ಹೊಂದಲು ಸಾಧ್ಯ. ಒಂದು ವೇಳೆ ಕುಟುಂಬದ ಸಂಬಂಧಗಳಲ್ಲಿ ಬಿರುಕುಗಳಿದ್ದು ಇಂತಹ ಪರಿಸ್ಥಿತಿಯಲ್ಲಿ ಅವು ಪರಸ್ಪರ ಅಪನಂಬಿಕೆಗೆ ಕಾರಣವಾಗಿ ಸಂಬಂಧಗಳಲ್ಲಿ ತೀವ್ರ ಬಿರುಕು ಉಂಟಾಗುವ ಸಂಭವಗಳನ್ನು ತಳ್ಳಿಹಾಕುವಂತಿಲ್ಲ. ಗಂಡ, ಹೆಂಡತಿ ಮತ್ತು ಕುಟುಂಬದ ಇತರ ಸದಸ್ಯರ ನಡುವೆ ಧನಾತ್ಮಕತೆ ಅವಶ್ಯಕ. ಋಣಾತ್ಮಕವಾದ ಸಂಬಂಧಗಳಿಂದ ಕುಟುಂಬದಲ್ಲಿ ಬಿರುಕುಂಟಾಗಿ ಅಂತಹ ಕುಟುಂಬಗಳು ವಿಘಟಿತವಾಗುವ ಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದುದರಿಂದ ಕೊರೋನ ಸೋಂಕು ತಗಲಿದ ವ್ಯಕ್ತಿ, ಸೋಂಕು ತಗಲುವ ಭಯವಿರುವ ಕುಟುಂಬದ ಸದಸ್ಯರ ಮನೋಭಾವಗಳು, ಆರೈಕೆ ವಿಧಾನ, ಕ್ವಾರಂಟೈನ್ ಅವಧಿಯ ಏಕತಾನತೆ, ಮುಟ್ಟಿಸಿಕೊಳ್ಳದ ಸ್ಥಿತಿಯಿಂದ ಹೊರಬರಲು ಅಗತ್ಯವಿರುವ ಮಾನಸಿಕ ಮತ್ತು ಸಾಮಾಜಿಕ ಭದ್ರತೆಗಳು ರೋಗನಿರೋಧಕತೆ ಯನ್ನು ಪ್ರಭಾವಿಸುತ್ತವೆ. ಕೊರೋನ ಮಹಾಮಾರಿ ತಂದೊಡ್ಡಿರುವ ಈ ಕೌಟುಂಬಿಕ ಸಂಬಂಧಗಳ ಸಂಘರ್ಷ ಅನಿಶ್ಚಿತತೆ ನಿರ್ವಾತ ಸ್ಥಿತಿ ಹಾಗೂ ಭಯಗಳನ್ನು ದೂರ ಮಾಡುವುದಕ್ಕೆ ಧನಾತ್ಮಕ ಸಂಬಂಧಗಳನ್ನು ಕುಟುಂಬದ ಚೌಕಟ್ಟಿನಲ್ಲಿ ವರ್ಧಿಸುವುದು ಅತೀ ಅವಶ್ಯವಾಗಿರುತ್ತದೆ.

ಕೊರೋನ ಮಹಾಮಾರಿ ಕೌಟುಂಬಿಕ ವ್ಯವಸ್ಥೆಯಲ್ಲಿ ತಂದೊಡ್ಡಿರುವ ಬಹುಮುಖ್ಯವಾದ ಸಮಸ್ಯೆಯೆಂದರೆ ಕುಟುಂಬದಲ್ಲಿ ಉಂಟುಮಾಡಿರುವ ಮಾನವಶಾಸ್ತ್ರೀಯ ಬದಲಾವಣೆಗಳು. ಕುಟುಂಬದಲ್ಲಿ ಉದ್ವಿಗ್ನತೆಗಳಿದ್ದಲ್ಲಿ ಕೊರೋನ ತಂದಿಟ್ಟಿರುವ ಕ್ವಾರಂಟೈನ್ ಮತ್ತು ಲಾಕ್‌ಡೌನ್ ಆ ಉದ್ವಿಗ್ನತೆಗಳನ್ನು ತೀವ್ರಗೊಳಿಸುವ ಅಥವಾ ಹೆಚ್ಚು ಮಾಡುವ ಸಂಭವಗಳಿರುತ್ತವೆ. ಕುಟುಂಬದ ಉದ್ವೇಗಗಳನ್ನು ಉತ್ತೇಜಿಸುವ ಕಾರಣದಿಂದಾಗಿ ಕೌಟುಂಬಿಕ ಸಂಬಂಧಗಳಲ್ಲಿ ತೀವ್ರ ಬಿರುಕುಂಟಾಗಿ ಕುಟುಂಬ ವಿಘಟನೆಯಲ್ಲಿ ಪರ್ಯಾವಸಾನಗೊಳ್ಳುವುದನ್ನು ತಪ್ಪಿಸಲಾಗದು. ಮುಂದುವರಿದ ಲಾಕ್‌ಡೌನ್ ಅಡ್ಡ ಪರಿಣಾಮಗಳೆಂದರೆ ಮಾನಸಿಕ ಆರೋಗ್ಯ(ಆತಂಕ, ಖಿನ್ನತೆ ಮತ್ತು ಅಭದ್ರತೆ)ದಲ್ಲಿ ವ್ಯತ್ಯಯವುಂಟಾಗಬಹುದು. ಬಹುತೇಕ ಪ್ರಕರಣದಲ್ಲಿ ಕುಟುಂಬದ ಸಂಬಂಧಗಳಿಂದುಂಟಾಗುವ ಒತ್ತಡದ ಋಣಾತ್ಮಕ ವಾತಾವರಣದಿಂದ ಮಾನಸಿಕ ಕ್ಷೋಭೆ ಮತ್ತು ಖಿನ್ನತೆಗೆ ಒಳಗಾಗುವ ಸದಸ್ಯರು ಮಾದಕ ವ್ಯಸನಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತದೆ. ಈಗಾಗಲೇ ಮಾದಕ ವ್ಯಸನಕ್ಕೆ ಒಳಗಾದವರು ಇನ್ನೂ ಹೆಚ್ಚಿನ ಸಂಕಷ್ಟಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕೋವಿಡ್ ಲಾಕ್‌ಡೌನ್ ಸಂಬಂಧಿತ ಗೃಹಹಿಂಸೆಯು ತೀವ್ರವಾಗಿ ಹೆಚ್ಚುತ್ತಿರುವ ಬಗ್ಗೆಯೂ ಸಮಾಜ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಕೌಟುಂಬಿಕ ಹಿಂಸೆಯಿಂದಲೂ ಕೂಡ ಸಂಬಂಧಗಳಲ್ಲಿ ತೀವ್ರ ಬಿರುಕುಂಟಾಗಿ ಕುಟುಂಬ ವಿಘಟನೆ ಹಂತ ತಲುಪಿರುವುದನ್ನು ಅಲ್ಲಗಳೆಯಲಾಗದು. ಸೋಂಕಿತ ವ್ಯಕ್ತಿಯ ಸಾವಿನಿಂದ ಕುಟುಂಬದ ಸದಸ್ಯರಲ್ಲಿ ವ್ಯಾಕುಲತೆ, ಖಿನ್ನತೆ, ಆತಂಕ, ಭಯ, ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ. ಶೂನ್ಯತೆ, ಅನಿಶ್ಚಿತತೆ, ನಿರ್ವಾತ ತೆ, ಮಾನಸಿಕ ದುಗುಡ, ಭಾವನಾತ್ಮಕ ನೋವುಗಳು ಹೆಚ್ಚಿ ಸಾಮಾಜಿಕ ಅಸಮತೋಲನಕ್ಕೆ ದಾರಿಯಾಗಬಹುದಾದ ಪರಿಸ್ಥಿತಿಯನ್ನು ಕೆಲವು ಕುಟುಂಬಗಳು ಅನುಭವಿಸುತ್ತಿವೆ.

ಕೊರೋನ ಸೋಂಕಿನ ಅವ್ಯಾಹತ ಪ್ರಸರಣದಿಂದಾಗಿ ಸಾಮಾಜಿಕ ಕೂಟಗಳು, ಮದುವೆ ಇತ್ಯಾದಿ ಸಾಮಾಜಿಕ ಆಚರಣೆಗಳಿಗಾಗಿ ಒಟ್ಟುಗೂಡುವುದು, ಶವಸಂಸ್ಕಾರದಂತಹ ಪ್ರಸಂಗದಲ್ಲಿಯೂ ಪರಸ್ಪರ ಬೆರೆಯಲಾರದ ಪರಿಸ್ಥಿತಿ ಇದೆ. ಇದರಿಂದಾಗಿ ಸಾಮಾಜಿಕ ಪ್ರತ್ಯೇಕತೆ ಉಂಟಾಗುತ್ತದೆ. ಸೋಂಕು ತಗಲುವ ಭಯವಿರುವ ಕುಟುಂಬದ ಸದಸ್ಯರು ಸಂಬಂಧಿಕರೊಂದಿಗೆ ಸಾಮಾಜಿಕ ಸಂಸರ್ಗದಲ್ಲಿ ತೊಡಗದೆ ಸಾಮಾಜಿಕ ಪತ್ಯೇಕತೆ ಕಾಪಾಡಿಕೊಳ್ಳುವ ಅನಿವಾರ್ಯದಿಂದ ಬಳಲುವಂತಾಗಿದೆ. ಯಾರನ್ನೂ ಮನೆಗೆ ಆಹ್ವಾನಿಸದಂತಹ ಮತ್ತು ಯಾರ ಮನೆಗೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಗಳಿಂದಾಗಿ ಕುಟುಂಬಗಳ ನಡುವೆ ಇದ್ದ ಸೌಹಾರ್ದದ ಬದಲಿಗೆ ಸಂಶಯ ಒಡಮೂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಚಿಕ್ಕಮಕ್ಕಳಿಗೂ ಕೋವಿಡ್ ಸೋಂಕು ತಗಲುವ ಸಾಧ್ಯತೆ ಇರುವುದು ಜನರಲ್ಲಿ ಹೆಚ್ಚು ಆತಂಕ ಮೂಡಿಸಿದೆ. ಇದರಿಂದಾಗಿ ಸಾಮಾಜಿಕ ಪ್ರತ್ಯೇಕತೆಯನ್ನು ಪಾಲಿಸಲೇ ಬೇಕಾದ ಪರಿಸ್ಥಿತಿ ಇದೆ. ವೈದ್ಯಕೀಯ ವರದಿಗಳ ಪ್ರಕಾರ ಕೋವಿಡ್ ಮೂರನೇ ಅಲೆಯು ಮುಂಬರುವ ದಿವಸಗಳಲ್ಲಿ ಅಪ್ಪಳಿಸಲಿದ್ದು, ಆದರಿಂದ ಚಿಕ್ಕಮಕ್ಕಳಿಗೆ ಅಪಾಯವಿದೆ ಎಂಬ ವದಂತಿಗಳು ಚಿಕ್ಕ ಮಕ್ಕಳನ್ನು ಹೊಂದಿರುವ ಕುಟುಂಬಗಳು ಆತಂಕ ಮತ್ತು ಭಯದಲ್ಲಿ ಜೀವಿಸುವಂತಾಗಿದೆ.

ಕೋವಿಡ್ ಸಂಬಂಧಿತ ಲಾಕ್‌ಡೌನ್ ಪರಿಣಾಮಗಳಿಂದಾಗಿ ಶೈಕ್ಷಣಿಕ ವ್ಯವಸ್ಥೆಯು ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ಚಿಕ್ಕ ಮಕ್ಕಳು ಅಕ್ಷರಜ್ಞಾನದಿಂದ ವಂಚಿತರಾಗುವ ಪರಿಸ್ಥಿತಿ ಇದೆ. ಕಲಿಕೆಯ ಪ್ರಕ್ರಿಯೆಯಿಂದ ಬಹಳ ಕಾಲ ಮಕ್ಕಳು ವಿಮುಖರಾಗುವುದರಿಂದ ಪುನಃ ಅವರಲ್ಲಿ ಕಲಿಕೆಯ ಆಸಕ್ತಿ ಮೂಡಿಸುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಎಂದೂ ಇಂತಹ ಪರಿಸ್ಥಿತಿಯ ಬಗ್ಗೆ ಯೋಚಿಸದ ಕುಟುಂಬಗಳು ದೀರ್ಘಕಾಲದ ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳ ಕಲಿಕೆ, ಆಟಪಾಠ ನಿರ್ವಹಣೆಯ ಬಗ್ಗೆ ಯಾವ ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ಳದ ಕಾರಣ ಚಿಕ್ಕಮಕ್ಕಳ ನಿರ್ವಹಣೆಯೇ ಕುಟುಂಬಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಶೈಕ್ಷಣಿಕ ವ್ಯವಸ್ಥೆ ತೀರಾ ಹದಗೆಟ್ಟಿದ್ದು ನಿಶ್ಚಿತವಾದ ತೀರ್ಮಾನ ತೆಗೆದುಕೊಳ್ಳಲು ಸರಕಾರವು ಹಿಂದೇಟು ಹಾಕುತ್ತಿರುವುದರಿಂದ ಮಕ್ಕಳನ್ನು ಶೈಕ್ಷಣಿಕ ಶಿಸ್ತಿಗೊಳಪಡಿಸುವಂತಹ ಹೊರೆಯನ್ನು ಕುಟುಂಬಗಳೇ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ.

ಒಟ್ಟಾರೆ ಕೋವಿಡ್ ವ್ಯಾಪಕವಾಗಿ ಹರಡುವುದನ್ನು ನಿರ್ಬಂಧಿಸುವ ಸಂಬಂಧ ಕೈಗೊಳ್ಳಲಾದ ಪ್ರತಿಬಂಧಕ ಕ್ರಮಗಳಿಂದಾಗಿ ಕುಟುಂಬ ವ್ಯವಸ್ಥೆ ತೀವ್ರ ಕೌಟುಂಬಿಕ ಸಂಘರ್ಷವನ್ನು ಎದುರಿಸಬೇಕಾಗಿ ಬಂದಿದೆ. ಕುಟುಂಬದ ಸ್ವಾಸ್ಥ್ಯ ನಿರ್ವಹಣೆಯು ಸಾಮಾಜಿಕ ಸ್ವಾಸ್ಥ್ಯವನ್ನು ಬಲಪಡಿಸುತ್ತದೆ. ಸುಸ್ಥಿರ ಸಮಾಜಕ್ಕೆ ಸುಸ್ಥಿರ ಕುಟುಂಬ ವ್ಯವಸ್ಥೆಯು ಅತಿ ಅವಶ್ಯಕವಾಗಿದೆ. ಕೊರೋನ ನಿಯಂತ್ರಿಸಲು ಹಾಕಿಕೊಂಡಿರುವ ಸಾಮಾಜಿಕ ನಿಯಂತ್ರಣ, ಅದರಲ್ಲೂ ಮುಖ್ಯವಾಗಿ ಹೋಮ್ ಕ್ವಾರಂಟೈನ್ ಹಾಗೂ ಲಾಕ್‌ಡೌನ್‌ಗಳ ಪರಿಣಾಮಗಳಿಂದ ಉಂಟಾಗಿರುವ ಕೌಟುಂಬಿಕ ಸಂಘರ್ಷವನ್ನು ನಿಯಂತ್ರಿಸುವ ಜವಾಬ್ದಾರಿಯೂ ಕುಟುಂಬಕ್ಕೆ ಇರುವುದರಿಂದ ಅತ್ಯಂತ ಪ್ರಜ್ಞಾಪೂರ್ವಕವಾಗಿ ಕುಟುಂಬ ತನ್ನ ಜವಾಬ್ದಾರಿ ನಿಭಾಯಿಸುವುದು ಅಗತ್ಯವಾಗಿದೆ.

Writer - ಸದಾಶಿವ ಮರ್ಜಿ, ಧಾರವಾಡ

contributor

Editor - ಸದಾಶಿವ ಮರ್ಜಿ, ಧಾರವಾಡ

contributor

Similar News