ಉನ್ನತ ಶಿಕ್ಷಣ ಅವನತಿಯತ್ತ?

Update: 2021-06-22 06:01 GMT

ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳ ಸ್ಥಿತಿ ಈಗ ತೀರಾ ಹದಗೆಟ್ಟಿದೆ. ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಇಡೀ ದೇಶವನ್ನು ಕಂಗೆಡಿಸಿ ಜನರ ಮೂಲಭೂತ ಆರೋಗ್ಯ ಸೌಕರ್ಯಗಳಿಗಾಗಿ ಪರದಾಡಬೇಕಾಯಿತು. ಆದಾಗ್ಯೂ ಸಮುದಾಯ ನೆಲೆಯಲ್ಲಿಯೇ ಸೋಂಕು ಹರಡುವಲ್ಲಿ ಅತ್ಯಂತ ಬಲಹೀನ ತಾಣಗಳಾಗಿರುವ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳ ಸುರಕ್ಷತೆಯ ಬಗ್ಗೆ ಗಂಭೀರ ಸ್ವರೂಪದ ಕಾಳಜಿ ಇನ್ನೂ ಕಾಣಿಸುತ್ತಿಲ್ಲ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಮತ್ತು ರಾಜ್ಯಗಳ ಮಟ್ಟದಲ್ಲಿ ಸಂಬಂಧಿತ ಶಿಕ್ಷಣ ಇಲಾಖೆಗಳು ಕೊರೋನ ತಡೆಗೆ ಸಂಬಂಧಿಸಿ ನಿಗದಿತವಾಗಿ ಮಾರ್ಗದರ್ಶಿ ಸೂತ್ರಗಳನ್ನು, ಸುತ್ತೋಲೆಗಳನ್ನು ಕಳುಹಿಸಿದ್ದು ಬಿಟ್ಟರೆ ತಳಮಟ್ಟದಲ್ಲಿ ಯಾವುದೇ ಪ್ರಯತ್ನವಾಗಲಿ, ಕೆಲಸವಾಗಲಿ ನಡೆದಿಲ್ಲ.

ಹಾಸ್ಟೆಲ್, ಕ್ಯಾಂಟೀನ್, ಸಭಾಗೃಹ, ಜಿಮ್, ಆಟದ ಮೈದಾನ, ಆಡಳಿತ ಕಚೇರಿ, ಸ್ಟಾಫ್ ರೂಮುಗಳು, ಅತಿಥಿಗೃಹಗಳು, ತರಗತಿ ಕೋಣೆಗಳು ಹಾಗೂ ಪ್ರಯೋಗಾಲಯ ಇತ್ಯಾದಿಗಳಿರುವ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳಿಗೆ ಕೊರೋನದಿಂದಾಗಿ ಬದಲಾದ ಪರಿಸ್ಥಿತಿಗೆ ಮಾರ್ಪಾಟಾಗಿ ಹೊಂದಿಕೊಳ್ಳಲು ಬೃಹತ್ ಮೊತ್ತದ ಸಂಪನ್ಮೂಲಗಳು ಬೇಕಾಗುತ್ತವೆ. ಇವುಗಳನ್ನು ಒದಗಿಸದೆ ಎಂದಿನ ಮಾಮೂಲು ಧೋರಣೆ ತಾಳಿದಲ್ಲಿ, ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಹಾಗೂ ನೌಕರರ ಜೀವಗಳನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ಕೊರೋನ ಬಿಕ್ಕಟ್ಟನ್ನು ಎದುರಿಸಿ ಹೋರಾಡಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಈ ವರ್ಷದ ಮೇ 10ರಂದು ಯುಜಿಸಿ ಯೋಚಿಸಿತ್ತು. ಒಂದು ಕಾರ್ಯಪಡೆ ರಚನೆ ಹಾಗೂ ಸಹಾಯವಾಣಿಗಳನ್ನು ಸ್ಥಾಪಿಸುವುದು, ಜೀವ ಕೌಶಲ್ಯಗಳಲ್ಲಿ ತರಬೇತಾದ ಸ್ವಯಂಸೇವಕರ ತಂಡವನ್ನು ರಚಿಸುವುದು ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಯುಜಿಸಿ ಶಿಫಾರಸು ಮಾಡಿತ್ತು. ಆದರೆ ಈ ವಿಶೇಷ ಕಾರ್ಯಗಳಿಗೆ ಕಾರ್ಯಪಡೆಯನ್ನು ತರಬೇತುಗೊಳಿಸಲು ಬೇಕಾಗುವ ಮಾರ್ಗ ಸಂಪನ್ಮೂಲ ಹಾಗೂ ಕಾರ್ಯಯೋಜನೆಯ ಬಗ್ಗೆ ಅದು ಏನನ್ನೂ ಪ್ರಸ್ತಾಪಿಸಲಿಲ್ಲ.

ಲಸಿಕೆ ಅಭಿಯಾನದ ಕೆಲಸದಲ್ಲಿ ರಾಜ್ಯ ಸರಕಾರಗಳು ಮುಳುಗಿಹೋಗಿರುವ ಕೊರೋನ ಬಿಕ್ಕಟ್ಟಿನ ಸಮಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಪರಿಣಾಮವಾಗಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಸಂಭವಿಸಿರುವ ಅನೇಕ ಶಿಕ್ಷಕರ ಸಾವಿನ ವರದಿಗಳು ರಾಷ್ಟ್ರೀಯ ಬೌದ್ಧಿಕ ಬಂಡವಾಳ ಹಾಗೂ ವಿದ್ವತ್ತಿಗೆ ಆಗಿರುವ ನಷ್ಟವನ್ನು ಸೂಚಿಸುತ್ತವೆ. ಕಳೆದ ವರ್ಷ ನವೆಂಬರ್ 5ರಂದು ಹೊರಡಿಸಿದ ಆಜ್ಞೆಯಲ್ಲಿ ಯುಜಿಸಿ, ಲಾಕ್‌ಡೌನ್ ಮುಗಿದ ಬಳಿಕ ಕಾಲೇಜುಗಳು ಪುನರಾರಂಭವಾಗುವಾಗ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಪಟ್ಟಿ ಮಾಡಿತ್ತು. ಸೋಂಕು ತಡೆ ಔಷಧಿ ಸಾಮಗ್ರಿಗಳು ಹಾಗೂ ಮಾಸ್ಕ್‌ನಂತಹ ಅವಶ್ಯಕತೆಗಳ ಪೂರೈಕೆಗೆ ಬೇಕಾಗುವ ಅಂದಾಜು ಮಾಡಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಿಫಾರಸು ಮಾಡಿತ್ತು. ಈ ಅವಶ್ಯಕ ವಸ್ತುಗಳು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಇತರ ಸಿಬ್ಬಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಪೂರೈಕೆಯಾಗುವಂತೆ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ನೋಡಿಕೊಳ್ಳಬೇಕು ಎಂದು ಅದು ಹೇಳಿತ್ತು. ಅಲ್ಲದೆ ಕ್ಯಾಂಪಸ್‌ಗಳಲ್ಲಿ ಸೋಂಕಿತ ವ್ಯಕ್ತಿಗಳಿಗೆ, ಅವರ ಸಂಪರ್ಕದಲ್ಲಿರುವವರಿಗೆ ಐಸೋಲೇಷನ್ ವ್ಯವಸ್ಥೆಗಳನ್ನು ಸ್ಥಾಪಿಸುವಂತೆ ಅದು ಸೂಚಿಸಿತ್ತು.

ಆದರೆ ಈ ಎಲ್ಲಾ ಶಿಫಾರಸುಗಳು, ಸಲಹೆ ಸೂಚನೆಗಳು ವಾಸ್ತವದಲ್ಲಿ ಅನುಷ್ಠಾನಗೊಂಡಿಲ್ಲ. ರಾಜ್ಯಗಳ ವಾರ್ಷಿಕ ಬಜೆಟ್‌ಗಳಲ್ಲಿ ಕೋವಿಡ್-19ರ ನಿರ್ವಹಣೆೆಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಸ್ಪಷ್ಟವಾದ ಅನುದಾನ, ಹಣಕಾಸು ಪೂರೈಕೆಯ ಪ್ರಸ್ತಾಪಗಳು ಕಾಣಿಸಲಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳ ಹಾಗೂ ನೀತಿ ನಿರೂಪಕರ ಈ ಅಸಡ್ಡೆ, ನಿರಾಸಕ್ತಿ (ಕೇಂದ್ರ ಹಾಗೂ ರಾಜ್ಯ ಮಟ್ಟಗಳೆರಡರಲ್ಲೂ) ನೂರಾರು ಜೀವಗಳನ್ನು ಅಪಾಯಕ್ಕೆ ತಳ್ಳಬಹುದು ಹಾಗೂ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳಲು, ಅಸ್ತವ್ಯಸ್ತಗೊಳ್ಳಲು ಕಾರಣವಾಗಬಹುದು.

ಕೋವಿಡ್-19 ಬಿಕ್ಕಟ್ಟನ್ನು ಸಮರ್ಥವಾಗಿ ಪರಿಹರಿಸಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಹಣಕಾಸು ನೆರವು ನೀಡುವಂತೆ ರಾಜ್ಯ ಸರಕಾರಗಳಿಗೆ ಸೂಕ್ತ ನಿರ್ದೇಶನ ನೀಡುವುದು ಯುಜಿಸಿಯ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಕೇಂದ್ರದ ವ್ಯಯ ಇಲಾಖೆ ಬಿಡುಗಡೆ ಮಾಡಿರುವ ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ (ಎಸ್‌ಡಿಆರ್‌ಎಫ್)ನಿಂದ ಈ ಸಂಪನ್ಮೂಲಗಳನ್ನು ಒದಗಿಸಬಹುದಾಗಿದೆ.

ಕೃಪೆ: TheHindu

(ಲೇಖಕರು ಜೋಧ್‌ಪುರದ ಜೈನಾರಾಯಣ್ ವ್ಯಾಸ್ ವಿಶ್ವವಿದ್ಯಾನಿಲಯದ ಎಂ.ಬಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.)

Writer - ಮಿಲಿಂದ್ ಕುಮಾರ್ ಶರ್ಮಾ

contributor

Editor - ಮಿಲಿಂದ್ ಕುಮಾರ್ ಶರ್ಮಾ

contributor

Similar News