ಎಮ್ಮೆ ಖರೀದಿಸಿ ಮನೆಗೆ ಮರಳುತ್ತಿದ್ದ ಯುವಕನನ್ನು ಥಳಿಸಿ ಕೊಂದ ಗುಂಪು; ಗೋರಕ್ಷಕರ ವಿರುದ್ಧ ಸ್ಥಳೀಯರ ಆರೋಪ

Update: 2021-06-23 08:20 GMT

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಥಾನಾಮಂಡಿ ಪ್ರದೇಶದಲ್ಲಿ  ಎಮ್ಮೆಯೊಂದಿಗೆ ಮನೆಗೆ ಮರಳುತ್ತಿದ್ದ 24 ವರ್ಷದ ಯುವಕನನ್ನು ಗುಂಪೊಂದು ಥಳಿಸಿ ಸಾಯಿಸಿದೆ. ಈ ದಾಳಿಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಈ ಗುಂಪು ಥಳಿತ ಘಟನೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದ್ದಾರಲ್ಲದೆ ಯುವಕ ಐಜಾಝ್ ಡರ್ ಸಾವಿಗೆ ಗೋ ರಕ್ಷಕರೇ ಕಾರಣ ಎಂದು ದೂರಿದ್ದಾರೆ. ನಾಲ್ಕು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದರೂ ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ.

ಗುಂಪು ಥಳಿತದಿಂದ ಮೃತಪಟ್ಟ ಯುವಕ ತನ್ನ ಕುಟುಂಬದ ಏಕೈಕ ಆಧಾರವಾಗಿದ್ದು ಮನೆಯಲ್ಲಿ ಆತನ ಅಸೌಖ್ಯಪೀಡಿತ ತಂದೆ ಹಾಗೂ ಮೂವರು ಸೋದರಿಯರಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸ್ಥಳೀಯ ಗ್ರಾಮಸ್ಥರು ರಜೌರಿ ಜಿಲ್ಲಾಧಿಕಾರಿ ಕಚೇರಿ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದರಲ್ಲದೆ ಆರೋಪಿಗಳನ್ನು ಶೀಘ್ರ ಬಂಧಿಸಿ ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯಿದೆ ಹೇರಬೇಕೆಂದು ಆಗ್ರಹಿಸಿದ್ದಾರೆ.

ನೌಶೇರಾ ಸಮೀಪದ ಲಾಮ್ ಎಂಬಲ್ಲಿಂದ ಎಮ್ಮೆ ಖರೀದಿಸಿ ಡರ್ ಮತ್ತಿತರರು ಮನೆಗೆ ಮರಳುತ್ತಿದ್ದಾಗ ಮುರಾದ್ಪುರ್ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ  ದುಷ್ಕರ್ಮಿಗಳು ಅವರ ಮೇಲೆ ಕಲ್ಲು ಮತ್ತು ಕೋಲುಗಳಿಂದ ದಾಳಿ ನಡೆಸಿದ್ದರೆಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ಡರ್ ಮೃತಪಟ್ಟಿದ್ದಾನೆ, ಉಳಿದಿಬ್ಬರ ಸ್ಥಿತಿ ಸ್ಥಿರವಾಗಿದೆ.

ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News