ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಬರ್ಬರ ಹತ್ಯೆ

Update: 2021-06-24 18:44 GMT
ರೇಖಾ ಕದಿರೇಶ್ (ಫೈಲ್ ಫೋಟೊ)

ಬೆಂಗಳೂರು, ಜೂ.24: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಬಿಬಿಎಂಪಿ ಮಾಜಿ ಸದಸ್ಯೆಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆಗೈದಿರುವ ಘಟನೆ ಇಲ್ಲಿನ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಛಲವಾದಿ ಪಾಳ್ಯದ ಬಿಬಿಎಂಪಿಯ ಮಾಜಿ ಸದಸ್ಯೆ ರೇಖಾ ಕದಿರೇಶನ್(40) ಕೊಲೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಛಲವಾದಿಪಾಳ್ಯದ ಫ್ಲವರ್ ಗಾರ್ಡನ್‍ನಲ್ಲಿ ತಮ್ಮ ಕಚೇರಿ ಮುಂದೆ ಗುರುವಾರ ಬೆಳಗ್ಗೆ ರೇಖಾ ಕದಿರೇಶನ್ ಅವರು ಆಹಾರ ಕಿಟ್ ವಿತರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳ ತಂಡ ಕತ್ತು ಕೊಯ್ದು, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ತೀವ್ರ ರಕ್ತಸ್ರಾವದಿಂದ ಕಚೇರಿ ಎದುರೇ ನರಳುತ್ತ ಬಿದ್ದಿದ್ದ ರೇಖಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆಯ ಕಚೇರಿ ಬಳಿ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮೆರಾಗಳನ್ನು ಮೇಲ್ಮುಖವಾಗಿ ತಿರುಗಿಸಿದ್ದಾರೆ.

ಪತಿಯ ಕೊಲೆ: 2018ರ ಫೆಬ್ರವರಿ 7ರಂದು ರೇಖಾ ಅವರ ಪತಿ ಕದಿರೇಶನ್ ಅವರನ್ನು ಸಹ ಫ್ಲವರ್ ಗಾರ್ಡನ್ ದೇವಸ್ಥಾನದ ಆವರಣದಲ್ಲೇ ಹತ್ಯೆ ಮಾಡಲಾಗಿತ್ತು. ಇದೀಗ ಅದೇ ರೀತಿಯಲ್ಲೇ ರೇಖಾ ಅವರನ್ನು ಕೊಲೆ ಮಾಡಲಾಗಿದೆ.

ತಮಿಳುನಾಡು ಮೂಲದ ಕದಿರೇಶನ್ ನಗರಕ್ಕೆ ವಲಸೆ ಬಂದು ಛಲವಾದಿಪಾಳ್ಯದಲ್ಲಿ ನೆಲೆಸಿ ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ. ನಂತರ ಆತ ಅಕ್ರಮ ಗಾಂಜಾ ಮಾರಾಟದಲ್ಲಿ ಗುರುತಿಸಿಕೊಂಡು ನಗರದ ಕುಖ್ಯಾತ ರೌಡಿ ಎನಿಸಿಕೊಂಡಿದ್ದ ಆರೋಪವೂ ಇದೆ.

ವಿಶೇಷ ತಂಡ ರಚನೆ: ಹತ್ಯೆ ಪ್ರಕರಣ ಸಂಬಂಧ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದರು.

ಅಂಗರಕ್ಷನಿಂದಲೇ ಕೊಲೆ?
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶನ್ ಅವರ ಅಂಗರಕ್ಷಕರಾಗಿ ಪೀಟರ್ ಹಾಗೂ ಸೂರ್ಯ ಕೆಲಸ ಮಾಡುತ್ತಿದ್ದರು. ಗುರುವಾರ ಸಹ ಆಹಾರ ವಿತರಣೆ ವೇಳೆ ರೇಖಾಳ ಜೊತೆಯೇ ಇದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ತಲೆಮರೆಸಿಕೊಂಡಿರುವ ಪೀಟರ್ ವಿರುದ್ಧ ಒಂದು ಕೊಲೆ ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿ ಗೊತ್ತಾಗಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಈತನೂ ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. 

ಈ ಕುರಿತು ರೇಖಾ ಅವರ ಪುತ್ರ ರಾಹುಲ್ ಮಾತನಾಡಿ, ಪೀಟರ್ ನಮಗೆ ತುಂಬಾ ಆತ್ಮೀಯನಾಗಿದ್ದ. ಈತ ಕೊಲೆ ಮಾಡಿದ್ದಾನೆ ಎನ್ನುವ ಮಾತುಗಳು ಅಶ್ಚರ್ಯ ತಂದಿದೆ ಎಂದರು.

ರೇಖಾ ಕದಿರೇಶನ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಈ ಹಿಂದೆ ಅವರ ಪತಿಯನ್ನು ಇದೇ ರೀತಿ, ಹತ್ಯೆ ಮಾಡಲಾಗಿತ್ತು. ಈಗ ಪತ್ನಿಯನ್ನು ಹತ್ಯೆ ಮಾಡಲಾಗಿದೆ. 24ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಕದಿರೇಶನ್ ಅವರನ್ನು ಕೊಲೆ ಮಾಡಿದವರೇ ಜೈಲಿನಿಂದ ಬಿಡುಗಡೆಯಾದ ನಂತರ ರೇಖಾ ಅವರನ್ನೂ ಕೊಲೆ ಮಾಡಿರುವ ಅನುಮಾನವಿದೆ. ಇದು ಅಮಾನವೀಯ. ಕೊಲೆ ಹಿಂದೆ ಕುಟುಂಬದವರ ಕೈವಾಡ ಇದೆಯೋ, ಇಲ್ಲವೋ ಗೊತ್ತಿಲ್ಲ. ಜೈಲಿಂದ ಬಿಡುಗಡೆಯಾದವರು ಕೊಲೆ ಮಾಡಿರಬಹುದೆಂದು ಶಂಕೆ ಇದೆ.
-ಆರ್.ಅಶೋಕ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News