×
Ad

ಬೆಂಗಳೂರು; ನಕಲಿ ಡಾಲರ್ ದಂಧೆ : ಇಬ್ಬರು ವಿದೇಶಿ ಪ್ರಜೆಗಳು ಸೆರೆ

Update: 2021-06-24 17:14 IST

ಬೆಂಗಳೂರು, ಜೂ. 24: ವೀಸಾ ಅವಧಿ ಮುಗಿದರೂ ನಗರದಲ್ಲೇ ಇದ್ದು ನಕಲಿ ಅಮೆರಿಕನ್ ಡಾಲರ್ ದಂಧೆ ನಡೆಸುತ್ತಿದ್ದ ಆರೋಪ ಸಂಬಂಧ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳಿಂದ ನಕಲಿ ಅಮೆರಿಕನ್ ಡಾಲರ್ ಹಾಗೂ ಇತರೆ ವಸ್ತುಗಳು ಜಪ್ತಿ ಮಾಡಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಹೊಟೇಲ್‍ನಲ್ಲಿ ಕ್ಯಾಮರೋನ್ ದೇಶದ ಇಬ್ಬರು ತಂಗಿದ್ದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ಪೈಕಿ ಓರ್ವ ಮೆಡಿಕಲ್ ಅಟೆಂಡರ್ ಹೆಸರಿನಲ್ಲಿ ವೀಸಾ ಪಡೆದಿದ್ದ, ಆದರೆ ವೀಸಾ ಅವಧಿ ಮುಗಿದರೂ ದೇಶ ಬಿಟ್ಟು ಹೋಗಿರಲಿಲ್ಲ. ಮತ್ತೋರ್ವನ ಬಳಿ ಯಾವುದೇ ದಾಖಲೆ ಇರಲಿಲ್ಲ. ಇಬ್ಬರು ಆರೋಪಿಗಳು ನಕಲಿ ಅಮೆರಿಕನ್ ಡಾಲರ್ ಇಟ್ಟುಕೊಂಡು ಭಾರತೀಯ ಕರೆನ್ಸಿ ರೂಪದಲ್ಲಿ 10 ಲಕ್ಷ ನೀಡಿದರೆ 1 ಕೋಟಿ ಡಾಲರ್ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News