ಕುತೂಹಲ ಕೆರಳಿಸಿದ ಬಿ.ವೈ. ವಿಜಯೇಂದ್ರ ದಿಢೀರ್ ದಿಲ್ಲಿ ಭೇಟಿ

Update: 2021-06-24 18:29 GMT

ಬೆಂಗಳೂರು, ಜೂ. 24: `ನಾಯಕತ್ವ ಬದಲಾವಣೆ' ಬಿಕಟ್ಟಿನ ನಡುವೆಯೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ದಿಢೀರ್ ಹೊಸದಿಲ್ಲಿ ಭೇಟಿ ರಾಜ್ಯ ಬಿಜೆಪಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಖುದ್ದು ಬೆಂಗಳೂರಿಗೆ ಆಗಮಿಸಿ ಜೂ.16ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ಇತಿಶ್ರೀ ಹಾಡುವ ಪ್ರಯತ್ನ ನಡೆಸಿ ವರಿಷ್ಟರಿಗೆ ವರದಿಯನ್ನು ಸಲ್ಲಿಸಿದ್ದರು.

ಆದರೆ, ಈ ಬೆಳವಣಿಗೆಗಳ ಮಧ್ಯೆಯೇ ಬಿಎಸ್‍ವೈ ಪುತ್ರ ವಿಜಯೇಂದ್ರ ದಿಢೀರ್ ದಿಲ್ಲಿಗೆ ತೆರಳಿದ್ದು, ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಗೊತ್ತಾಗಿದೆ. ಅರುಣ್ ಸಿಂಗ್ ರಾಜ್ಯ ಭೇಟಿ ಹಾಗೂ ಹೈಕಮಾಂಡ್‍ಗೆ ವರದಿ ಸಲ್ಲಿಕೆ ಬಳಿಕ ನಡೆದಿರುವ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ವಿಜಯೇಂದ್ರ ದಿಲ್ಲಿ ಭೇಟಿಗೆ ವಿಶೇಷ ಮಹತ್ವವಿದೆ ಎಂದು ಬಿಜೆಪಿ ವಲಯದಲ್ಲಿ ವಿಶ್ಲೇಷಣೆ ನಡೆದಿದೆ.

ಆದರೆ, ವಿಜಯೇಂದ್ರ ದಿಲ್ಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರ ವೈಯಕ್ತಿಕ ಕೆಲಸಗಳ ನಿಮಿತ್ತ ದಿಲ್ಲಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ, ಪಕ್ಷ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವರಿಷ್ಟರ ಭೇಟಿಗೆ ವಿಜಯೇಂದ್ರ ದಿಲ್ಲಿಗೆ ಹೋಗಿದ್ದು, ಆ ಕಾರ್ಯದ ಬಳಿಕ ಅವರು ರಾಜ್ಯಕ್ಕೆ ಹಿಂದಿರುವ ಸಾಧ್ಯತೆಗಳಿವೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಸಮಾಲೋಚನೆ: ನಿನ್ನೆ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಪುತ್ರ ಸಂಸದ ಬಿ.ವೈ.ರಾಘವೇಂದ್ರ, ವಿಜಯೇಂದ್ರ ಸಹಿತ ಕುಟುಂಬದ ಸದಸ್ಯರೆಲ್ಲರೂ ಸೇರಿ ಔತಣಕೂಟವನ್ನು ನಡೆಸಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಜುಲೈ 10ಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಎರಡು ವರ್ಷ ಪೂರೈಸಲಿದ್ದು, ಈ ಕುರಿತು ಕಾರ್ಯಕ್ರಮ ಏರ್ಪಡಿಸುವುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಛಲವಾದಿಪಾಳ್ಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರ ಹತ್ಯೆ ನಿಜಕ್ಕೂ ಆಘಾತಕಾರಿ ಸಂಗತಿಯಾಗಿದ್ದು, ಈ ಬರ್ಬರ ಕೃತ್ಯವೆಸಗಿದ ಅಪರಾಧಿಗಳಿಗೆ ಆದಷ್ಟು ಶೀಘ್ರದಲ್ಲೆ ಕಠಿಣ ಶಿಕ್ಷೆಯಾಗಬೇಕು. ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ'
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News