ವಿಧಾನಸಭೆ ವಿಶೇಷ ಅಧಿವೇಶನ ಕರೆಯಲು ಕುಮಾರಸ್ವಾಮಿ ಆಗ್ರಹ
ಬೆಂಗಳೂರು, ಜೂ.25: ನಾಡಿನ ಕೋವಿಡ್ ಸ್ಥಿತಿಗತಿ, ಸರಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು 'ಕನ್ನಡ, ಕನ್ನಡಿಗ, ಕರ್ನಾಟಕ'ದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ವಿಧಾನ ಸಭಾಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಈ ಸೋಂಕಿನಿಂದ ಹಲವು ಜೀವಹಾನಿ ಹಾಗೂ ಜೀವನವು ದುಸ್ತರವಾಗಿದೆ. ಆದರೆ ಜೀವಹಾನಿ, ಜನಜೀವನಕ್ಕಾದ ತೊಂದರೆಗೆ ಸರಕಾರ ನೀಡಿರುವ ಪರಿಹಾರ ಸೂಕ್ತವಾದುದ್ದಲ್ಲ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ, ಜಿಪುಣತೆ ತೋರಲಾಗಿದೆ. ಅದೇರೀತಿ ಲಾಕ್ ಡೌನ್ ಪರಿಹಾರವಾಗಿ ಸರಕಾರ ಘೋಷಿಸಿರುವ ಪ್ಯಾಕೇಜ್ ಅತ್ಯಂತ ಅಲ್ಪ ಪ್ರಮಾಣದ್ದು. ಈ ಪ್ಯಾಕೇಜ್ ಘೋಷಣೆ ಮಾಡುವ ಮುನ್ನ ಸರ್ವಪಕ್ಷಗಳ ಅಭಿಪ್ರಾಯ ಕೇಳಬೇಕಿತ್ತು ಎಂದು ಕುಮಾರಸ್ವಾಮಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಕೋವಿಡ್ 3ನೇ ಅಲೆಯ ಭೀತಿ ತಲೆದೋರಿದ್ದು, ಈ ಸಂದರ್ಭ ಹಿಂದಿನ ವೈಫಲ್ಯ, ಮುಂದೆ ಆಗಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ವಿಶೇಷ ಅಧಿವೇಶನ ಕರೆಯುವ ಅಗತ್ಯವಿದೆ ಎಂದು ಅವರು ಆಭಿಪ್ರಾಯಿಸಿದ್ದಾರೆ.
ಭ್ರಷ್ಟಾಚಾರ ಆರೋಪ
ರಾಜ್ಯ ಸರಕಾರದ ಮೇಲೆ ಭ್ರಷ್ಡಾಚಾರದ ಗುರುತರ ಆರೋಪಗಳಿವೆ. ನೀರಾವರಿ ಇಲಾಖೆ ಯೋಜನೆಯ 20,000 ಕೋ.ರೂ. ಟೆಂಡರ್ ನಲ್ಲಿ ಶೇ.10 ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆಡಳಿತ ಪಕ್ಷದ ಹಿರಿಯ ಶಾಸಕರೇ ಆರೋಪಿಸಿದ್ದಾರೆ. ಅಲ್ಲದೆ ಇದರಲ್ಲಿ ಮುಖ್ಯಮಂತ್ರಿಯ ಕುಟುಂಬದ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಅಬಕಾರಿ ಸಚಿವರು ಪ್ರತೀ ಜಿಲ್ಲೆಯಿಂದ ಲಂಚದ ಹಣ ಅಪೇಕ್ಷಿಸುತ್ತಿರುವ ಆರೋಪವೂ ಕೇಳಿಬಂದಿದೆ. ಆದ್ದರಿಂದ ಈ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇವೆಲ್ಲದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಹಿನ್ನಡೆಗಳಾಗುತ್ತಿವೆ. ಈ ಬಗ್ಗೆಯೂ ಚರ್ಚೆಗಳಾಗಬೇಕಿದೆ ಎಂದು ಅವರು ಪತ್ರದಲ್ಲಿ ಅಭಿಪ್ರಾಯಿಸಿದ್ದಾರೆ.