ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಪ್ರಕರಣ: ಕಾಲಿಗೆ ಗುಂಡಿಕ್ಕಿ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಜೂ.25: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶನ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳು ಎನ್ನಲಾದ ಇಬ್ಬರ ಮೇಲೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಟರ್ ಹಾಗೂ ಸೂರ್ಯ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರು ರೇಖಾ ಪತಿ ಕದಿರೇಶ್ ಸಂಬಂಧಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಪಿಎಸ್ಸೈ, ಕಾನ್‍ಸ್ಟೇಬಲ್ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್‍ಪೇಟೆ ಇನ್‍ಸ್ಪೆಕ್ಟರ್ ಚಿದಾನಂದ್ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
39 ಜನರ ವಿಚಾರಣೆ?: ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ಬಗ್ಗೆ ತಿಳಿದಿದ್ದ ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ 39 ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಪೈಕಿ ಗುರುವಾರ ರಾತ್ರಿ ಪೀಟರ್ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಆರೋಪಿಗಳು ಆಟೊ ಮೂಲಕ ನಗರದೆಲ್ಲೆಡೆ ಸುತ್ತಾಟ ನಡೆಸುತ್ತಿರುವ ಮಾಹಿತಿ ಸಂಗ್ರಹಿಸಿದ್ದರು. ತದನಂತರ, ಆರೋಪಿಗಳ ಮೊಬೈಲ್ ನೆಟ್‍ವರ್ಕ್ ಆಧಾರದ ಮೇಲೆ ಆರೋಪಿಗಳ ಇರುವಿಕೆ ಬಗ್ಗೆ ಪತ್ತೆ ಹಚ್ಚಿದಾಗ, ಸುಂಕದ ಕಟ್ಟೆಯ ಬಜಾಜ್ ಮೈದಾನದಲ್ಲಿ ಮದ್ಯಪಾನ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಕೊಲೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು, ನಿಖರವಾಗಿ ಯಾವ ವಿಚಾರಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ ಎಂದು ತಿಳಿಸಿದರು.
ಏನಿದು ಪ್ರಕರಣ?: ಗುರುವಾರ ಬೆಳಗ್ಗೆ ಛಲವಾದಿಪಾಳ್ಯದ ಕಚೇರಿ ಬಳಿಯಲ್ಲಿಯೇ ರೇಖಾ ಕದಿರೇಶನ್ ಅವರು ಎಂದಿನಂತೆ ಬಡವರಿಗೆ ಊಟ ವಿತರಿಸಿ ಮನೆಗೆ ಹಿಂದಿರುಗುತ್ತಿದ್ದರು. ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರೇಖಾ ಅವರ ಹೊಟ್ಟೆ ಸೇರಿ ದೇಹದ ವಿವಿಧೆಡೆ 15ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.
ಸಹಾಯ ಮಾಡಿಲ್ಲವೆಂದು ಕೊಲೆ?
ಪ್ರಕರಣದಲ್ಲಿ ಬಂಧನವಾಗಿರುವ ಪೀಟರ್ ಈ ಮೊದಲು 2018ರಲ್ಲಿ ಕೊಲೆಯಾದ ಕದಿರೇಶನ್ ಹತ್ಯೆಯ ಪ್ರಮುಖ ರೂವಾರಿ ಶೋಭನ್ ಎಂಬಾತನೊಂದಿಗೆ ಗುರುತಿಸಿಕೊಂಡಿದ್ದ. ಆದರೂ ಕದಿರೇಶನ್ ಅವರ ಸಂಬಂಧಿ ಯುವತಿಯನ್ನು ಪೀಟರ್ ಜತೆ ಮದುವೆ ಮಾಡಿಕೊಡಲಾಗಿತ್ತು.
ಇತ್ತೀಚಿಗೆ ತ್ಯಾಜ್ಯ ಸಂಗ್ರಹಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವತಿಯಿಂದ ಮಂಜೂರು ಆಗುವ ಬಿಲ್‍ವೊಂದನ್ನು ರೇಖಾ ತಡೆ ಹಿಡಿದಿದ್ದರು. ಜತೆಗೆ, ಹೊಸ ಮನೆ ನಿರ್ಮಾಣಕ್ಕೆ ಹಣ ಕೊಡುವುದಾಗಿ ಹೇಳಿದ್ದ ರೇಖಾ ಅದಕ್ಕೂ ಸಹಾಯ ಮಾಡಿರಲಿಲ್ಲ. ಅದರಿಂದ ಬೇಸತ್ತಿದ್ದ ಪೀಟರ್, ರೇಖಾ ವಿರುದ್ಧ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಮತ್ತೋರ್ವ ಆರೋಪಿ ಸೂರ್ಯ ಕೂಡ ಕದಿರೇಶನ್ ಸಂಬಂಧಿಯಾಗಿದ್ದು, ಈತನ ವಿರುದ್ಧ ಕಾಟನ್‍ಪೇಟೆಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದೆ. ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎನ್ನುವ ಕಾರಣದಿಂದಲೇ ಕೊಲೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ.