ಗೋಲಿಬಾರ್‌ ಪ್ರಕರಣ: ಎಸ್ಐಟಿ ಎದುರು ವಿಚಾರಣೆಗೆ ಸುಖ್ಬೀರ್ ಸಿಂಗ್ ಹಾಜರಾದ ಬಾದಲ್

Update: 2021-06-26 18:33 GMT

ಚಂಡೀಗಢ, ಜೂ.26: ಕೋಟಕ್ಪುರದಲ್ಲಿ 2015ರಲ್ಲಿ ನಡೆದಿದ್ದ ಪೊಲೀಸ್ ಗೋಲೀಬಾರ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಎದುರು ಶನಿವಾರ ಹಾಜರಾದ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹಾಜರಾಗಿ ಹೇಳಿಕೆ ನೀಡಿದರು ಎಂದು ವರದಿಯಾಗಿದೆ.

ಫರೀದ್ಕೋಟ್ ಜಿಲ್ಲೆಯಲ್ಲಿ ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿದ ಪ್ರಕರಣವನ್ನು ವಿರೋಧಿಸಿ ಕೋಟಕ್ಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ 2 ಮಂದಿ ಮೃತಪಟ್ಟಿದ್ದರು. ಈ ಸಂದರ್ಭ ಬಾದಲ್ ಪಂಜಾಬ್ನ ಉಪಮುಖ್ಯಮಂತ್ರಿಯಾಗಿದ್ದರು. ಜೊತೆಗೆ, ಗೃಹ ಇಲಾಖೆಯೂ ಇವರ ಕೈಯಲ್ಲಿತ್ತು. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ರಚನೆಯಾಗಿ ಗೋಲೀಬಾರ್ ಪ್ರಕರಣಕ್ಕೆ ಸಂಬಂಧಿಸಿ 2 ಪ್ರಕರಣ ದಾಖಲಿಸಲಾಗಿತ್ತು. 

ಹೆಚ್ಚುವರಿ ಡಿಜಿಪಿ (ವಿಜಿಲೆನ್ಸ್ ಬ್ಯೂರೊ) ಎಲ್ ಕೆ ಯಾದವ್ ನೇತೃತ್ವದ ಎಸ್ಐಟಿ ಮಂಗಳವಾರ ಶಿರೋಮಣಿ ಅಕಾಲಿದಳದ ಮುಖಂಡ, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಸುಮಾರು ಎರಡೂವರೆ ಗಂಟೆ ವಿಚಾರಣೆ ನಡೆಸಿತ್ತು. ಈ ಮಧ್ಯೆ, ಬಾದಲ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ಸುಮಾರು 6 ವರ್ಷದ ಬಳಿಕ ಪಂಜಾಬ್ ನ ಆತ್ಮಕ್ಕೆ ಆದ ಗಾಯಕ್ಕೆ ನ್ಯಾಯ ದೊರಕುವ ಸ್ಥಿತಿ ಮತ್ತಷ್ಟು ನಿಕಟವಾಗಿದೆ ಎಂದು ಟ್ವೀಟ್ ಮಾಡಿದ್ದು ಈ ಟ್ವೀಟ್ ಅನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಗೆ ಟ್ಯಾಗ್ ಮಾಡಿದ್ದಾರೆ.
ರಾಹುಲ್ ಗಾಂಧಿ ಸೂಚನೆಯ ಮೇರೆಗೆ ಅಮರೀಂದರ್ ಸಿಂಗ್ ಅಕಾಲಿದಳದ ಮುಖಂಡರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಖ್ಬೀರ್ ಸಿಂಗ್ ಬಾದಲ್ ಶುಕ್ರವಾರ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News