ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿಸಲು ಸರಕಾರದಿಂದ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜೂ. 27: `ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ನಿರ್ಮಾಣವಾದ ಉದ್ಯಾನನರಿ ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿಸಲು ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, `ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡಿದ ಕೆಂಪೇಗೌಡರ ಹೆಸರು ಬೆಂಗಳೂರಿನೊಂದಿಗೆ ಹಾಸುಹೊಕ್ಕಾಗಿದೆ. ಬೆಂಗಳೂರಿನ ಮೂಲಸೌಕರ್ಯಗಳ ಅಮೂಲಾಗ್ರ ಸುಧಾರಣೆ ಮೂಲಕ ಜನಜೀವನವನ್ನು ಸಹನೀಯಗೊಳಿಸುವುದು ಸರಕಾರದ ಗುರಿ' ಎಂದು ಹೇಳಿದರು.
ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 'ಬೆಂಗಳೂರು ಮಿಷನ್-2022' ಯೋಜನೆಯ ಮೂಲಕ ಸುಗಮ ಸಂಚಾರ, ಹಸಿರು ಸ್ವಚ್ಛ ಸುಂದರ ನಗರವನ್ನಾಗಿ ಮಾರ್ಪಡಿಸುವ ಕೆಲಸ ನಡೆದಿದೆ. ಬೆಂಗಳೂರು ಉಪನಗರ ರೈಲು ಯೋಜನೆಯು ಅನುಷ್ಠಾನಗೊಳ್ಳುತ್ತಿದೆ. ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಉಪನಗರಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಇಂದು ಬೆಂಗಳೂರು ವಿಶ್ವವಿಖ್ಯಾತ ನಗರವಾಗಿ ಬೆಳೆದಿದೆ. ಇಂತಹ ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
`ನಾಡಪ್ರಭು ಕೆಂಪೇಗೌಡರು 5 ಶತಮಾನಗಳ ಹಿಂದೆ ಅಸ್ಥಿತ್ವಕ್ಕೆ ತಂದ ಬೆಂಗಳೂರು ಮಹಾನಗರವಾಗಿ ಅಭಿವೃದ್ಧಿಗೊಂಡಿದೆ. ಪ್ರಗತಿಪರ ಧೋರಣೆಗೆ ಪೂರಕವಾಗಿಯೇ ಬೆಳೆದಿದೆ. ಪಾರಂಪರಿಕ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾಡಿನ ಪರಂಪರೆಯನ್ನು ಉಳಿಸುವ ಕಾರ್ಯವನ್ನೂ ಕೈಗೊಳ್ಳಲಾಗಿದೆ. ಕೆಂಪೇಗೌಡರ 100 ಅಡಿ ಪ್ರತಿಮೆಯನ್ನು ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ ನಗರವನ್ನು ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಕೆಂಪೇಗೌಡರದ್ದು, ನಗರದಲ್ಲಿ ಉದ್ಯಾನವನಗಳಲ್ಲದೆ ಅನೇಕ ಕೆರೆಗಳು, ದೇವಾಲಯಗಳನ್ನು ಕೆಂಪೇಗೌಡರು ನಿರ್ಮಿಸಿದ್ದಾರೆ. ಬೆಂಗಳೂರು ನಗರವನ್ನು ಎಲ್ಲ ದೃಷ್ಟಿಯಿಂದಲೂ ಮಾದರಿ ನಗರವನ್ನಾಗಿಸಿದ್ದರು. ಶಂಕುಸ್ಥಾಪನೆಗೊಂಡಿರುವ ಕೆಂಪೇಗೌಡರ ಅಧ್ಯಯನ ಕೇಂದ್ರ ಶೀಘ್ರವಾಗಿ ಪೂರ್ಣಗೊಂಡು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ನೆರವಾಗಿ ಕೆಂಪೇಗೌಡರ ಕುರಿತು ಇನ್ನಷ್ಟು ಬೆಳಕು ಚೆಲ್ಲಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.