ಬೆಂಗಳೂರಿನ ವಶಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ಹಗರಣ: ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸೇರಿ ಹಲವರ ವಿರುದ್ಧ ಎಫ್‍ಐಆರ್
ಬೆಂಗಳೂರು, ಜೂ.28: ಶ್ರೀ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಹಗರಣ ಆರೋಪ ಪ್ರಕರಣ ಸಂಬಂಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ್ ಸೇರಿ ಹಲವರ ವಿರುದ್ಧ ಇಲ್ಲಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ವಂಚನೆಗೊಳಗಾದ ಮೂವರು ನೀಡಿದ ದೂರಿನ್ವಯ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಕೆ.ಎನ್.ವೆಂಕಟನಾರಾಯಣ್, ಈತನ ಪುತ್ರ ಕೃಷ್ಣಪ್ರಸಾದ್ ವಿರುದ್ಧ ಕಲಂ 120 (ಬಿ), 403, 406, 417, 420, 468, 471 ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಜೂ. 24 ರಂದು ಮೂರು ಠೇವಣಿದಾರರು ಶ್ರೀ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ವಂಚಿಸಿರುವ ಬಗ್ಗೆ ದೂರು ನೀಡಿದ್ದರು. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷನಾಗಿದ್ದ ಕೆ.ಎನ್.ವೆಂಕಟನಾರಾಯಣ್, ನಾಲ್ಕು ವರ್ಷಗಳ ಹಿಂದಷ್ಟೇ ಹನುಮಂತನಗರದ ರಾಮಾಂಜನೇಯ ರಸ್ತೆಯಲ್ಲಿ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಆರಂಭಿಸಿದ್ದರು ಎನ್ನಲಾಗಿದೆ. ಬಳಿಕ ಠೇವಣಿ ಇರಿಸಿದರೆ ಉತ್ತಮ ಲಾಭ ನೀಡುವುದಾಗಿ ವೆಂಕಟನಾರಾಯಣ ಭರವಸೆ ನೀಡಿದ್ದರು. ಅದನ್ನು ನಂಬಿದ್ದ ನಿವೃತ್ತ ನೌಕರರು, ವ್ಯಾಪಾರಿಗಳು, ಖಾಸಗಿ ಕಂಪೆನಿ ಉದ್ಯೋಗಿಗಳು ಹೂಡಿಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ನೋಟಿಸ್: ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕೆ.ಎನ್.ವೆಂಕಟನಾರಾಯಣ್, ಕೃಷ್ಣ ಪ್ರಸಾದ್ ಅವರಿಗೆ ಜು.1 ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೂ ಆಡಿಟ್ ನಡೆಸಲು ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.