×
Ad

ಎರಡು ದಿನಗಳ ಇಂಡಿಯನ್ ಮುಸ್ಲಿಮ್ ಲೀಡರ್‍ಶಿಪ್ ಕಾನ್ಫರೆನ್ಸ್ ಯಶಸ್ವಿ: ಅಬ್ದುಲ್ ಸುಭಾನ್

Update: 2021-06-28 23:05 IST

ಬೆಂಗಳೂರು, ಜೂ.28: ಹೊಸದಿಲ್ಲಿಯ ಇನ್ಸ್‍ಟಿಟ್ಯೂಟ್ ಆಫ್ ಆಬ್ಜೆಕ್ಟೀವ್ ಸ್ಟಡೀಸ್ ಹಾಗೂ ಫಾಲ್ಕನ್ ಗ್ರೂಪ್ ಆಫ್ ಇನ್ಸ್‍ಟಿಟ್ಯೂಷನ್ಸ್ ಸಹಯೋಗದೊಂದಿಗೆ ಆನ್‍ಲೈನ್ ಮೂಲಕ ಜೂ.26 ಹಾಗೂ 27ರಂದು ಆಯೋಜಿಸಲಾಗಿದ್ದ ಎರಡು ದಿನಗಳ ‘ಇಂಡಿಯನ್ ಮುಸ್ಲಿಮ್ ಲೀಡರ್‍ಶಿಪ್ ಕಾನ್ಫರೆನ್ಸ್’ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿರುವ ಫಾಲ್ಕನ್ ಪಿಯು ಕಾಲೇಜಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ರಾಜಕೀಯ, ಶಿಕ್ಷಣ, ಯುವ ಸಬಲೀಕರಣ, ಪತ್ರಿಕೋದ್ಯಮ, ಕಾನೂನು, ನ್ಯಾಯಾಂಗ ವ್ಯವಸ್ಥೆ, ಅಧಿಕಾರಶಾಹಿ, ಸಾಮಾಜಿಕ ಹೋರಾಟಗಳು, ಮಹಿಳಾ ನಾಯಕತ್ವ, ಪ್ರಾದೇಶಿಕ ನಾಯಕತ್ವದ ವಿಚಾರಗಳ ಬಗ್ಗೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಚರ್ಚೆ ನಡೆಸಿದರು ಎಂದರು.

ನಾಯಕತ್ವ ಎಂದರೆ ಇವತ್ತು ಕೇವಲ ರಾಜಕೀಯ ನಾಯಕತ್ವಕ್ಕೆ ಅಷ್ಟೇ ನಾವು ಸೀಮಿತವಾಗಿದ್ದೇವೆ. ರಾಜಕೀಯ ಹೊರತಾದ ಕ್ಷೇತ್ರಗಳಲ್ಲಿಯೂ ಸಮುದಾಯದ ನಾಯಕತ್ವ ಬೆಳವಣಿಗೆಯಾಗಬೇಕಿದೆ. ಆದುದರಿಂದ, ಪ್ರಮುಖವಾಗಿ ಶಿಕ್ಷಣ, ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ಸುಧಾರಣೆಗಳ ಅಗತ್ಯವಿದೆ ಎಂಬುದನ್ನು ಗಣ್ಯರು ಪ್ರತಿಪಾದಿಸಿದ್ದಾರೆ ಎಂದು ಅವರು ಹೇಳಿದರು.

ಡಾ.ಝೆಡ್.ಎಂ.ಖಾನ್, ಶೇಕ್ ಝಾಕಿರ್ ಹುಸೇನ್, ಮಾಜಿ ಕೇಂದ್ರ ಸಚಿವ ಡಾ.ಕೆ.ರಹ್ಮಾನ್ ಖಾನ್, ಪಶ್ಚಿಮ ಬಂಗಾಳದ ಮಾಜಿ ಸಂಸದ ಅಹ್ಮದ್ ಹಸನ್ ಇಮ್ರಾನ್, ಅಸ್ಸಾಂನ ಸಂಸದ ಬದ್ರುದ್ದೀನ್ ಅಜ್ಮಲ್, ಯು.ಟಿ.ಖಾದರ್, ಮುನವ್ವರ್ ಅಲಿ ಶಿಹಾಬ್ ತಂಙಳ್ ಸೇರಿದಂತೆ ಇನ್ನಿತರರು ಭಾರತೀಯ ರಾಜಕೀಯ ವಿಷಯದ ಕುರಿತು ವಿಷಯ ಮಂಡಿಸಿದರು ಎಂದು ಅಬ್ದುಲ್ ಸುಭಾನ್ ತಿಳಿಸಿದರು.

ಶಿಕ್ಷಣದ ವಿಷಯದ ಕುರಿತು ಭಾರತೀಯ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಎಸ್.ವೈ.ಖುರೇಶಿ, ಪುಣೆಯ ಆಝಮ್ ಕ್ಯಾಂಪಸ್‍ನ ಪಿ.ಎ.ಇನಾಮ್‍ದಾರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಅಬ್ದುಲ್ ಖದೀರ್, ರಾಜಸ್ಥಾನ್ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಫುರ್ಖಾನ್ ಖಮರ್, ಗ್ಲೋಕಲ್ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಅಮೀರುಲ್ಲಾ ಖಾನ್ ವಿಷಯ ಮಂಡನೆ ಮಾಡಿದರು ಎಂದು ಅವರು ಹೇಳಿದರು.

ಅಧಿಕಾರಶಾಹಿ ವಿಷಯದ ಕುರಿತು ಐಎಎಸ್ ಅಧಿಕಾರಿ ಪಿ.ಸಿ.ಜಾಫರ್, ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್, ಆರ್‍ಬಿಐನ ಡಾ.ಜೆ.ಸದಾಖತ್ತುಲ್ಲಾ ಸೇರಿದಂತೆ ಇನ್ನಿತರರು ಬೆಳಕು ಚೆಲ್ಲಿಸಿದರು. ಈ ಎರಡು ದಿನಗಳ ಕಾಲ ನಡೆದಿರುವ ಕಾನ್ಫರೆನ್ಸ್ ನಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳನ್ನು ಕ್ರೋಢಿಕರಿಸಿ, ಯಾವ ಯಾವ ವಿಷಯಗಳ ಮೇಲೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಅಬ್ದುಲ್ ಸುಭಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News