ಪತಿಯ ವಿವಾಹೇತರ ಸಂಗಾತಿಯನ್ನು ಪ್ರತಿವಾದಿ ಮಾಡಲು ಸಾಧ್ಯವಿಲ್ಲ: ಹೈಕೋರ್ಟ್
Update: 2021-06-29 22:20 IST
ಬೆಂಗಳೂರು, ಜೂ.29: ಪತಿಯೊಂದಿಗೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಾರೆ ಎಂಬ ಆರೋಪದಡಿ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಹೆಸರಿಸಲಾಗಿದ್ದ ಮಹಿಳೆಯನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಇಂತಹ ಸಂಬಂಧ ಹೊಂದಿದ್ದಾರೆ ಎನ್ನಲಾದ ಯಾವುದೇ ವ್ಯಕ್ತಿಯು ಕುಟುಂಬದ ಸದಸ್ಯರಾಗಿರುವುದಿಲ್ಲ. ಹೀಗಾಗಿ ಇಂತಹ ವ್ಯಕ್ತಿಗಳನ್ನು ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದಾಗ ಪ್ರತಿವಾದಿಯಾಗಿ ಸೇರಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.
ಅರಕಲಗೂಡಿನ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯ ಆರೋಪಕ್ಕೆ ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯಾಗಿಸಿರುವ ಕ್ರಮ ಪ್ರಶ್ನಿಸಿ ರಾಮನಗರದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಆ ಆದೇಶ ನೀಡಿದೆ.