ಶಾಲಾ-ಕಾಲೇಜು ಶೀಘ್ರ ಆರಂಭಿಸಲು ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಆಗ್ರಹ
ಬೆಂಗಳೂರು, ಜೂ.30: ಕೋವಿಡ್-19 ಪಾಸಿಟಿವ್ ದರ ಶೇ.3ಕ್ಕಿಂತಲೂ ಕಡಿಮೆ ಇದ್ದಾಗ್ಯೂ ಶಾಲಾ-ಕಾಲೇಜುಗಳಲ್ಲಿ ರಾಜ್ಯ ಸರಕಾರ ಭೌತಿಕ ತರಗತಿಗಳನ್ನು ಆರಂಭಿಸದೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಪಡಿಸಿದೆ ಎಂದು ಕರ್ನಾಟಕ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಆಕ್ಷೇಪಿಸಿದೆ.
ಕಠಿಣ ನಿಯಮಗಳೊಂದಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ, ಪಾಳಿ ಪದ್ಧತಿ ವಿದ್ಯಾಗಮ ಹಾಗೂ ಹಂತ ಹಂತವಾಗಿ ಶಾಲೆ ಆರಂಭಿಸಲು ಸರಕಾರ ಮುಂದಾಗಬೇಕು ಎಂದು ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.
ಶಾಲಾ ಶುಲ್ಕ ಗೊಂದಲಕ್ಕೆ ತೆರೆ ಎಳೆಯಿರಿ
ಕಳೆದೊಂದು ವರ್ಷದಿಂದ ವಿದ್ಯಾರ್ಥಿಗಳ ಪೋಷಕರು, ಶಾಲಾಡಳಿತ ಮಂಡಳಿಗಳು ಆರ್ಥಿಕ ಸಂಕಷ್ಟದಲ್ಲಿವೆ. ಆದ್ದರಿಂದ ಸರಕಾರವು ಶಾಲಾ ಶುಲ್ಕ ವಿಚಾರವಾಗಿ ಇಬ್ಬರಿಗೂ ಅನುಕೂಲವಾಗುವಂತೆ ಸೂಕ್ತ ತೀರ್ಮಾನ ತೆಗೆದುಕೊಂಡು ಈ ಗೊಂದಲಕ್ಕೆ ತೆರೆ ಎಳೆಯಬೇಕು ಎಂದವರು ಆಗ್ರಹಿಸಿದ್ದಾರೆ.
ಖಾಸಗಿ ಶಾಲೆಗಳಲ್ಲೂ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲು ಸರಕಾರ ಮುಂದಾಗಬೇಕು. ಅದೇರೀತಿ ಎಸೆಸೆಲ್ಸಿ ಪರೀಕ್ಷೆ ಬಗ್ಗೆ ಎದ್ದಿರುವ ಗೊಂದಲ ಪರಿಹರಿಸಿ ವಿದ್ಯಾರ್ಥಿಗಳ ಆತಂಕ ಶಮನಗೊಳಿಸಬೇಕು. ಪಿಯುಸಿ ಫಲಿತಾಂಶ ಪ್ರಕಟಿಸುವ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡದೆ ಸ್ಪಷ್ಟ ನಿರ್ಧಾರವನ್ನು ಇಲಾಖೆ ಪ್ರಕಟಿಸಬೇಕು ಎಂದು ಲೋಕೇಶ್ ತಾಳಿಕಟ್ಟೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.