ಹಸಿರು ಬೆಂಗಳೂರು ನಿರ್ಮಾಣದ ಸಂಕಲ್ಪದತ್ತ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ: ಸಿಎಂ ಯಡಿಯೂರಪ್ಪ

Update: 2021-06-30 15:00 GMT

ಬೆಂಗಳೂರು, ಜೂ.30: ‘ಹಸಿರು ಬೆಂಗಳೂರು’ ನಿರ್ಮಾಣದ ನಿಟ್ಟಿನಲ್ಲಿ ಕಾಡುಗೋಡಿಯಲ್ಲಿ ಅರಣ್ಯ ಇಲಾಖೆ ವತಿಯಿಂದ 22 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಸಸ್ಯೋದ್ಯಾನ ಹಾಗೂ ಕನ್ನಮಂಗಲದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ 70 ಎಕರೆ ವಿಸ್ತೀರ್ಣದ ಸಸ್ಯ ಶಾಸ್ತ್ರೀಯ ತೋಟ(ಮಿನಿ ಲಾಲ್‍ಬಾಗ್) ಮಹತ್ವದ ಕೊಡುಗೆಗಳಾಗಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಮಹದೇವಪುರ ಕ್ಷೇತ್ರದ ಕಾಡುಗೋಡಿಯಲ್ಲಿ ವೃಕ್ಷೋದ್ಯಾನ, ಕನ್ನಮಂಗಲದಲ್ಲಿ ಸಸ್ಯ ಶಾಸ್ತ್ರೀಯ ತೋಟ ಹಾಗೂ ಕೆರೆ, ನಿಂಬೆಕಾಯಿಪುರದಲ್ಲಿ ಜನಪದರು ರಂಗ ಮಂದಿರವನ್ನು ಉದ್ಘಾಟಿಸಿದ ಬಳಿಕ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೆಂಗಳೂರು ವಿಷನ್-2022 ಆಡಿಯಲ್ಲಿ ಬೆಂಗಳೂರಿನ ನಾಗರಿಕರಿಗೆ ಉತ್ತಮ ಪರಿಸರ ಒದಗಿಸುವ ನಮ್ಮ ವಚನಕ್ಕೆ ನಾವು ಬದ್ಧವಾಗಿದ್ದೇವೆ ಎಂಬುದಕ್ಕೆ ಈ ವೃಕ್ಷೋದ್ಯಾನ, ಸಸ್ಯ ಶಾಸ್ತ್ರೀಯ ತೋಟದ ಉದ್ಘಾಟನೆ ಸಾಕ್ಷಿಯಾಗಿದೆ. ವೃಕ್ಷೋದ್ಯಾನದಲ್ಲಿ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ನಡಿಗೆ ಪಥ, ಜಿಮ್, ಮಕ್ಕಳಿಗೆ ಆಟದ ಅಂಕಣ, ನೈಸರ್ಗಿಕ ಪಥಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕನ್ನಮಂಗಲದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ 70 ಎಕರೆ ಸಸ್ಯ ಶಾಸ್ತ್ರೀಯ ತೋಟ(ಮಿನಿ ಲಾಲ್‍ಬಾಗ್)ವನ್ನು ಇನ್ನು ಮುಂದೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ‘ಅಟಲ್ ಬಿಹಾರಿ ವಾಜಪೇಯಿ ಸಸ್ಯಶಾಸ್ತ್ರೀಯ ತೋಟ, ಕನ್ನಮಂಗಲ’ ಎಂದು ನಾಮಕರಣ ಮಾಡಿ ಲೋಕಾರ್ಪಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಘೋಷಿಸಿದರು.

ಹಲವು ಬಗೆಯ ಸಸ್ಯಗಳನ್ನು ಹೊಂದಿರುವ ಈ ತೋಟ ಜೀವವೈವಿಧ್ಯಮಕ್ಕೆ ಕಾರಣವಾಗಿದೆ. ಇದರಲ್ಲಿ ಸಸ್ಯ ಸಂಪತ್ತಿನ ಜೊತೆ ನಾಗರಿಕ ಸೌಕರ್ಯಕ್ಕಾಗಿ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. ವಾಯು ವಿಹಾರಿಗಳ ಪಥ, ಕುಡಿಯುವ ನೀರಿನ ಘಟಕ, ಶೌಚಾಲಯ ಒಳಗೊಂಡೊಂತೆ ಹಲವು ಅಭಿವೃದ್ಧಿ ಕಾರ್ಯಗಳು ಉದ್ಘಾಟನೆಗೊಂಡಿವೆ. ಸ್ಥಳೀಯ ನಾಗರಿಕರಿಗೆ ಶುದ್ಧವಾದ ಗಾಳಿ ಹಾಗೂ ಆರೋಗ್ಯಕರ ಬದುಕು ನೀಡುವಲ್ಲಿ ಸಹಾಯವಾಗುತ್ತದೆ ಎಂದು ಅವರು ಹೇಳಿದರು.

18 ಎಕರೆ ವಿಸ್ತೀರ್ಣದಲ್ಲಿರುವ ಬೀದರಹಳ್ಳಿ ಹೋಬಳಿಯಲ್ಲಿರುವ ಕನ್ನಮಂಗಲ ಕೆರೆಯನ್ನು ಉದ್ಘಾಟಿಸಿದ್ದು ನನಗೆ ಸಂತೋಷ ಎನಿಸಿದೆ. ಅತಿಕ್ರಮಣದ ಸಮಸ್ಯೆ ನಿವಾರಿಸಿ, ಅಂತರ್ಜಲ ಮಟ್ಟವನ್ನು ಏರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಟ್ರಯಾಜ್ ಸೆಂಟರ್ ಸ್ಥಾಪನೆ, ಲಸಿಕೆ ನೀಡುವುದು ಹಾಗೂ ಅರ್ಹರಿಗೆ ಅಗತ್ಯ ನೆರವನ್ನು ನೀಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಿಂಬೆಕಾಯಿಪುರದ ಜನಪದರು ರಂಗ ಮಂದಿರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 3.50 ಕೋಟಿ ರೂ.ವೆಚ್ಚದಲ್ಲಿ ಒಂದು ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಈ ರಂಗ ಮಂದಿರ ಅತ್ಯಂತ ವಿಶಿಷ್ಟವಾದದ್ದು. ಭಾರತೀಯ ರಂಗ ಭೂಮಿಯ ಮಟ್ಟಿಗೆ ‘ತಿರುಗುವ ವೇದಿಕೆ’ ಹೊಂದಿರುವ ಏಕೈಕ ರಂಗ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಜೊತೆಗೆ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ 508 ಎಕರೆ ವಿಸ್ತೀರ್ಣ ಹೊಂದಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಪರಿವೀಕ್ಷಣೆ ಮಾಡಿ ವಿಷನ್ ಬೆಂಗಳೂರು 2022 ಅಡಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಮಗ್ರವಾದ ಅಭಿವೃದ್ಧಿ ನೀಲಿನಕ್ಷೆಯನ್ನು ಸಿದ್ಧಪಡಿಸುವ ಕಾರ್ಯ ಆರಂಭಿಸಲಾಗುವುದು.  ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ಸಸ್ಯಶಾಸ್ತ್ರೀಯ ತೋಟವನ್ನು ಲಾಲ್‍ಬಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಸಿಎಂ ಇವತ್ತು ಅದನ್ನು ಉದ್ಘಾಟಿಸಿದ್ದು, ನಾಳೆಯಿಂದಲೇ ಅದು ಸಾರ್ವಜನಿಕರಿಗೆ ಲಭ್ಯ ಇರಲಿದೆ. ಜನಪದರು ಕೇಂದ್ರ ಪಾಪಣ್ಣ ಅವರ ನೇತೃತ್ವದಲ್ಲಿ ಅಭಿವೃದ್ಧಿಯಾಗಿದೆ. ರಾಜ್ಯದ ಎಲ್ಲ ಕಲಾವಿದವರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ನಾಟಕಕಾರರಿಗೆ ಅಗತ್ಯವಿರುವ ರೊಟೇಟಿಂಗ್ ಸ್ಟೇಜ್ ನಿರ್ಮಿಸಲಾಗಿದೆ. ಸಿಲ್ಕ್ ಬೋರ್ಡ್‍ನಿಂದ ಟಿನ್‍ಫ್ಯಾಕ್ಟರಿ ವರೆಗೆ ಮೆಟ್ರೋ ಕಾಮಗಾರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಅನುಮೋದನೆ ನೀಡಿವೆ. ಭೂಮಿಯ ಪರೀಕ್ಷೆ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ, ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಅನುಕೂಲವಾಗಲಿದೆ. ಬೈಯಪ್ಪನಹಳ್ಳಿಯಿಂದ ಆನೇಕಲ್‍ವರೆಗೆ ರೈಲ್ವೆ ಡಬ್ಲಿಂಗ್ ಕಾಮಗಾರಿಯನ್ನು ಸಿಎಂ ವೀಕ್ಷಿಸಿದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹಲವಾರು ಕೊಡುಗೆಯನ್ನು ಸರಕಾರ ನೀಡಿದೆ ಎಂದು ಅವರು ಹೇಳಿದರು.

ವರ್ತೂರು, ಬೆಳ್ಳಂದೂರು ಕೆರೆಗಳ ಅಭಿವೃದ್ಧಿಗೆ ಸಿಎಂ ಅನುದಾನ ನೀಡಿದ್ದು, ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ. ಅದೇ ರೀತಿ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಅಭಿವೃದ್ಧಿಪಡಿಸಲು ವಿಷನ್ 2022 ಯೋಜನೆಯಡಿ ಅನುದಾನ ಒದಗಿಸಿದರೆ ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ವೇದಿಕೆ ಮೇಲೆ ತೋಟಗಾರಿಕಾ ಸಚಿವ ಆರ್.ಶಂಕರ್, ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಜಿಲ್ಲಾಧಿಕಾರಿ ಮಂಜುನಾಥ್, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಆರ್.ಕೆ.ಮಿಶ್ರಾ, ಜನಪದರ ರಂಗ ಮಂದಿರದ ಅಧ್ಯಕ್ಷ ಪಾಪಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News