×
Ad

ಸಿಎಂ ಭೇಟಿ ಮಾಡಿದ ಕೃಷಿ ಕುಲಪತಿಗಳ ನಿಯೋಗ: ಮಾನವ ಸಂಪನ್ಮೂಲ ಕೊರತೆ ನೀಗಿಸುವಂತೆ ಮನವಿ

Update: 2021-06-30 20:35 IST

ಬೆಂಗಳೂರು, ಜೂ. 30: `ಕೃಷಿ ವಿಶ್ವ ವಿದ್ಯಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಕೊರತೆಯನ್ನು ನೀಗಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ರಾಜ್ಯದ ಕೃಷಿ ವಿಶ್ವ ವಿದ್ಯಾಲಯಗಳ ಕುಲಪತಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಬುಧವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.45ರಷ್ಟು ಶಿಕ್ಷಕರ ಹುದ್ದೆಗಳು, ಶೇ.55ರಷ್ಟು ಶಿಕ್ಷಕೇತರ ಹುದ್ದೆ ಕೊರತೆಯಿದೆ. ವಿಶ್ವ ವಿದ್ಯಾಲಯ ಶಿಕ್ಷಣ ಮತ್ತು ಸಂಶೋಧನೆಗೆ 2016-17ರಿಂದೀಚೆಗೆ ಶೇ.65ರಷ್ಟು ಅನುದಾನ ಕಡಿತಗೊಂಡಿದೆ. ಗುಣಮಟ್ಟದ ಹಾಗೂ ಪರಿಣಾಮಕಾರಿ ಶಿಕ್ಷಣಕ್ಕೆ ಮಾನವ ಸಂಪನ್ಮೂಲಗಳ ಅಗತ್ಯತೆಯಿದೆ. ಆದರೆ, ಇಷ್ಟೊಂದು ದೊಡ್ಡಮಟ್ಟದಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಈಗಿರುವ ಸಿಬ್ಬಂದಿಗಳೇ ಹೇಗೋ ಸರಿದೂಗಿಸಿಕೊಂಡು ಹೆಚ್ಚುವರಿ ಜವಾಬ್ದಾರಿಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾನವ ಸಂಪನ್ಮೂಲಗಳ ಕೊರತೆಯಿಂದಾಗಿ ಕೆಲವೆಡೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮಾನವ ಸಂಪನ್ಮೂಲಗಳ ಕೊರತೆ ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದ್ದು, ಅಲ್ಲದೇ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಸಿಬ್ಬಂದಿಗಳ ಮೇಲೂ ಸಹ ಪರಿಣಾಮವುಂಟಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್, ಸಿಎಂಗೆ ಮನವರಿಕೆ ಮಾಡಿಕೊಟ್ಟು ಮಾನವಸಂಪನ್ಮೂಲಗಳ ಹೆಚ್ಚಳಕ್ಕೆ ಮನವಿ ಮಾಡಿದರು.

ಭೇಟಿಗೂ ಮುನ್ನ ಬಿ.ಸಿ.ಪಾಟೀಲ್ ತನ್ನ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಕುಲಪತಿಗಳ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಕೃಷಿ ಅನುಸಂಧಾನ ಪರಿಷತ್ತಿನ ಎಐಸಿಆರ್‍ಪಿ ಯೋಜನೆಗಳಲ್ಲಿ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರಕಾರದಿಂದ ಶೇ.80 ಹಾಗು ಶೇ.100ರಷ್ಟು ಅನುದಾನ ಬರುತ್ತಿರುವುದರಿಂದ ಕೆವಿಕೆ ಹಾಗೂ ಐಸಿಆರ್ ಹುದ್ದೆಗಳ ನೇಮಕಾತಿ ಮಾಡಲು ಕೂಡಲೇ ಅನುಮತಿಗೆ ಸಚಿವರಿಗೆ ಕುಲಪತಿಗಳು ಮನವಿ ಮಾಡಿದರು. ಅಲ್ಲದೆ, ಶಿವಮೊಗ್ಗದ ನೂತನವಾಗಿ ನಿರ್ಮಾಣಗೊಂಡಿರುವ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.

ಕೃಷಿ ಶಿಕ್ಷಣ ಎಂದ ಮೇಲೆ ಎಲ್ಲ ವಿಶ್ವ ವಿದ್ಯಾಲಯಗಳು ಒಂದೇ ಆಗಿದ್ದು, ಯಾವುದೇ ವಿಶ್ವ ವಿದ್ಯಾಲಯಗಳು ಬೇರೆ ಬೇರೆ ಎಂದು ಭಾವಿಸಬಾರದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಕಲಿಕೆಯ ಹಿತದೃಷ್ಟಿಯಿಂದ ಸಮಾನವಾಗಿ ಕೆಲಸ ಮಾಡಬೇಕು. ಅಲ್ಲದೆ, ಕೃಷಿ ವಿಶ್ವ ವಿದ್ಯಾಲಯಗಳು ಕೃಷಿ ಇಲಾಖೆಯ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಿರಬೇಕು. ಕೃಷಿಯಲ್ಲಿ ನವೀನತೆ ಹಾಗೂ ಕೃಷಿ ಇಲಾಖೆಯ ಅಭಿವೃಧ್ಧಿಗೆ ವಿಶ್ವ ವಿದ್ಯಾಲಯಗಳ ಸಹಭಾಗಿತ್ವವೂ ಮುಖ್ಯವಾಗಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ತಾವು ಬೇರೆ ಎಂದು ಭಾವಿಸದೆ ಇಲಾಖೆ ಜೊತೆ ಸಂಪರ್ಕ ಸಾಧಿಸಬೇಕು. ಕೃಷಿ ಇಲಾಖೆಯೂ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಹೊಸ ಕೃಷಿ ಆವಿಷ್ಕಾರಗಳ ಬಗ್ಗೆ ವಿಜ್ಞಾನಿಗಳ ಜೊತೆ ಸಹಕರಿಸಬೇಕೆಂದು ಕೃಷಿ ಸಚಿವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News