ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಅನೀಸ್ ಉಲ್ ಹಕ್ ನಿಧನ

Update: 2021-06-30 15:06 GMT

ಬೆಂಗಳೂರು, ಜೂ.30: ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೆ.ಎಂ.ಅನೀಸ್ ಉಲ್ ಹಕ್(78) ಹೃದಯಾಘಾತದಿಂದ ಬೆಂಗಳೂರಿನ ಕುಕ್ಸ್ ಟೌನ್‍ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಿಧನ ಹೊಂದಿದರು.

ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 33 ವರ್ಷ ಸೇವೆ ಸಲ್ಲಿಸಿದ್ದ ಅನೀಸ್ ಉಲ್ ಹಕ್, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳ ಕಾಲ ಬೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉರ್ದು ಲೇಖಕರಾಗಿಯೂ ಹಲವು ಪ್ರಶಸ್ತಿಗಳನ್ನು ಅವರು ತಮ್ಮದಾಗಿಸಿಕೊಂಡಿದ್ದರು. ಮುಸ್ಲಿಮ್ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ‘ಫಿರ್ದೋಸ್’ ಎಂಬ ಕಾದಂಬರಿಯನ್ನು ರಚಿಸಿದ್ದರು.

ಇದಲ್ಲದೆ, ಸರ್ ಸೈಯದ್ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ, ಸರ್ ಸೈಯದ್ ಕ್ರಿಕೇಟರ್ಸ್ ಅಧ್ಯಕ್ಷ, ಮಸ್ಜಿದ್ ಮುಮ್ತಾಝ್ ಒ ಜಬ್ಬಾರ್ ಟ್ರಸ್ಟ್ ನ ಕಾರ್ಯದರ್ಶಿ, ರಿಸರ್ಚ್ ಬೋರ್ಡ್ ಆಫ್ ಅಮೆರಿಕನ್ ಅಡ್ವೈಸರ್ಸ್ ಫಾರ್ ಬಯೋಗ್ರಾಫಿಕಲ್ ಇನ್ಸ್ ಟಿಟ್ಯೂಟ್‍ನ ಗೌರವ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕೆನಡಾದ ಕಾಲೇಜ್ ಆಫ್ ವುಮೆನ್ ಸೈನ್ಸ್ ಮೊಂಟ್ರಿಯಲ್‍ನ ಗೌರವ ಸಲಹೆಗಾರ, ಸರ್ ಸೈಯದ್ ಎಜುಕೇಷನಲ್ ಅಂಡ್ ಯೂತ್ ವೆಲ್ಫೇರ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಜೀವ ಸದಸ್ಯರಾಗಿಯೂ ಅನೀಸ್ ಉಲ್ ಹಕ್ ಕಾರ್ಯನಿರ್ವಹಿಸಿದ್ದಾರೆ.

ಅನಿಲ್ ಉಲ್ ಹಕ್ ಬರೆದಿರುವ ಪುಸ್ತಕಗಳ ಪೈಕಿ ಎರಡು ಪುಸ್ತಕಗಳಿಗೆ ಉತ್ತರಪ್ರದೇಶದ ಉರ್ದು ಅಕಾಡಮಿಯ ಪ್ರಶಸ್ತಿಗಳು ಸಿಕ್ಕಿವೆ. 1999ರಲ್ಲಿ ಜಮ್ಮು ಕಾಶ್ಮೀರ ವಿವಿಯ ಉಪ ಕುಲಪತಿ ಪ್ರೊ.ಮುಶೀರ್ ಉಲ್ ಹಕ್ ಅವರ ಹತ್ಯೆಗೆ ಸಂಬಂಧಿಸಿದ ಪುಸ್ತಕ ’ಮಸೀಹಾ ಕೀ ಮೌತ್’ ಹೆಚ್ಚು ಹೆಸರು ತಂದ ಪುಸ್ತಕವಾಗಿದೆ.

ಇದಲ್ಲದೆ, ಡಾ.ಆಬಿದ್ ಹುಸೇನ್ ಕೆ ಮಝಾಮಿಲೆ ಮೆ ತಂಝ್ ಒ ಮಿಝಾ, ನಾಗೂ ಎ ಬರ್ಗೂಝಿದಾ, ಸಬರಸ್ ಜದಾ ಉರ್ದು ಮೇ ಪ್ರಮುಖವಾದ ಪುಸ್ತಕಗಳು. ಮಸೀಹಾ ಕೀ ಮೌತ್ ಪುಸ್ತಕವು ಕನ್ನಡ ಹಾಗೂ ಹಿಂದಿ ಭಾಷೆಗೂ ತರ್ಜುಮೆಗೊಂಡಿದೆ.

ಶ್ರೀನಗರದ ದೂರದರ್ಶನ ಕೇಂದ್ರ ಪುನರ್ ಆರಂಭಿಸಿದ ದಿಟ್ಟ ವ್ಯಕ್ತಿ

ಭಯೋತ್ಪಾದಕ ದಾಳಿಯಲ್ಲಿ ದೂರದರ್ಶನ ಕೇಂದ್ರದ ನಿರ್ದೇಶಕ, ಜಮ್ಮು ಕಾಶ್ಮೀರದ ಉಪ ಕುಲಪತಿ ಸೇರಿದಂತೆ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದರು. ಭಯೋತ್ಪಾದಕರಿಂದ ಜೀವ ಬೆದರಿಕೆಯಿದ್ದರೂ 1990ರಲ್ಲಿ ಶ್ರೀನಗರದ ದೂರದರ್ಶನ ಕೇಂದ್ರವನ್ನು ಪುನರ್ ಆರಂಭಿಸುವ ಮೂಲಕ ದಿಟ್ಟತನ ಪ್ರದರ್ಶಿಸಿದ ದಿಟ್ಟ ವ್ಯಕ್ತಿ ಅನೀಸ್ ಉಲ್ ಹಕ್.

ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆಯನ್ನು ಇಂದು ಮಗ್ರಿಬ್ ನಮಾಝ್ ನಂತರ ಹಝ್ರತ್ ಖುದ್ದೂಸ್ ಸಾಹೇಬ್ ಖಬರಸ್ತಾನ್‍ನಲ್ಲಿ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News