×
Ad

ಕುತೂಹಲಕ್ಕೆ ಕಾರಣವಾದ ರಾಜ್ಯಪಾಲ ವಾಲಾ- ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Update: 2021-06-30 21:15 IST

ಬೆಂಗಳೂರು, ಜೂ. 30: ದಿಢೀರ್ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ಸಂಜೆ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ, ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪುಷ್ಪಾಗುಚ್ಚ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, `ಇದೊಂದು ಸೌಹಾರ್ದ ಭೇಟಿ. ರಾಜ್ಯಪಾಲರಿಗೆ ಕಣ್ಣಿನ ಲೇಸರ್ ಶಸ್ತ್ರ ಚಿಕಿತ್ಸೆ(ಆಪರೇಷನ್) ಆಗಿತ್ತು. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಇದೇ ವೇಳೆ ಕೋವಿಡ್ ನಿರ್ವಹಣೆ ಸಹಿತ ಅನೇಕ ವಿಷಯಗಳ ಬಗ್ಗೆ ಸಮಾಲೋಚಿಸಿದ್ದು, ಎಲ್ಲ ವಿಚಾರಗಳನ್ನು ಕೇಳಿ ತಿಳಿದುಕೊಂಡರು. ಆದರೆ, ರಾಜ್ಯಪಾಲರ ಜೊತೆಗೆ ಯಾವುದೇ ರಾಜಕೀಯ ಮಾತನಾಡಲು ಬರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯೆ ನೀಡುವುದಿಲ್ಲ: `ಮಾಜಿ ಸಚಿವ ರಮೇಶ್ ಜಾರಕಿಹೊಳಿ ದಿಲ್ಲಿ ಪ್ರವಾಸ ವಿಚಾರ ಸೇರಿದಂತೆ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಎಲ್ಲವನ್ನೂ ಮಾಧ್ಯಮಗಳ ಮೂಲಕ ಗಮನಿಸುತ್ತಿದ್ದೇನೆ. ಎಲ್ಲರ ಮಾತುಗಳನ್ನೂ ನಾನು ಆಲಿಸುತ್ತಿದ್ದೇನೆ. ಆದರೆ, ನಾನು ಯಾವುದೇ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಯಡಿಯೂರಪ್ಪ ಇದೇ ವೇಳೆ ಸ್ಪಷ್ಟನೆ ನೀಡಿದರು.

ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ: ರಾಜ್ಯದಲ್ಲಿ ಇನ್ನೂ ಎರಡು ವರ್ಷಗಳ ಬಳಿಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶೀಘ್ರದಲ್ಲೇ 10ರಿಂದ 12 ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನಗಳನ್ನು ಗೆಲ್ಲಿಸಬೇಕು ಎಂಬುದು ನನ್ನ ಸಂಕಲ್ಪ' ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News