ಸರಕಾರಿ ಕಾಲೇಜು ಪ್ರಾಂಶುಪಾಲ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು, ಜೂ.30: ಸರಕಾರಿ ಕಾಲೇಜು ಪ್ರಾಂಶುಪಾಲರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್.ಸಿ.ರಾಮಣ್ಣ(59) ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಾಂಶುಪಾಲ ಎಂದು ತಿಳಿದುಬಂದಿದೆ.
ಕೆಂಗೇರಿ ಸರಕಾರಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಎಚ್.ಸಿ.ರಾಮಣ್ಣ ಅವರು ಕಾಮಾಕ್ಷಿಪಾಳ್ಯದ ಹೌಸಿಂಗ್ ಬೋರ್ಡ್ ಲೇಔಟ್‍ನಲ್ಲಿರುವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಾಮಣ್ಣ ಅವರ ಕುಟುಂಬವು ಇತ್ತೀಚೆಗೆ ಕಾಮಾಕ್ಷಿಪಾಳ್ಯದಲ್ಲಿರುವ ಮತ್ತೊಂದು ಮನೆಗೆ ಸ್ಥಳಾಂತರಗೊಂಡಿದ್ದರಿಂದ ರಾಮಣ್ಣ ನೇಣು ಬಿಗಿದ ಸ್ಥಿತಿಯಲ್ಲಿರುವ ಮನೆ ಖಾಲಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತಿ ಮನೆಗೆ ಹಿಂದಿರುಗದಿದ್ದಾಗ ರಾಮಣ್ಣರ ಪತ್ನಿ ರಾಜೇಶ್ವರಿ ನಿನ್ನೆ ಸಂಜೆ ವೇಳೆಗೆ ಖಾಲಿಯಿದ್ದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.