ಬಿಬಿಎಂಪಿ ವ್ಯಾಪ್ತಿಯಲ್ಲಿ ಬೇಡಿಕೆಯಷ್ಟು ಲಸಿಕೆ ಲಭ್ಯತೆ ಇಲ್ಲ: ಆಯುಕ್ತ ಗೌರವ್ ಗುಪ್ತಾ

Update: 2021-07-01 14:02 GMT

ಬೆಂಗಳೂರು, ಜು.1: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಿದ್ದು, ಲಭ್ಯತೆಯ ಕೊರತೆಯಿಂದಾಗಿ ದಿನವೊಂದಕ್ಕೆ 40ರಿಂದ 50ಸಾವಿರ ಲಸಿಕೆಗಳನ್ನಷ್ಟೆ ನೀಡಲು ಸಾಧ್ಯವಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳು, ಮೊದಲ ಹಾಗೂ ಎರಡನೆ ಡೋಸ್ ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೇಡಿಕೆಯಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯತೆ ಇಲ್ಲವಾಗಿದೆ. ಸದ್ಯ ಆರೋಗ್ಯ ಇಲಾಖೆಯಿಂದ 40ರಿಂದ 50ಸಾವಿರ ಲಸಿಕೆ ಸಿಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ 30ರಿಂದ 40ಸಾವಿರ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರದ ಸೂಚನೆಯಂತೆ ಕಾಲೇಜುಗಳಲ್ಲಿ ವ್ಯಾಕ್ಸಿನ್ ಡ್ರೈವ್ ಕ್ಯಾಂಪ್ ನಡೆಯುತ್ತಿದೆ. 61 ಕಾಲೇಜುಗಳಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಾಗೂ ಲಸಿಕೆ ಲಭ್ಯತೆಯ ಆಧಾರದಲ್ಲಿ ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ಗಡಿ ಭಾಗದಿಂದ ಬರುವ ಪ್ರಯಾಣಿಕರಿಗೆ ಕೊರೋನ ನೆಗೆಟಿವ್ ವರದಿ ಕಡ್ಡಾಯ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿಲ್ಲ. ನಗರದಲ್ಲಿ ವಿಮಾನ, ರೈಲು, ಬಸ್, ಖಾಸಗಿ ವಾಹನಗಳಲ್ಲಿ ಬರುವವರ ಕೊರೋನ ನೆಗೆಟಿವ್ ವರದಿ ಪಡೆಯುವುದು ಕಷ್ಟವೆಂದು ಅವರು ತಿಳಿಸಿದ್ದಾರೆ.

ಕೊರೋನ ಸಂಪೂರ್ಣ ಅನ್‍ಲಾಕ್‍ನ್ನು ಆಸ್ಟ್ರೇಲಿಯಾ, ಬ್ರೆಝಿಲ್, ಇಸ್ರೇಲ್ ಸೇರಿದಂತೆ ಬಹುತೇಕ ದೇಶಗಳು ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹಾಗೆ ಮಾಡಲು ಬರುವುದಿಲ್ಲ. ಆದರೂ ಹಂತ, ಹಂತವಾಗಿ ಅನ್‍ಲಾಕ್‍ವಾದರೂ ನಮ್ಮ ಸಮಾಜದಲ್ಲಿ ಕೊರೋನ ವೈರಸ್ ಇನ್ನೂ ಜೀವಂತವಿದೆ ಎಂಬುದನ್ನು ಸಾರ್ವಜನಿಕರು ಆರ್ಥ ಮಾಡಿಕೊಂಡು, ಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರ ಜಾಗ್ರತೆಯಿಂದ ಮಾತ್ರ ಕೊರೋನವನ್ನು ನಿಯಂತ್ರಿಸಲು ಸಾಧ್ಯವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News