ಬೆಂಗಳೂರು: ಕಾರಿನ ಢಿಕ್ಕಿಯೊಳಗೆ ಅವಿತು ಕಳ್ಳತನಕ್ಕೆ ಯತ್ನ: ಓರ್ವನ ಬಂಧನ
ಬೆಂಗಳೂರು, ಜು.3: ಕಾರಿನ ಢಿಕ್ಕಿಯೊಳಗೆ ಅವಿತು ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ಇಲ್ಲಿನ ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊಸದಿಲ್ಲಿಯಿಂದ ನಗರಕ್ಕೆ ಬಂದಿದ್ದ ಕರ್ನಲ್ ರೊಬ್ಬರನ್ನು ಒಲಾ ಕ್ಯಾಬ್ ಮೂಲಕ ನಗರದ ಕಡೆ ಬರುವಾಗ ಟೋಲ್ ರಸ್ತೆಯಲ್ಲಿ ಹೋಗದೆ ಬಾಗಲೂರು ಬಳಿ ಕರೆದುಕೊಂಡು ಹೋಗಿದ್ದ ಚಾಲಕ, ನಂತರ ಕಾರಿನ ಢಿಕ್ಕಿಯಲ್ಲಿ ಶಬ್ದ ಬರುತ್ತಿದೆ ಎಂದು ನಿರ್ಜನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿ ದಾಳಿಗೆ ಮುಂದಾಗಿದ್ದಾನೆ ಎನ್ನಲಾಗಿದೆ.
ತದನಂತರ, ಢಿಕ್ಕಿಯಲ್ಲಿದ್ದ ಮತ್ತೊಬ್ಬನ ಜೊತೆ ಸೇರಿ ಚಾಕು ತೋರಿಸಿ ಹಣಕ್ಕೆ ಬೆದರಿಕೆ ಹಾಕಿದ್ದು, ಈ ವೇಳೆ ದರೋಡೆಕೋರರನ್ನು ತಳ್ಳಿ ಕರ್ನಲ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಬಂದ ಹೊಯ್ಸಳ ಪೊಲೀಸರಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ತಪ್ಪಿಸಿಕೊಂಡ ಮತ್ತೊಬ್ಬನಿಗಾಗಿ ಶೋಧ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.