ಬೆಂಗಳೂರು: ಗಾರೆ ಕಾರ್ಮಿಕನ ಹತ್ಯೆ
Update: 2021-07-03 21:05 IST
ಬೆಂಗಳೂರು, ಜು.3: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಗಾರೆ ಕಾರ್ಮಿಕನೋರ್ವನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣಮೂರ್ತಿ ಎಂಬಾತ ಮೃತ ಗಾರೆ ಕಾರ್ಮಿಕ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜಿನ ಬಳಿ ವಾಸಿಸುತ್ತಿದ್ದ ಗಾರೆ ಕೆಲಸಗಾರ ಕೃಷ್ಣಮೂರ್ತಿ, ಮನೆಯ ಹತ್ತಿರದಲ್ಲಿ ಕೇರಂ ಆಡಲು ಶುಕ್ರವಾರ ರಾತ್ರಿ ವೇಳೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೃಷ್ಣಮೂರ್ತಿಯು ಮೊದಲ ಪತ್ನಿಯನ್ನು ತೊರೆದು ಎರಡನೆ ಮದುವೆಯಾಗಿದ್ದು, ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಎರಡನೆ ಪತ್ನಿ ಜೊತೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಡಿಜೆಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.