ಬರಿಗಾಲಿನಲ್ಲಿ ಓಡುತ್ತಿದ್ದ ಶೈಲಿ ಸಿಂಗ್ ಇಂದು ಉದ್ದ ಜಿಗಿತದಲ್ಲಿ 18 ವರ್ಷದ ಕೆಳಗಿನ ವಿಭಾಗದಲ್ಲಿ ವಿಶ್ವದ ನಂ.1

Update: 2021-07-04 10:53 GMT
ಶೈಲಿ ಸಿಂಗ್ (Photo: Twitter/@anjubobbygeorg1)

ಹೊಸದಿಲ್ಲಿ,ಜು.4: ಪಟಿಯಾಳಾದಲ್ಲಿ ನಡೆಯುತ್ತಿರುವ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಶನಿವಾರ ಝಾನ್ಸಿಯ ಶೈಲಿ ಸಿಂಗ್(17) ಮೊದಲ ಪ್ರಯತ್ನದಲ್ಲಿಯೇ 6.15 ಮೀ.ದೂರ ಜಿಗಿಯುವ ಮೂಲಕ ಉದ್ದಜಿಗಿತದಲ್ಲಿ 21 ವರ್ಷಗಳಷ್ಟು ಕಾಲ ಅಬಾಧಿತವಾಗುಳಿದಿದ್ದ ದಾಖಲೆಯನ್ನು ಮುರಿದಿದ್ದಾರೆ.

ಎರಡನೇ ಪ್ರಯತ್ನದಲ್ಲಿ 6.38 ಮೀ.ದೂರ ಜಿಗಿಯುವ ಮೂಲಕ ಯುವ-ರಾಷ್ಟ್ರೀಯ ದಾಖಲೆ(6.10 ಮೀ.)ಯನ್ನು ಮಾತ್ರವಲ್ಲ,20 ವರ್ಷದೊಳಗಿನ ವಿಭಾಗದ ರಾಷ್ಟ್ರೀಯ ದಾಖಲೆ (6.30 ಮೀ.)ಯನ್ನೂ ಮುರಿದಿದ್ದಾರೆ. ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ 6.48 ಮೀ.ದೂರ ಜಿಗಿಯುವ ಮೂಲಕ ತನ್ನದೇ ದಾಖಲೆಯನ್ನು ಮುರಿದಿದ್ದಾರೆ. 

ಶೈಲಿ ಸಾಧನೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಮಾಜಿ ವಿಶ್ವ ಉದ್ದಜಿಗಿತ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಪದಕ ಗಳಿಸಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಂಜು ಬಾಬಿ ಜಾರ್ಜ್ ‘ಈ ಹಂತವನ್ನು ತಲುಪಲು ನಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಪರಿಗಣಿಸಿದರೆ ಇದು ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಘಳಿಗೆಯಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

ಶೈಲಿ ಸಾಧನೆ ಅತ್ಯಂತ ಹೆಮ್ಮೆ ಅಥವಾ ತೃಪ್ತಿಯನ್ನುಂಟು ಮಾಡಿರುವುದು 2018ರಿಂದಲೂ ಅವರ ಕೋಚ್ ಆಗಿರುವ ರಾಬರ್ಟ್ ಬಾಬಿ ಜಾರ್ಜ್ಗೆ. ರಾಬರ್ಟ್ ಅಂಜು ಪತಿಯಾಗಿದ್ದಾರೆ. ರಾಬರ್ಟ್ 2017ರಲ್ಲಿ ಕಿರಿಯರ ಕ್ರೀಡಾಕೂಟವೊಂದರಲ್ಲಿ ಮೊದಲ ಬಾರಿಗೆ ಶೈಲಿಯನ್ನು ಗುರುತಿಸಿದ್ದರು. ಕೇವಲ 13ವರ್ಷದವಳಾಗಿದ್ದ, 38 ಕೆಜಿ ತೂಕವಿದ್ದ ಶೈಲಿ ಆಗ 4.63 ಮೀ.ದೂರಕ್ಕೆ ಜಿಗಿದಿದ್ದರು. ಅದು ಅಂತಹ ಹೇಳಿಕೊಳ್ಳುವಂತಹ ಸಾಧನೆಯೇನಾಗಿರಲಿಲ್ಲ ನಿಜ, ಆದರೆ ರಾಬರ್ಟ್ ಆಕೆಯ ಕಣ್ಣುಗಳಲ್ಲಿ ವಿಶೇಷ ಮಿಂಚೊಂದನ್ನು ಗುರುತಿಸಿದ್ದರು ಮತ್ತು ಅದು ಈ ಬಾಲಕಿ ಛಲಗಾತಿ ಎನ್ನುವುದನ್ನು ತೋರಿಸಿತ್ತು.

ತಾನು ಪದಕ ಗೆಲ್ಲುವುದಿಲ್ಲ ಎನ್ನುವುದು ಶೈಲಿಗೆ ಗೊತ್ತಿತ್ತು, ಆದರೂ ಆಕೆ ಪೂರ್ಣ ಸ್ಫೂರ್ತಿಯೊಂದಿಗೆ ಪಾಲ್ಗೊಂಡಿದ್ದಳು. ಅದನ್ನು ನೀವು ಕೋಚ್ವೋರ್ವನ ತೀಕ್ಷ್ಣ ದೃಷ್ಟಿ ಎನ್ನಬಹುದು,ಆದರೆ ಆಕೆಯಲ್ಲಿ ವಿಶೇಷತೆಯಿದೆ ಎನ್ನುವುದು ನನಗೆ ಗೊತ್ತಿತ್ತು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಬರ್ಟ್ ಹೇಳಿದರು.

ರಾಬರ್ಟ್ ಕಣ್ಣಿಗೆ ಬಿದ್ದ ಒಂದು ವಾರದ ಬಳಿಕ ವಿಶಾಖಪಟ್ಟಣದಲ್ಲಿ ನಡೆದಿದ್ದ ಇನ್ನೊಂದು ಕಿರಿಯರ ಕ್ರೀಡಾಕೂಟದಲ್ಲಿ ಶೈಲಿ ಅಂಜು ಅವರ ಗಮನವನ್ನೂ ಸೆಳೆದಿದ್ದರು. ನಾವಿಬ್ಬರೂ ಪರಸ್ಪರರಿಗೆ ಗೊತ್ತಿಲ್ಲದೆ ಒಂದೇ ಕ್ರೀಡಾಳುವನ್ನು ಗುರುತಿಸಿದ್ದೆವು ಎಂದು ರಾಬರ್ಟ್ ಹೇಳಿದರು.

2018ರ ಆರಂಭದಲ್ಲಿ ರಾಬರ್ಟ್ ಅವರಿಂದ ತರಬೇತಿ ಪಡೆಯಲು ಶೈಲಿ ಬೆಂಗಳೂರಿಗೆ ಬಂದಿಳಿದಿದ್ದರು. ಅವರ ಅಥ್ಲೆಟಿಕ್ ಕೌಶಲ್ಯವನ್ನು ಹೆಚ್ಚಿಸುವುದು ಮಾತ್ರ ತನ್ನ ಕೆಲಸವಲ್ಲ ಎನ್ನುವುದು ರಾಬರ್ಟ್ಗೆ ಗೊತ್ತಿತ್ತು. ಕಠಿಣ ಸ್ಥಿತಿಯಿಂದ ಬಂದ ಶೈಲಿಯ ಬಳಿ ಯಾವುದಕ್ಕೂ ಖರ್ಚು ಮಾಡಲು ಹಣವಿರಲಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ತಂದೆಯಿಲ್ಲದ ಶೈಲಿಯ ಬೆಂಗಳೂರು ವಿಮಾನಯಾನದ ಟಿಕೆಟ್ಗಾಗಿ ಹೊಲಿಗೆ ವೃತ್ತಿಯಿಂದ ಮೂವರು ಮಕ್ಕಳ ತನ್ನ ಸಂಸಾರವನ್ನು ಪೋಷಿಸುತ್ತಿದ್ದ ತಾಯಿ ಹಣವನ್ನು ಸಾಲವಾಗಿ ಪಡೆದಿದ್ದರು ಎನ್ನುವುದೂ ರಾಬರ್ಟ್ಗೆ ಗೊತ್ತಿತ್ತು.

ವ್ಯವಸ್ಥೆ ಶೈಲಿಯನ್ನು ಬೆಂಬಲಿಸುತ್ತದೆಯೇ ಎನ್ನುವುದು ನಂತರದ ಮಾತು, ಅವಳೀಗ ನಮ್ಮ ಜವಾಬ್ದಾರಿಯಾಗಿದ್ದಾಳೆ ಎಂದು ರಾಬರ್ಟ್ ಹೇಳಿದರು.

ಕೆಲವೊಮ್ಮೆ ಒಂದು ಹೊತ್ತಿನ ಊಟವೂ ತನ್ನ ಪಾಲಿಗೆ ಐಷಾರಾಮಿಯಾಗಿತ್ತು ಎಂದು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿರುವ ಶೈಲಿ, ‘ಆದರೆ ನನ್ನ ಕ್ರೀಡಾಬದುಕನ್ನು ತಾಯಿ ಉತ್ತೇಜಿಸುತ್ತಿದ್ದಳು. ಸ್ಪೈಕ್ಗಳನ್ನು ಬಿಡಿ, ಸಾಮಾನ್ಯ ಓಟದ ಶೂಗಳನ್ನು ಖರೀದಿಸಲೂ ನಮಗೆ ಸಾಧ್ಯವಿರಲಿಲ್ಲ. ನಾನು ಬರಿಗಾಲಿನಲ್ಲಿಯೇ ಓಡುತ್ತಿದ್ದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮನೆಗೆ ಮರಳುವಾಗ ಪಾದಗಳಲ್ಲಿ ಗುಳ್ಳೆಗಳೆದ್ದಿರುತ್ತಿದ್ದವು. ಅದನ್ನು ನೋಡಿ ನನ್ನ ತಾಯಿ ಕಣ್ಣೀರಿಡುತ್ತಿದ್ದರು’ ಎಂದು ಹೇಳಿದ್ದಾರೆ.

‘ಈ ಮಗುವಿನಲ್ಲಿ ಏನೋ ವಿಶೇಷವಾದುದು ಇದೆ ಎಂದು ನಾನು ಅಂಜುಗೆ ಹೇಳುತ್ತಿದ್ದೆ. ಶೈಲಿಯಿಂದ ಬಹಳಷ್ಟನ್ನು ದೇಶವು ನಿರೀಕ್ಷಿಸಬಹುದು. 2024, 2028 ಮತ್ತು 2032ರ ಒಲಿಂಪಿಕ್ಸ್ ಕೂಟಗಳಲ್ಲಿ ಆಕೆ ಪದಕಕ್ಕೆ ಪ್ರಬಲ ಸ್ಪರ್ಧಿಯಾಗಲಿದ್ದಾಳೆ’ ಎಂದು ರಾಬರ್ಟ್ ಹೇಳಿದರು.

ಆಗಸ್ಟ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಶೈಲಿ ಅರ್ಹತೆ ಪಡೆದಿದ್ದಾರೆ. ಜಾರ್ಜ್ ದಂಪತಿ ಮತ್ತು ಶೈಲಿಯ ಗಮನವೆಲ್ಲ ಈಗ ಪದಕ ಗೆಲ್ಲುವುದರ ಮೇಲೆ ಕೇಂದ್ರೀಕೃತವಾಗಿದೆ.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News