ಥಾಯ್ಲಂಡ್: ಫ್ಯಾಕ್ಟರಿಯಲ್ಲಿ ಸ್ಫೋಟ; ಒಬ್ಬ ಸಾವು, 29 ಮಂದಿಗೆ ಗಾಯ

Update: 2021-07-05 16:45 GMT
PTI

 ಬ್ಯಾಂಕಾಕ್, ಜು.5: ಥಾಯ್ಲಂಡಿನ ರಾಜಧಾನಿ ಬ್ಯಾಂಕಾಕ್ ನ ಹೊರವಲಯದಲ್ಲಿರುವ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಕನಿಷ್ಟ ಒಬ್ಬ ವ್ಯಕ್ತಿ ಮೃತಪಟ್ಟಿದ್ದು 29 ಮಂದಿ ಗಾಯಗೊಂಡಿದ್ದಾರೆ. ಮತ್ತಷ್ಟು ಸ್ಪೋಟ ಸಂಭವಿಸುವ ಅಪಾಯದ ಮಧ್ಯೆಯೇ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿವೆ ಎಂದು ವರದಿಯಾಗಿದೆ. 

ಬ್ಯಾಂಕಾಕ್ ನ ಸುವರ್ಣಭೂಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಗ್ರಾಮದಲ್ಲಿರುವ ರಾಸಾಯನಿಕ ವಸ್ತು ಮತ್ತು ಪ್ಲಾಸ್ಟಿಕ್ ಹಲಗೆಗಳನ್ನು ಉತ್ಪಾದಿಸುವ ಫ್ಯಾಕ್ಟರಿಯಲ್ಲಿ ಸೋಮವಾರ ಬೆಳಿಗ್ಗೆ 3 ಗಂಟೆಗೆ ಸ್ಫೋಟ ಸಂಭವಿಸಿದ್ದು ಸ್ಪೋಟದ ಸದ್ದು ಹಲವು ಕಿ.ಮೀವರೆಗೆ ಕೇಳಿಸಿದೆ. ಫ್ಯಾಕ್ಟರಿಯ ಬಳಿಯಿರುವ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸ್ಫೋಟದ ಭೀಕರತೆಯ ದೃಶ್ಯ ಸೆರೆಯಾಗಿದೆ. 

ಈ ಮನೆ ಸೇರಿದಂತೆ ಸುಮಾರು 70 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಷಕಾರಿ ಗಾಳಿ ಹೊರಸೂಸುವ ಸಾಧ್ಯತೆಯಿರುವುದರಿಂದ ಫ್ಯಾಕ್ಟರಿಯ 5 ಕಿ.ಮೀ ವ್ಯಾಪ್ತಿಯಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಫ್ಯಾಕ್ಟರಿಯಲ್ಲಿ 20,000 ಲೀಟರ್ ನಷ್ಟು ಸುಲಭವಾಗಿ ಹೊತ್ತಿ ಉರಿಯಬಲ್ಲ ರಾಸಾಯನಿಕ ಇರುವುದರಿಂದ ಮತ್ತಷ್ಟು ಸ್ಫೋಟ ಸಂಭವಿಸುವ ಅಪಾಯವಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮೃತ ವ್ಯಕ್ತಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸ್ವಯಂಸೇವಕನೆಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News