×
Ad

ಆಸ್ಪತ್ರೆಯತ್ತ ಹೋಗದಿರಲು ಲಸಿಕೆ ಪಡೆಯಿರಿ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

Update: 2021-07-05 22:52 IST

ಬೆಂಗಳೂರು, ಜು.5: ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಹೋಗುವ ಪ್ರಮೇಯ ತಪ್ಪಿಸಲು ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಹಾಕಿಸಿಕೊಂಡರೆ, ಆಸ್ಪತ್ರೆಗೆ ಹೋಗುವ ಸಂದರ್ಭ ಕಡಿಮೆ ಆಗಲಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸೋಂಕಿನ ಭೀತಿ ಎದುರಿಸಬೇಕಾಯಿತು ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 45ವರ್ಷಕ್ಕಿಂತ ಮೇಲ್ಪಟ್ಟಿರುವ ಶೇ.50ರಷ್ಟು ಮಂದಿಗೆ ಮೊದಲ ಡೋಸ್ ಹಾಕಲಾಗಿದೆ. ಇದರ ನಡುವೆಯೇ ಲಸಿಕೆಗೆ ಬೇಡಿಕೆ ಹೆಚ್ಚಿದೆ ಎಂದ ಅವರು, ಈ ತಿಂಗಳ ಅಂತ್ಯದೊಳಗೆ ಶೇಕಡ 70ರಷ್ಟು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ನುಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ ನಿತ್ಯ 20 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ಕಡಿಮೆ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಹಾಗಾಗಿ  ನಗರದಲ್ಲಿ ಎಲ್ಲ್ಲ ವಹಿವಾಟುಗಳಿಗೆ ವಿನಾಯ್ತಿ ಸಿಕ್ಕಿದೆ.
ಆದರೂ ಎಲ್ಲ್ಲ ನಾಗರಿಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ನಾವು ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯ. ಆಗ ಮಾತ್ರ ನಗರದ ಎಲ್ಲ ಜನರೂ ಸುರಕ್ಷಿತವಾಗಿರಬಹುದು ಎಂದರು.

ನಗರದ ಸಾರ್ವಜನಿಕ ಹಾಗೂ ವಹಿವಾಟು ನಡೆಯುವ ಸ್ಥಳ, ಮದುವೆ ಸಮಾರಂಭ, ಮಾರುಕಟ್ಟೆ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಮಾರ್ಷಲ್‍ಗಳು, ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಸೂಚನೆಯೂ ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News