5ಜಿ ವಿರುದ್ಧದ ಮನವಿಗೆ 20 ಲಕ್ಷ ರೂ. ದಂಡ ಪ್ರಶ್ನಿಸಿ ಜೂಹಿ ಚಾವ್ಲಾ ಸಲ್ಲಿಸಿದ ಅರ್ಜಿಗೆ ದಿಲ್ಲಿ ಹೈಕೋರ್ಟ್ ಟೀಕೆ

Update: 2021-07-07 18:09 GMT
Photo: Instagram/Juhi Chawla)

ಹೊಸದಿಲ್ಲಿ, ಜು. 7: ಭಾರತದಲ್ಲಿ 5ಜಿ ತಂತ್ರಜ್ಞಾನ ಪರಿಚಯಿಸುವುದರ ವಿರುದ್ಧ ದಾಖಲಿಸಲಾದ ದೂರಿಗೆ ಸಂಬಂಧಿಸಿ ತಮ್ಮ ಮೇಲೆ ಹೇರಲಾದ 20 ಲಕ್ಷ ರೂಪಾಯಿ ದಂಡ ಪ್ರಶ್ನಿಸಿ ನಟಿ ಜೂಹಿ ಚಾವ್ಲಾ ಹಾಗೂ ಇತರ ದೂರುದಾರರು ಸಲ್ಲಿಸಿದ ಮನವಿಯಿಂದ ಆಘಾತವಾಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಹೇಳಿದೆ. ‌

5ಜಿ ತಂತ್ರಜ್ಞಾನದ ವಿರುದ್ಧದ ಮನವಿಯನ್ನು ಕಳೆದ ತಿಂಗಳು ತಿರಸ್ಕರಿಸಿದ್ದ ನ್ಯಾಯಾಲಯ, ಮನವಿ ‘‘ದೋಷಪೂರಿತ ಹಾಗೂ ಅಂಗೀಕಾರಾರ್ಹವಲ್ಲ’’ ಎಂದು ಹೇಳಿತ್ತು. ಈ ಮನವಿಯನ್ನು ಪ್ರಚಾರಕ್ಕಾಗಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿತ್ತು. ಅಲ್ಲದೆ, ಜೂಹಿ ಚಾವ್ಲಾ ಹಾಗೂ ಇತರ ಇಬ್ಬರು ದೂರುದಾರರ ಮೇಲೆ ದಂಡ ವಿಧಿಸಿತ್ತು. ದಂಡ ವಿಧಿಸಿರುವುದನ್ನು ಪ್ರಶ್ನಿಸಿ ಜೂಹಿ ಚಾವ್ಲಾ ಹಾಗೂ ಇತರ ದೂರುದಾರರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆದರೆ, ಬುಧವಾರ ನ್ಯಾಯಮೂರ್ತಿ ಜೆ.ಆರ್. ಮಿಧಾ ಈ ಮನವಿಯನ್ನು ಉದಾರವಾಗಿ ಪರಿಗಣಿಸಿದ್ದು, ಇದು ತಾನು ಇದುವರೆಗೆ ನೋಡಿದ ಮನವಿಗಳಲ್ಲಿ ಅತ್ಯಂತ ಕ್ಷುಲ್ಲಕ ಮನವಿ ಎಂದು ಹೇಳಿದರು.

ಈ ನ್ಯಾಯಾಲಯ ಮನವಿಯನ್ನು ಉದಾರವಾಗಿ ಪರಿಗಣಿಸಿದ್ದು, ಜೂಹಿ ಚಾವ್ಲಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸು ನೀಡಿರಲಿಲ್ಲ. ಇಲ್ಲದೇ ಇದ್ದರೆ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುತ್ತಿತ್ತು. ದೂರುದಾರರ ವರ್ತನೆಯಿಂದ ತನಗೆ ಆಘಾತ ಉಂಟಾಗಿದೆ ಎಂದು ಮಿಧಾ ಹೇಳಿದ್ದಾರೆ.

ಪ್ರಕರಣದಲ್ಲಿ ನ್ಯಾಯಾಲಯದ ಶುಲ್ಕವನ್ನು ಮರು ಪಾವತಿಸುವಂತೆ ಕೋರಿ ಪ್ರತ್ಯೇಕ ಮನವಿ ಸಲ್ಲಿಸಿದ ದೂರುದಾರರನ್ನು ನ್ಯಾಯಮೂರ್ತಿ ಮಿಧಾ ಅವರು ತರಾಟೆಗೆ ತೆಗೆದುಕೊಂಡರು. ‘‘ದಂಡ ವಿಧಿಸಲು ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂದು ನೀವು ಹೇಳುತ್ತೀರಾ?’’ ಎಂದು ಅವರು ಜೂಹಿ ಚಾವ್ಲಾ ಪರ ನ್ಯಾಯವಾದಿ ಮೀಟ್ ಮಲ್ಹೋತ್ರಾ ಅವರನ್ನು ಪ್ರಶ್ನಿಸಿದರು.

ಮಲ್ಹೋತ್ರ ಅವರು ಎರಡೂ ಮನವಿಗಳನ್ನು ಹಿಂಪಡೆಯಲು ಒಪ್ಪಿಕೊಂಡರು. ಅನಂತರ ನ್ಯಾಯಾಲಯ 20 ಲಕ್ಷ ರೂಪಾಯಿ ದಂಡ ಪಾವತಿಸಲು ದೂರುದಾರರಿಗೆ ಒಂದು ವಾರ ಕಾಲಾವಕಾಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News