ಅಂತರ್ಧರ್ಮೀಯ ಸ್ನೇಹಿತರ ಮೇಲೆರಗುವ ಮಂಗಳೂರಿನ ಹಿಂದುತ್ವ ಗುಂಪುಗಳಿಗೆ ಇದೆ ಮಾಹಿತಿದಾರರ ದೊಡ್ಡ ಜಾಲ

Update: 2021-07-08 14:09 GMT
ಸಾಂದರ್ಭಿಕ ಚಿತ್ರ

2021,ಫೆಬ್ರುವರಿಯಲ್ಲಿ ಮಂಗಳೂರಿನ ಖಾಸಗಿ ಕಾಲೇಜೊಂದರ ಏಳು ವಿದ್ಯಾರ್ಥಿಗಳ ಗುಂಪು ದ.ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿರುವ ಎರ್ಮಾಯಿ ಫಾಲ್ಸ್ ವೀಕ್ಷಿಸಲು ತೆರಳಿದ್ದರು. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮಂಗಳೂರಿಗೆ ವಾಪಸಾಗುತ್ತಿದ್ದಾಗ ಐವರ ಗುಂಪೊಂದು ಅವರನ್ನು ತಡೆದು ನಿಲ್ಲಿಸಿ ಪ್ರಶ್ನಿಸತೊಡಗಿತ್ತು. ಕಾರಣ? ವಿದ್ಯಾರ್ಥಿಗಳ ಗುಂಪಿನಲ್ಲಿ ಓರ್ವ ಮುಸ್ಲಿಂ ಯುವಕನಿದ್ದು, ಮೂವರು ಹಿಂದು ಯುವಕರು ಮತ್ತು ಮೂವರು ಹಿಂದು ಯುವತಿಯರು ಇದ್ದರು.

ಪೊಲೀಸರ ಹೇಳಿಕೆಯಂತೆ ವಿದ್ಯಾರ್ಥಿಗಳನ್ನು ತಡೆದಿದ್ದ ಗುಂಪು ಓರ್ವ ಬಿಜೆಪಿ ಸದಸ್ಯ ಮತ್ತು ಬಜರಂಗ ದಳದ ಕಾರ್ಯಕರ್ತರನ್ನು ಒಳಗೊಂಡಿತ್ತು. ಬಿಜೆಪಿ ಸದಸ್ಯ ವಿನಯಚಂದ್ರ ಮತ್ತು ಬಜರಂಗ ದಳದ ಅಜಿತ್ ಮತ್ತು ಭರತ್ ಎನ್ನುವವರು ಏಕೈಕ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಮುಸ್ಲಿಂ ಯುವಕನೊಂದಿಗೆ ಪ್ರವಾಸಕ್ಕೆ ಬಂದಿದ್ದಕ್ಕಾಗಿ ಗುಂಪನ್ನು,‌ ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಹೀನಾಮಾನವಾಗಿ ನಿಂದಿಸಿದ್ದರು.

ಮೂವರು ಹಿಂದು ವಿದ್ಯಾರ್ಥಿನಿಯರ ಎದುರಿನಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಕುಳ್ಳಿರಿಸಿ ಫೋಟೊ ತೆಗೆದಿದ್ದ ಆರೋಪಿಗಳು ಇದೊಂದು ‘ಲವ್ ಜಿಹಾದ್’ ಪ್ರಕರಣವೆಂದು ಬಣ್ಣಿಸಿ ವಾಟ್ಸಾಪ್ ನಲ್ಲಿ ಸಂದೇಶಗಳನ್ನು ರವಾನಿಸಿದ್ದರು.

ಈ ತಥಾಕಥಿತ ಧರ್ಮರಕ್ಷಕರು ತಮ್ಮ ಗುರಿಯಾಗಿಸಿಕೊಳ್ಳಲು ಇಂತಹ ಗುಂಪುಗಳನ್ನು ಹೇಗೆ ಪತ್ತೆ ಹಚ್ಚುತ್ತಾರೆ? ಈ ಪ್ರಕರಣದಲ್ಲಿ ಜಿಲ್ಲೆಯ ದಿಡುಪೆಯ ಸ್ಥಳೀಯ ಕಾರ್ಯಕರ್ತರು ಈ ಗುಂಪು ಫಾಲ್ಸ್ ಗೆ ತೆರಳುತ್ತಿದ್ದಾಗ ಅವರನ್ನು ಕಂಡಿತ್ತು. ವಿದ್ಯಾರ್ಥಿಗಳನ್ನು ಗುರುತಿಸಲು ಅವರು ಫಾಲ್ಸ್ ನ ಟಿಕೆಟ್ ಕೌಂಟರ್ ನಲ್ಲಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಆ ವ್ಯಕ್ತಿ ಈ ಬೆಳವಣಿಗೆಯ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದ.
 
ಇತರ ಪ್ರಕರಣಗಳಲ್ಲಿ ಅಂಗಡಿಕಾರರು, ಬಸ್ ಕಂಡಕ್ಟರ್ ಗಳು ಮತ್ತು ಆಟೋ ಚಾಲಕರು ಅಂತರ್ಧರ್ಮೀಯ ಗುಂಪುಗಳು ಅಥವಾ ಜೋಡಿಗಳ ಚಲನವಲನಗಳ ಬಗ್ಗೆ ಬಜರಂಗ ದಳ ಅಥವಾ ವಿಹಿಂಪನಂತಹ ಗುಂಪುಗಳಿಗೆ ಮಾಹಿತಿ ನೀಡುವುದನ್ನು ನಾವು ನೋಡಿದ್ದೇವೆ. ಇಂತಹ ಜೋಡಿಗಳು ಅಥವಾ ಗುಂಪುಗಳ ಅಲೆದಾಟವು ಜನರಲ್ಲಿ ಸಂಶಯ ಮೂಡಿಸಲು ಸಾಕು ಎನ್ನುತ್ತಾರೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೋರ್ವರು.
 
ಎರ್ಮಾಯಿ ಫಾಲ್ಸ್ ನ ಘಟನೆಯು ಮಂಗಳೂರು ಮತ್ತು ದ.ಕನ್ನಡ ಜಿಲ್ಲೆಯಲ್ಲಿ ಹಿಂದುತ್ವ ಗುಂಪುಗಳಿಂದ ಹಿಂಸೆಗೆ ಒಂದು ನಿದರ್ಶನವಾಗಿದೆ. ಪಬ್, ಹೋಮ್ ಸ್ಟೇ ಅಥವಾ ಮಾಲ್ ಆಗಿರಲಿ, ಈ ಗುಂಪುಗಳ ಗುರಿ ಹೆಚ್ಚಾಗಿ ಪುರುಷರು ಮತ್ತು ಮಹಿಳೆಯರು ಮತ್ತು ಹಿಂದುಗಳು ಮತ್ತು ಮುಸ್ಲಿಮರನ್ನು ಒಳಗೊಂಡಿರುವ ಮಿಶ್ರಗುಂಪುಗಳು ಆಗಿರುತ್ತವೆ. ಹೆಚ್ಚಾಗಿ ಹಿಂದುತ್ವ ಗುಂಪುಗಳೇ ಇಂತಹ ಅನೈತಿಕ ಪೊಲೀಸ್ ಗಿರಿಯಲ್ಲಿ ತೊಡಗಿರುತ್ತವೆಯಾದರೂ ಮುಸ್ಲಿಂ ಸಂಘಟನೆಗಳು ಜೋಡಿಗಳ ಮೇಲೆ ದಾಳಿ ನಡೆಸಿದ ಪ್ರಕರಣಗಳೂ ಇವೆ.

ಗಮನಾರ್ಹವೆಂದರೆ ಕರಾವಳಿ ನಗರದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುವಲ್ಲಿ ಭಾಗಿಯಾಗಿರುವುದು ಧಾರ್ಮಿಕ ಗುಂಪುಗಳು ಮಾತ್ರವಲ್ಲ. ಹೆತ್ತವರು ಮತ್ತು ಕಾಲೇಜು ಶಿಕ್ಷಕರೂ ಈ ಅನೈತಿಕ ಪೊಲೀಸ್ ಗಿರಿಯಲ್ಲಿ ಸಹಭಾಗಿತ್ವ ಹೊಂದಿದ್ದಾರೆ. ಯುವ ಜನರನ್ನು ಅಂಕೆಯಲ್ಲಿಡಲು ಇದು ಒಳ್ಳೆಯ ಕ್ರಮವೆಂದು ಭಾವಿಸಿ ಇಂತಹ ಅನೈತಿಕ ಪೊಲೀಸ್ ಗಿರಿಯನ್ನು ಮೌನವಾಗಿ ಬೆಂಬಲಿಸುವುದು ಎಂತಹ ತಪ್ಪು ಎನ್ನುವದು ಜನರಿಗೆ ಅರ್ಥವಾಗಿಲ್ಲ ಎನ್ನುತ್ತಾರೆ ಮಂಗಳೂರಿನ ಮಾನವಹಕ್ಕುಗಳ ಕಾರ್ಯಕರ್ತೆ ವಿದ್ಯಾ ದಿನಕರ್.

ಫೆಬ್ರವರಿಯಲ್ಲಿ ನಡೆದ ಎರ್ಮಾಯಿ ಫಾಲ್ಸ್ ಘಟನೆಯ ಬಳಿಕ ಮುಂದಿನ ಮಾರ್ಚ್ ನಲ್ಲಿ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿಯ ಇನ್ನೂ ನಾಲ್ಕು ಘಟನೆಗಳು ನಡೆದಿದ್ದವು. ಈ ಪ್ರತಿಯೊಂದೂ ಘಟನೆ ಹಿಂದಿನ ಘಟನೆಗಿಂತ ಕೆಟ್ಟದ್ದಾಗಿತ್ತು. ಇಂತಹ ಪ್ರಕರಣವೊಂದರಲ್ಲಿ ಮಾ.17ರಂದು ಬೆಂಗಳೂರಿಗೆ ತೆರಳಲೆಂದು ಬಂಟ್ವಾಳದಲ್ಲಿ ಬಸ್ ಹತ್ತಿದ್ದ ವಿಭಿನ್ನ ಧರ್ಮಗಳಿಗೆ ಸೇರಿದ್ದ ಮೂವರನ್ನು ಗುಂಪೊಂದು ತಡೆದು ನಿಲ್ಲಿಸಿ ಕಿರುಕುಳ ನೀಡಿತ್ತು, ಈ ಗುಂಪಿನಲ್ಲಿಯ ಕೆಲವರು ಬಜರಂಗ ದಳದ ಕಾರ್ಯಕರ್ತರಾಗಿದ್ದರು.
 
ಮಾ.29ರಂದು ಖಾಸಗಿ ಬಸ್ಸಿನಲ್ಲಿ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿವಿಧ ಧರ್ಮಗಳಿಗೆ ಸೇರಿದ ಓರ್ವ ಪುರುಷ ಮತ್ತು ಮಹಿಳೆಯರಿಗೆ ಬಲಪಂಥೀಯ ಕಾರ್ಯಕರ್ತರ ಗುಂಪೊಂದು ಕಿರುಕುಳ ನೀಡುತ್ತಿದ್ದುದನ್ನು ಮೂಡಬಿದ್ರೆಯ ಪೊಲೀಸರು ತಡೆದಿದ್ದರು. ತಮಗೆ ಬಲಪಂಥೀಯ ಗುಂಪಿನ ಯೋಜನೆಯ ಬಗ್ಗೆ ಮಾಹಿತಿಯಿತ್ತು ಮತ್ತು ಜೋಡಿಯನ್ನು ವಶಕ್ಕೆ ತೆಗೆದುಕೊಂಡು ಅವರೊಂದಿಗೆ ಮತ್ತು ಅವರ ಹೆತ್ತವರೊಂದಿಗೆ ಮಾತನಾಡಿದ ಬಳಿಕ ಬಿಟ್ಟಿದ್ದೆವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
 
ಮಾ.30ರಂದು ಉಡುಪಿಯಿಂದ ಸುರತ್ಕಲ್ ಗೆ ತೆರಳುತ್ತಿದ್ದ ಬಸ್ಸಿನಲ್ಲಿ ಯುವತಿಯೋರ್ವಳು ಯುವಕನ ಭುಜಕ್ಕೆ ತಲೆಯನ್ನು ಆನಿಸಿದ್ದನ್ನು ಸಹಪ್ರಯಾಣಿಕರು ಗಮನಿಸಿದ್ದರು. ಈ ಜೋಡಿ ವಿದ್ಯಾದಾಯಿನಿ ಸರ್ಕಲ್ ನಲ್ಲಿ ಇಳಿದಿತ್ತು. ಮಾಹಿತಿಯ ಮೇರೆಗೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ಸಂದೇಶವೊಂದು ತಿಳಿಸಿದೆ. ಈ ಪ್ರಕರಣದಲ್ಲಿ ಮಾಹಿತಿದಾರರು ಯಾರು ಎನ್ನುವುದು ಪೊಲೀಸರಿಗೆ ಗೊತ್ತಿಲ್ಲ, ಆದರೆ ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರೇ ಯಾರೋ ಇರಬೇಕು.
  
ಬಜರಂಗ ದಳ ಕಾರ್ಯಕರ್ತರು ಸುರತ್ಕಲ್ ನಲ್ಲಿ ಸಜ್ಜಾಗಿದ್ದು, ಜೋಡಿಯನ್ನು ಕೆಳಗಿಳಿಸಿ ಪೊಲೀಸ್ ಠಾಣೆಗೆ ಕರೆತಂದು ಇದು ‘ಲವ್ ಜಿಹಾದ್’ ಪ್ರಕರಣ ಎಂದು ಹೇಳಿದ್ದರು. ಅವರು ಕೇವಲ ನಿಕಟ ಮಿತ್ರರಾಗಿದ್ದರು. ನಾವು ಅವರ ಹೆತ್ತವರನ್ನು ಮಾತನಾಡಿಸಿದಾಗ ಎರಡೂ ಕುಟುಂಬಗಳು ವರ್ಷಗಳಿಂದಲೂ ಪರಿಚಿತರು ಮತ್ತು ಈ ಜೋಡಿ ಪರಸ್ಪರ ಒಡನಾಟದಲ್ಲಿಯೇ ಬೆಳೆದಿದ್ದರು ಎನ್ನುವುದು ನಮಗೆ ಗೊತ್ತಾಗಿತ್ತು ಎಂದು ಸುರತ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಪ್ಪ ಕೆ.ತಿಳಿಸಿದರು.

ಈ ಎಲ್ಲ ಮೂರೂ ಪ್ರಕರಣಗಳಲ್ಲಿ ಪೊಲೀಸರು ಜೋಡಿಗಳು ಮತ್ತು ಸ್ನೇಹಿತರ ಗುಂಪುಗಳಿಗೆ ಕಿರುಕುಳ ನೀಡಿದ್ದ ಹಿಂದುತ್ವ ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಪ್ರಕರಣಗಳಲ್ಲಿ ವ್ಯಕ್ತಿಗಳನ್ನು ನಿಂದಿಸಲಾಗಿರಲಿಲ್ಲ ಅಥವಾ ಅವರ ಮೇಲೆ ಹಲ್ಲೆ ನಡೆದಿರಲಿಲ್ಲ, ಹೀಗಾಗಿ ಈ ಪ್ರಕರಣಗಳಲ್ಲಿ ದೂರುಗಳು ದಾಖಲಾಗಿರಲಿಲ್ಲ ಎಂದು ಶಶಿಕುಮಾರ್ ಹೇಳಿದರು.
 
ಆದರೆ ಎ.1ರಂದು ಮಂಗಳೂರಿನಲ್ಲಿ ನಡೆದಿದ್ದ ಘಟನೆ ಪೊಲೀಸರ ಈ ನಿಲುವನ್ನು ಬದಲಿಸಿತ್ತು. ಹಿಂದು ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಅಸ್ವಿದ್ ಅನ್ವರ್ ಮುಹಮ್ಮದ್ (23) ಎಂಬಾತನನ್ನು ಪಂಪ್ವೆಲ್ ವೃತ್ತದ ಬಳಿ ತಡೆದಿದ್ದ ಬಜರಂಗ ದಳ ಮತ್ತು ವಿಹಿಂಪ ಕಾರ್ಯಕರ್ತರು ಆತನನ್ನು ಚೂರಿಯಿಂದ ಇರಿದಿದ್ದರು.

ಪೊಲೀಸರು ಹೇಳಿರುವಂತೆ ಸ್ನೇಹಿತರು ಮತ್ತು ಮಾಜಿ ಕ್ಲಾಸ್ ಮೇಟ್ ಗಳಾಗಿದ್ದ ಯುವಕ ಮತ್ತು ಯುವತಿ ಮಂಗಳೂರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ಹತ್ತಿದ್ದರು. ಆದರೆ ಅವರನ್ನು ತಡೆದು ಒಟ್ಟಾಗಿ ಪ್ರಯಾಣಿಸುತ್ತಿರುವುದನ್ನು ಪ್ರಶ್ನಿಸಿದಾಗ ನಡೆದ ಗಲಾಟೆಯಲ್ಲಿ ಅಸ್ವಿದ್ ಚೂರಿಯಿಂದ ಇರಿಯಲ್ಪಟ್ಟು ಮಂಗಳೂರಿನ ಆಸ್ಪತ್ರೆಯೊಂದರ ತೀವ್ರ ನಿಗಾ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕೊಲೆಯತ್ನದ ಆರೋಪದಲ್ಲಿ ಬಾಲಚಂದ್ರ,ಧನುಷ್ ಭಂಡಾರಿ,ಅನಿಲ್ ಕುಮಾರ್ ಮತ್ತು ಜಯ ಪ್ರಶಾಂತ್ ಎನ್ನುವವರನ್ನು ಬಂಧಿಸಿದ್ದರು. ದಾಳಿಯಲ್ಲಿ ಭಾಗಿಯಾಗಿದ್ದ ಇನ್ನೂ ನಾಲ್ವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

ಅಸ್ವಿದ್ ಬೆಂಗಳೂರಿಗೆ ಪ್ರಯಾಣಿಸಲು ಆನ್ಲೈನ್ ನಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಿದ್ದ ದಿನವೇ ಸಂಜೆ 4:30ರ ಸುಮಾರಿಗೆ ಬಜರಂಗ ದಳ ಮತ್ತು ವಿಹಿಂಪ ಸದಸ್ಯರಿಗೆ ಮಾಹಿತಿ ದೊರಕಿತ್ತು, ಆದರೆ ಮಾಹಿತಿ ಸೋರಿಕೆ ಮಾಡಿದ್ದವರು ಯಾರು ಎನ್ನುವುದು ಪೊಲೀಸರಿಗೆ ತಿಳಿದಿಲ್ಲ.
 
ಜೋಡಿಯು ಮಂಗಳೂರಿನಿಂದ ತೆರಳುವುದನ್ನು ತಡೆಯಲು ಬಜರಂಗ ದಳ ಮತ್ತು ವಿಹಿಂಪ ಸದಸ್ಯರು ಪ್ರಯತ್ನಿಸಿದ್ದರು ಎನ್ನುವುದನ್ನು ದೃಢಪಡಿಸಿದ ವಿಹಿಂಪ ವಿಭಾಗೀಯ ಕಾರ್ಯದರ್ಶಿ ಶರಣ ಪಂಪ್ವೆಲ್, ನಮ್ಮವರು ಅವರನ್ನು ತಡೆಯಲು ಪ್ರಯತ್ನಿಸಿದ್ದು ನಿಜ,ಆದರೆ ಅಸ್ವಿದ್ ಗೆ ಚೂರಿಯಿಂದ ಇರಿದಿದ್ದು ಯಾರು ಎನ್ನುವುದು ಗೊತ್ತಿಲ್ಲ. ಇಂತಹ ಘಟನೆಗಳು ಏಕೆ ನಡೆಯುತ್ತಿವೆ ಎಂಬ ಬಗ್ಗೆ ರಾಜ್ಯ ಸರಕಾರವು ಚಿಂತನೆ ನಡೆಸಬೇಕು ಮತ್ತು ‘ಲವ್ ಜಿಹಾದ್’ ತಡೆಯಲು ಕಾನೂನನ್ನು ತರಬೇಕು ಎಂದರು.
 
ಮಾಹಿತಿದಾರರು ಹೆಚ್ಚಾಗಿ ವಿಹಿಂಪ ಅಥವಾ ಬಜರಂಗ ದಳದಂತಹ ಗುಂಪುಗಳೊಂದಿಗೆ ಗುರುತಿಸಿಕೊಂಡಿರುವುದಿಲ್ಲ, ಆದರೆ ಈ ಗುಂಪುಗಳ ಸದಸ್ಯರೊಡನೆ ಸಂಪರ್ಕದಲ್ಲಿರುತ್ತಾರೆ ಎನ್ನುತ್ತಾರೆ ಪೊಲೀಸರು. ಅಂತರ್ಧರ್ಮೀಯ ಜೋಡಿಯೊಂದು ಜೊತೆಯಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಶಂಕೆಯುಂಟಾದಾಗ ಸ್ಥಳೀಯ ಬಜರಂಗ ದಳ ನಾಯಕನಿಗೆ ಮಾಹಿತಿ ದೊರೆಯುತ್ತದೆ. ಬಜರಂಗ ದಳವು ಅಲ್ಲಲ್ಲಿ ತನ್ನ ಘಟಕಗಳನ್ನು ಹೊಂದಿದ್ದು, ಸಂಬಂಧಿತ ಘಟಕಕ್ಕೆ ಈ ಮಾಹಿತಿಯನ್ನು ರವಾನಿಸಲಾಗುತ್ತದೆ. 

ಬಸ್ ಚಾಲಕರು, ಕಂಡಕ್ಟರ್ ಗಳು, ಪ್ರವಾಸಿ ಸ್ಥಳಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು, ನಗರದಲ್ಲಿಯ ಅಂಗಡಿಕಾರರು ವಿದ್ಯಾರ್ಥಿಗಳು ಮತ್ತು ಯುವಜನರ ಚಲನವಲನಗಳ ಬಗ್ಗೆ ಈ ಗುಂಪುಗಳಿಗೆ ಮಾಹಿತಿ ನೀಡಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಈ ಮಾಹಿತಿದಾರರು ಇಂತಹ ಸಂಘಟನೆಗಳ ಸದಸ್ಯರಾಗಿರುವುದಿಲ್ಲ ಎಂದು ಮಂಗಳೂರಿನ ಪೊಲೀಸ್ ಅಧಿಕಾರಿಯೋರ್ವರು ಹೇಳಿದರು.
 
ತಮ್ಮ ‘ಹಸ್ತಕ್ಷೇಪ’ದ ಬಳಿಕ ಬಲಪಂಥೀಯ ಗುಂಪುಗಳು ಶೇರ್ ಮಾಡಿಕೊಳ್ಳುವ ಸಂಭ್ರಮಾಚರಣೆಯ ಸಂದೇಶಗಳು ಈ ಘಟನೆಗಳಲ್ಲಿಯ ಇನ್ನೊಂದು ಸಾಮಾನ್ಯ ಅಂಶವಾಗಿದೆ. ‘ಇಂದು ಮುಂದುವರಿದ ಬಜರಂಗ ದಳದ ಕಾರ್ಯಾಚರಣೆ(ಗುರುವಾರ 01/04 ರಾತ್ರಿ). ಮುಸ್ಲಿಂ ವ್ಯಕ್ತಿಯೊಂದಿಗೆ ಪರಾರಿಯಾಗುತ್ತಿದ್ದ ಹಿಂದು ಮಹಿಳೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಳು. ಬಜರಂಗ ದಳವು ಪಂಪ್ ವೆಲ್ ಸರ್ಕಲ್ ಬಳಿ ಜೋಡಿಯನ್ನು ತಡೆದಿದೆ ’ ಇದು ಎ.1ರ ಘಟನೆಯ ಬಳಿಕ ವಾಟ್ಸ್ಆ್ಯಪ್ ನಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದ ಸಂದೇಶ.

ಇಂತಹ ಘಟನೆಗಳ ಬಳಿಕ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿಯೂ ಕೂಡ ಸಂದೇಶಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಬಲಪಂಥೀಯ ಗುಂಪುಗಳ ಕೃತ್ಯಗಳನ್ನು ಸಂಭ್ರಮಿಸಲಾಗುತ್ತದೆ. ಈ ಸಂದೇಶಗಳು ಮುಸ್ಲಿಂ ವ್ಯಕ್ತಿಗಳ ಜೊತೆಯಲ್ಲಿದ್ದ ಹಿಂದು ಮಹಿಳೆಯರನ್ನೂ ಅವಮಾನಿಸುತ್ತವೆ.
 
ಮಾರ್ಚ್ ನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವಿಭಿನ್ನ ಧರ್ಮಗಳಿಗೆ ಸೇರಿದ್ದ ಅಪ್ರಾಪ್ತ ವಯಸ್ಕ ಬಾಲಕ ಮತ್ತು ಬಾಲಕಿ ಜೊತೆಯಲ್ಲಿದ್ದುದನ್ನು ತಾವು ಪೊಲೀಸರಿಗೆ ತಿಳಿಸಿದ್ದಾಗಿ ಹಿಂದು ಜಾಗರಣ ವೇದಿಕೆಯ ಸದಸ್ಯರು ಹೇಳಿಕೊಂಡ ಬಳಿಕ ಅವರ ಮತ್ತು ಬಜರಂಗ ದಳ ಸದಸ್ಯರ ನಡುವೆ ಹೊಡೆದಾಟ ನಡೆದಿತ್ತು. ತಪ್ಪಿನ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ ಲಭಿಸಿರಲಿಲ್ಲವಾದರೂ ಅಂತರ್ಧರ್ಮೀಯ ಜೋಡಿಯನ್ನು ಪ್ರತ್ಯೇಕಿಸಲು ತಮ್ಮ ಹಸ್ತಕ್ಷೇಪ ನೆರವಾಗಿತ್ತು ಎಂದು ಎರಡೂ ಗುಂಪುಗಳು ವಾಟ್ಸ್ಆ್ಯಪ್ನಲ್ಲಿ ಘೋಷಿಸಿಕೊಂಡಿದ್ದವು.


‘ಲವ್ ಜಿಹಾದ್’ಶಬ್ದವು ಇದೇ ಪ್ರದೇಶದಲ್ಲಿ ತನ್ನ ಮೂಲವನ್ನು ಹೊಂದಿದೆ. ಬ್ರಿಟಿಷ್ ರ ಕಾಲದಲ್ಲಿ ಮಂಗಳೂರು ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿತ್ತು ಮತ್ತು 1956ರಲ್ಲಿ ರಾಜ್ಯಗಳ ಪುನರ್ರಚನೆಯೊಂದಿಗೆ ಈ ಪ್ರದೇಶದ ಅಂಗವಾಗಿದ್ದ ಕಾಸರಗೋಡು ಕೇರಳದ ಪಾಲಾಗಿತ್ತು ಮತ್ತು ಉಳಿದ ಭಾಗ ದಕ್ಷಿಣ ಕನ್ನಡ ಹೊಸದಾಗಿ ರಚನೆಯಾಗಿದ್ದ ಮೈಸೂರು ರಾಜ್ಯಕ್ಕೆ ಸೇರಿತ್ತು. ಉತ್ತರ ಕೇರಳದೊಂದಿಗೆ ಈ ಪ್ರದೇಶದ ನಂಟು ಇಂದಿಗೂ ಅಬಾಧಿತವಾಗಿದೆ ಮತ್ತು ಈ ಪ್ರದೇಶದ ನಿವಾಸಿಗಳ ನಡುವೆ ‘ಲವ್ ಜಿಹಾದ್’ನಂತಹ ಪರಿಕಲ್ಪನೆಗಳಿಗೆ ಕಾರಣಗಳಲ್ಲೊಂದಾಗಿದೆ. 

2009 ಸೆಪ್ಟೆಂಬರ್ ನಲ್ಲಿ ದಕ್ಷಿಣ ಕನ್ನಡದಲ್ಲಿಯ ಘಟನಾವಳಿಗಳೊಂದಿಗೆ ಗುರುತಿಸಿಕೊಂಡಿದ್ದ ಉತ್ತರ ಕೇರಳದಲ್ಲಿಯ ಘಟನಾವಳಿಗಳ ಕುರಿತು ವರದಿ ಮಾಡುವಾಗ ಮಂಗಳೂರಿನ ಸಂಜೆ ಪತ್ರಿಕೆಯೊಂದು ‘ಲವ್ ಜಿಹಾದ್ ’ಶಬ್ದವನ್ನು ಮೊದಲು ಹುಟ್ಟುಹಾಕಿತ್ತು. ಈ ಶಬ್ದ ಶೀಘ್ರವೇ ಆಕರ್ಷಣೆ ಪಡೆದುಕೊಂಡಿತ್ತು ಮತ್ತು ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿತ್ತು. ಶಬ್ದವನ್ನು ಬಳಸುವಾಗ ಅವು ಆರೋಪಗಳ ಸತ್ಯಾಸತ್ಯತೆಯನ್ನು ವಿವರವಾಗಿ ಪರಿಶೀಲಿಸುವ ಗೋಜಿಗೂ ಹೋಗಿರಲಿಲ್ಲ. 

ದ.ಕನ್ನಡ ಜಿಲ್ಲೆಯ ಮಹಿಳೆಯರನ್ನು ಇಸ್ಲಾಮಿಗೆ ಮತಾಂತರಿಸಲಾಗುತ್ತಿದೆ ಎಂಬ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆಗೊಳಿಸುವ ಮೂಲಕ ಹಿಂದು ಜನಜಾಗೃತಿ ಸಮಿತಿಯು ಈ ಶಬ್ದದ ಬಳಕೆಗೆ ಇನ್ನಷ್ಟು ಕುಮ್ಮಕ್ಕು ನೀಡಿತ್ತು. ಕರ್ನಾಟಕ ಮತ್ತು ಕೇರಳ ಪೊಲೀಸರಿಂದ ಜಂಟಿ ತನಿಖೆಗೆ ಆದೇಶಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವೊಂದು ಶಬ್ದವನ್ನು ಇನ್ನಷ್ಟು ಕಾನೂನುಬದ್ಧಗೊಳಿಸಿತ್ತು,ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿಐಡಿ ಪೊಲೀಸರ ತನಿಖೆಗೆ ‘ಲವ್ ಜಿಹಾದ್’ನ ಯಾವುದೇ ನಿರ್ದಿಷ್ಟ ನಿದರ್ಶನಗಳನ್ನು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ.

ಕೋಮು ಹಿಂಸಾಚಾರದ ಪ್ರತಿಯೊಂದೂ ಪ್ರಕರಣದ ದಾಖಲೆಗಳನ್ನು ಪೊಲೀಸರು ನಿರ್ವಹಿಸಿಲ್ಲವಾದರೂ ಸಾಮಾಜಿಕ ಕಾರ್ಯಕರ್ತ ಸುರೇಶ ಭಟ್ ಬಾಕ್ರಬೈಲ್ ಅವರು 2010ರಿಂದಲೂ ದ.ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಕೋಮು ಘಟನೆಗಳ ಪ್ರಕರಣಗಳನ್ನು ದಾಖಲಿಸಿದ್ದಾರೆ. 2021ರಲ್ಲಿ ಈವರೆಗೆ ಹಿಂದುತ್ವ ಗುಂಪುಗಳಿಂದ ಅನೈತಿಕ ಪೊಲೀಸ್ ಗಿರಿಯ 14 ಮತ್ತು ದ್ವೇಷಭಾಷಣದ 13 ಘಟನೆಗಳು ಸೇರಿದಂತೆ 51 ಕೋಮು ಘಟನೆಗಳನ್ನು ಅವರು ದಾಖಲಿಸಿದ್ದಾರೆ. 2010ರಿಂದ ಉಭಯ ಜಿಲ್ಲೆಗಳಲ್ಲಿ ಅನೈತಿಕ ಪೊಲೀಸ್ ಗಿರಿಯ 334 ಮತ್ತು 1298 ಕೋಮು ಘಟನೆಗಳನ್ನು ಅವರು ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿಯ ಯುವಕರು ಮತ್ತು ಯುವತಿಯರು ಎದುರಿಸುತ್ತಿರುವ ಸಂಕಷ್ಟವವನ್ನು ಬಾಕ್ರಬೈಲ್ ಅವರ ದಾಖಲೆಗಳು ತೋರಿಸುತ್ತಿವೆ. ತಾವು ವಿಭಿನ್ನ ಧರ್ಮಗಳಿಗೆ ಸೇರಿದ್ದೇವೆ ಮತ್ತು ಜೊತೆಯಾಗಿ ಕಾಣಿಸಿಕೊಂಡಿದ್ದೇವೆ ಎನ್ನುವುದನ್ನು ಬಿಟ್ಟರೆ ಅವರು ಗುಂಪುಗಳಿಗೆ ಗುರಿಯಾಗಲು ಬೇರೆ ಯಾವುದೇ ಕಾರಣಗಳು ಹೆಚ್ಚಾಗಿ ಕಂಡುಬಂದಿಲ್ಲ.

ಇಂತಹ ಹಿಂಸಾಚಾರಗಳಿಗೆ ಕಾರಣಕರ್ತರು ಹೆಚ್ಚಾಗಿ ಸಾಕಷ್ಟು ಗಳಿಕೆಯಿಲ್ಲದ ಪುರುಷರೇ ಆಗಿರುತ್ತಾರೆ ಮತ್ತು ಇಂತಹ ದಾಳಿಗಳ ಮೂಲಕ ಪ್ರಚಾರದಲ್ಲಿರಲು ಬಯಸಿರುವವರೇ ಆಗಿರುತ್ತಾರೆ, ಹೆಚ್ಚಿನ ಸಲ ತಮ್ಮ ಕೃತ್ಯಗಳಿಗಾಗಿ ಯಾವುದೇ ದಂಡನೆಯಿಲ್ಲದೆ ಅವರು ಪಾರಾಗುತ್ತಾರೆ ಎನ್ನುತ್ತಾರೆ ಕಾರ್ಯಕರ್ತೆ ವಿದ್ಯಾ ದಿನಕರ್.
 
‘ಲವ್ ಜಿಹಾದ್’ನ ನಿರ್ದಿಷ್ಟ ಪ್ರಕರಣಗಳಿಲ್ಲವಾದರೂ ಅದು ವಿವಿಧ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಸ್ಥಳವನ್ನು ನಿರ್ಬಂಧಿಸಿರುವ ದ.ಕನ್ನಡದಲ್ಲಿಯ ಧಾರ್ಮಿಕ ಗುಂಪುಗಳನ್ನು,‌ ಹೆಚ್ಚಾಗಿ ಹಿಂದುತ್ವ ಪರ ಗುಂಪುಗಳಿಗೆ ಯಾವುದೇ ಹಿಂಜರಿಕೆಯನ್ನುಂಟು ಮಾಡಿಲ್ಲ. ಜಿಲ್ಲೆಯಲ್ಲಿ ಧಾರ್ಮಿಕ ಗುಂಪುಗಳಿಂದ ಅನೈತಿಕ ಪೊಲೀಸ್ ಗಿರಿಯ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವಾದರೂ ಪ್ರತಿ ಕೆಲವು ತಿಂಗಳಿಗೊಮ್ಮೆ ಅವು ರಾಷ್ಟ್ರಮಟ್ಟದ ಸುದ್ದಿಗಳಾಗುತ್ತವೆ. ವೀಡಿಯೊಗಳು ಮತ್ತು ಫೋಟೊಗಳು ಪ್ರಸಾರವಾಗಲಿ ಇಲ್ಲದಿರಲಿ, ಅನೈತಿಕ ಪೊಲೀಸ್ ಗಿರಿಯು ಸಾಮಾನ್ಯವಾಗಿದೆ ಮತ್ತು ಇದಕ್ಕೆ ಯುವ ಅಂತರ್ಧರ್ಮೀಯ ಜೋಡಿಗಳು ಮತ್ತು ಸ್ನೇಹಿತರು ಬೆಲೆಗಳನ್ನು ತೆರುತ್ತಿದ್ದಾರೆ.

ಕೃಪೆ: thenewsminute.com

thenewsminute.com ಗೆ ಚಂದಾದಾರರಾಗಿ ಬೆಂಬಲಿಸಲು ಈ ಲಿಂಕ್ ಕ್ಲಿಕ್ ಮಾಡಿ. 

https://pages.razorpay.com/tnm-support

Writer - ಪ್ರಜ್ವಲ್‌ ಭಟ್‌, thenewsminute.com

contributor

Editor - ಪ್ರಜ್ವಲ್‌ ಭಟ್‌, thenewsminute.com

contributor

Similar News